ನವದೆಹಲಿ : ದೇಶದ ರಾಜಕೀಯದ ದಿಕ್ಸೂಚಿ ಎಂದು ಪರಿಗಣಿಸಲಾದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು,ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ, ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವವಾಗಿ ಗೆದ್ದು ಅಧಿಕಾರಕ್ಕೆ ಬಂದು ಹೊಸ ಭರವಸೆ ಮೂಡಿಸಿದೆ.
ಉತ್ತರಪ್ರದೇಶದಲ್ಲಿ ಯೋಗಿಗೆ ಮತ್ತೆ ಸಿಎಂ ಆಗುವ ಯೋಗ
403 ಸದಸ್ಯ ಬಲದ ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದ್ದು, ಮಿತ್ರ ಪಕ್ಷಗಳು ಹಲವು ಸ್ಥಾನಗಳಲ್ಲಿ ಗೆದ್ದಿವೆ. ಬಿಜೆಪಿ 252 ಸ್ಥಾನ ಗೆದ್ದಿದ್ದು, ಪ್ರಮುಖ ವಿಪಕ್ಷ ಅಖಿಲೇಶ್ ಯಾದವ್ ಅವರ ನಾಯಕತ್ವದ ಸಮಾಜವಾದಿ ಪಕ್ಷ 114 ಸ್ಥಾನ ಗೆದ್ದಿದೆ. ಅಪ್ನಾ ದಳ(ಸೋನೆಲಾಲ್ ) 11 , ಬಿಎಸ್ ಪಿ ಕೇವಲ ಒಂದು ಸ್ಥಾನ ಗೆದ್ದಿದ್ದು ಎಂದೂ ಕಂಡರಿಯದ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಭಾರಿ ಪ್ರಚಾರ ಕೈಗೊಂಡರೂ ಕೇವಲ 2 ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ. ಜನಸತ್ತಾ ದಳ ಡೆಮಾಕ್ರಟಿಕ್ 2 ಸ್ಥಾನ ಗೆದ್ದಿದೆ. ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳ 7 ಸ್ಥಾನ ಗೆದ್ದು ಗಮನ ಸೆಳೆದಿದೆ. ಎಸ್ ಪಿ ಮಿತ್ರಪಕ್ಷ ಆರ್ ಎಲ್ ಡಿ 8 ಸ್ಥಾನಗಳನ್ನು ಗೆದ್ದಿದೆ. ಸುಹೇಲ್ದೇವ್ ಭಾರತೀಯ ಸಮಾಜ 6 ಸ್ಥಾನಗಳನ್ನು ಗೆದ್ದಿದೆ.
ಪಂಜಾಬ್ ಆಮ್ ಆದ್ಮಿಗೆ ಭಗವಂತನ ಕೃಪೆ
ಸಿಖ್ಭರ ನಾಡು ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ದೈತ್ಯ ಶಕ್ತಿಯಾಗಿ ಹೊರ ಹೊಮ್ಮಿದೆ. 117 ಸ್ಥಾನಗಳ ಪೈಕಿ ಭಗವಂತ್ ಮಾನ್ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದ ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡಿದೆ. ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಸಿಎಂ ಚರಣ್ ಜಿತ್ ಸಿಂಗ್ ಚೆನ್ನಿ, ನವಜೋತ್ ಸಿಂಗ್ ಸಿಧು ಸೇರಿ ಘಟಾನುಘಟಿ ನಾಯಕರುಗಳೆಲ್ಲ ಸೋಲು ಅನುಭವಿಸಿದ್ದಾರೆ. ಬಿಜೆಪಿ ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಶಿರೋಮಣಿ ಅಕಾಲಿ ದಳ 3, ಬಿಎಸ್ ಪಿ 1, ಪಕ್ಷೇತರ 1 ಸ್ಥಾನ ಪಡೆದುಕೊಂಡಿದ್ದಾರೆ.
ಉತ್ತರಾಖಂಡದದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ, ಸಿಎಂ ಗೆ ಆಘಾತ
70 ಸ್ಥಾನಗಳ ಪೈಕಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಭರ್ಜರಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬಂದಿದೆ. ಅಚ್ಚರಿಯೆಂದರೆ ಮತದಾರರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸೋಲು ಉಣಿಸಿದ್ದಾರೆ. ಸದ್ಯ ಯಾರು ಮುಂದಿನ ಸಿಎಂ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದು ಪ್ರಮುಖ ವಿಪಕ್ಷವಾಗಿದೆ. ಬಿಎಸ್ ಪಿ 2, ಪಕ್ಷೇತರರು 2 ಸ್ಥಾನಗಳನ್ನು ಗೆದ್ದಿದ್ದಾರೆ.
ಗೋವಾದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ
40 ಸದಸ್ಯ ಬಲದ ಗೋವಾ ದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿದ್ದು, ಸರಕಾರ ರಚಿಸಲಿದೆ. ಬಿಜೆಪಿಗೆ ಮೂವರು ಇತರರು ಈಗಾಗಲೇ ಬೆಂಬಲ ವ್ಯಕ್ತಪಡಿಸಿದ್ದು, ಪ್ರಮೋದ್ ಸಾವಂತ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಕಾಂಗ್ರೆಸ್ 11 , ಆಮ್ ಆದ್ಮಿ ಪಕ್ಷ 2 , ಪಕ್ಷೇತರರು 3 , ಎಂಜಿಪಿ 2 ಮತ್ತು ಆರ್ ಜಿಪಿ 1 ಸ್ಥಾನ ಗೆದ್ದಿದೆ.
ಮಣಿಪುರದಲ್ಲಿ ಬಿಜೆಪಿಗೆ ಸಲಾಂ
60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಸಂಯುಕ್ತ ಜನತಾ ದಳ 6 ಸ್ಥಾನ, ಕಾಂಗ್ರೆಸ್ 4, ಕುಕಿ ಪೀಪಲ್ಸ್ ಮೈತ್ರಿಕೂಟ 2 , ನಾಗಾ ಪೀಪಲ್ಸ್ ಫ್ರಂಟ್ 5 , ಎಂಪಿಪಿ 8 ಮತ್ತು ಪಕ್ಷೇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ. ಬಿರೇನ್ ಸಿಂಗ್ ಅವರು ಮತ್ತೆ ಸಿಎಂ ಆಗಲಿದ್ದಾರೆ.