Advertisement

ಚುನಾವಣೆ ಪರಿಣಾಮ: ಕಾಂಗ್ರೆಸ್‌ ಇಬ್ಭಾಗ? ಸಿದ್ದು-ಡಿಕೆಶಿ ಎದುರು ಖರ್ಗೆ ಏಕಾಂಗಿ ?

01:53 AM Jun 04, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್‌ ಒಂದು ರೀತಿ “ಇಬ್ಭಾಗ’ ವಾದಂತಾಗಿದೆ. ಬಣ ರಾಜಕೀಯದಿಂದ ನಲುಗಿದ್ದ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕರ ಪ್ರತಿಷ್ಠೆಯಿಂದಾಗಿ ಈಗ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್‌ ಒಂದು ಕಡೆ ಯಾದರೆ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರು ಮತ್ತೊಂದು ಕಡೆ ಎಂಬಂತಾಗಿದೆ.

Advertisement

ಜೆಡಿಎಸ್‌ ಬೆಂಬಲಿಸುವ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಹೈಕಮಾಂಡ್‌ ಮಟ್ಟದಲ್ಲೂ ಒಲವು ವ್ಯಕ್ತವಾಗದಿರುವುದು ಹಿರಿಯ ನಾಯಕರಲ್ಲಿ ಅಸಮಾಧಾನ ತರಿಸಿದೆ. ಈಗಲೇ ಹೀಗಾದರೆ ಮುಂದಿನ ವಿಧಾನಸಭೆ ಚುನಾ ವಣೆಯ ಟಿಕೆಟ್‌ ಹಂಚಿಕೆ ಸಮಯದಲ್ಲಿ ಇವರ ಮಾತಿಗೆ ಎಷ್ಟರ ಮಟ್ಟಿಗೆ ಬೆಲೆ ಸಿಗುತ್ತದೆ ಎಂಬ ಪ್ರಶ್ನೆ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್‌ ನಾಯಕರು ಕುಪೇಂದ್ರ ರೆಡ್ಡಿ ಬೆಂಬಲಿಸುವ ವಿಚಾರದಲ್ಲಿ ತಮ್ಮ ಪರ ನಿಲ್ಲದ ಬಗ್ಗೆ ಹಾಗೂ ಸ್ಪಷ್ಟ ಸೂಚನೆ ನೀಡದ ಬಗ್ಗೆ ಖರ್ಗೆ ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ರಾಜ್ಯದ ಮಟ್ಟಿಗೆ ಯಾವುದೇ ನಿರ್ಧಾರದಲ್ಲೂ ಇಡೀ ಪಕ್ಷವನ್ನು ಇಬ್ಬರೇ ಹೈಜಾಕ್‌ ಮಾಡಿದಂತಾಗಿದೆ ಎಂಬ ಸಂದೇಶ ರವಾನೆಯಾದರೆ ಕಷ್ಟ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಸಮರ್ಥನೆ
ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ನಮ್ಮ ಮತ ಉಳಿಸಿಕೊಳ್ಳಲು ಈ ಹಂತದಲ್ಲಿ ನಾವು ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವುದು ಸರಿಯಿದೆ. ಜೆಡಿಎಸ್‌ಗೆ ಬೆಂಬಲಿಸುವುದರಿಂದ ರಾಜಕೀಯವಾಗಿ ಯಾವುದೇ ಲಾಭ ಆಗುತ್ತಿರಲಿಲ್ಲ. ಬದಲಿಗೆ ನಷ್ಟವೇ ಹೆಚ್ಚು ಎಂದು ಹೈಕಮಾಂಡ್‌ ಮುಂದೆ ಸಮರ್ಥಿಸಿಕೊಂಡಿದ್ದಾರೆಂದು ಹೇಳಲಾಗಿದೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ಹಂತದಲ್ಲೂ ಬಿಜೆಪಿಗೆ ಸಹಕಾರಿಯಾಗುವ ತೀರ್ಮಾನವನ್ನೇ ಜೆಡಿಎಸ್‌ ಕೈಗೊಳ್ಳುತ್ತ ಬಂದಿದೆ. ಮೇಕೆದಾಟು, ಅಗತ್ಯ ವಸ್ತುಗಳ ಬೆಲೆ ಏರಿಕೆ ಹೋರಾಟ, ಶೇ.40 ಕಮಿಷನ್‌ ಆರೋಪ ವಿಚಾರದಲ್ಲಿ ಕಾಂಗ್ರೆಸ್‌ ಜತೆ ನಿಲ್ಲುವುದಿರಲಿ ಉಗ್ರ ಟೀಕೆ ಮೂಲಕ ಬಿಜೆಪಿಗೆ ಆಹಾರ ಒದಗಿಸುವ ಕೆಲಸ ಮಾಡಿತು ಎಂದು ಸೋನಿಯಾ ಗಾಂಧಿ ಸೂಚನೆ ಮೇರೆಗೆ ತಮ್ಮೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಆರೋಪ ಪಟ್ಟಿಯನ್ನೇ ಸಲ್ಲಿಸಿದರು.

Advertisement

ಜೆಡಿಎಸ್‌ನ ಐದು ಮತ ಬೀಳುತ್ತಾ?
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ತಪ್ಪಿಸುವಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಜೋಡಿ ಯಶಸ್ವಿಯಾಗಿ ಪ್ರಾರಂಭಿಕ ಮೇಲುಗೈ ಸಾಧಿಸಿದ್ದಷ್ಟೇ ಅಲ್ಲ. ಜೆಡಿಎಸ್‌ನ ಐದು ಮತ ಕಾಂಗ್ರೆಸ್‌ ಅಭ್ಯರ್ಥಿಗೆ ಸಿಗಲಿದೆ ಎಂದು ಹೈಕಮಾಂಡ್‌ಗೆ ತಿಳಿಸಿದ್ದಾರೆ.

ಮುಖಂಡರಾದ ಜಿ.ಟಿ.ದೇವೇಗೌಡ, ಶ್ರೀನಿವಾಸ ಗೌಡ, ಗುಬ್ಬಿ ವಾಸು ಸಹಿತ ಹಲವರನ್ನು ಇಬ್ಬರೂ ಗುರುವಾರ ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಸಂಪರ್ಕಿಸಿ ಭರವಸೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್‌ ಮತಗಳು ಅತ್ತಿತ್ತ ಸುಳಿಯದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇವರ ಮೇಲಿದೆ.

-ಎಸ್‌. ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next