Advertisement

20ರಂದು ಪಾಲಿಕೆ ಗದ್ದುಗೆಗೆ ಫೈಟ್‌

09:45 AM Nov 07, 2021 | Team Udayavani |

ಕಲಬುರಗಿ: ಚುನಾವಣೆ ನಡೆದು ಬರೊಬ್ಬರಿ ಎರಡು ತಿಂಗಳ ನಂತರ ಮಹಾನಗರ ಪಾಲಿಕೆ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಯ ಚುನಾವಣೆ ಮುಹೂರ್ತ ನಿಗದಿಯಾಗಿದೆ. ಇದೇ ನವೆಂಬರ್‌ 20ರಂದು ಮೇಯರ್‌, ಡೆಪ್ಯೂಟಿ ಮೇಯರ್‌ ಚುನಾವಣೆ ದಿನಾಂಕ ಅಂತಿಮಗೊಳಿಸಿ ಪ್ರಾದೇಶಿಕ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

Advertisement

ಕಳೆದ ಸೆಪ್ಟೆಂಬರ್‌ 3ರಂದು ಪಾಲಿಕೆಗೆ ಚುನಾವಣೆ ನಡೆದು ಸೆ. 6ರಂದು ಮತ ಎಣಿಕೆಯಾಗಿ ಫ‌ಲಿತಾಂಶ ಪ್ರಕಟಗೊಂಡಿತ್ತು. ಫ‌ಲಿತಾಂಶ ಪ್ರಕಟಗೊಂಡು ಎರಡ್ಮೂರು ವಾರ ದೊಳಗೆ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದರಿಂದ ಮೇಯರ್‌-ಉಪಮೇಯರ್‌ ಹಾಗೂ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಲು ಸ್ವಲ್ಪ ವಿಳಂಬವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಲಿಕೆಯ ಒಟ್ಟಾರೆ 55 ವಾರ್ಡ್‌ ಸ್ಥಾನಗಳಲ್ಲಿ ಅಂತಿಮವಾಗಿ ಕಾಂಗ್ರೆಸ್‌ 27 ಹಾಗೂ ಬಿಜೆಪಿ 23 ಹಾಗೂ ಜೆಡಿಎಸ್‌ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಒಂದು ಸ್ಥಾನದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಗೆಲುವು ಸಾ ಧಿಸಿದ್ದಾರೆ. ಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ವಾಗಿದ್ದರಿಂದ ಫ‌ಲಿತಾಂಶ ಪ್ರಕಟಗೊಂಡ ಹತ್ತು ದಿನಗಳ ಕಾಲ ಗದ್ದುಗೆ ಗುದ್ದಾಟಕ್ಕಾಗಿ ಕಸರತ್ತು ನಡೆದು ರಾಜ್ಯದಾದ್ಯಂತ ಭಾರಿ ಸದ್ದು ಮಾಡಿತ್ತು. ಮುಖ್ಯಮಂತ್ರಿಯಿಂದ ಹಿಡಿದು ರಾಜ್ಯಸಭೆ ವಿರೋಧ ಪಕ್ಷದ ನಾಯಕರ ವರೆಗೂ ಹಾಗೂ ಇನ್ನೂ ಅನೇಕ ಘಟಾನುಘಟಿ ನಾಯಕರುಗಳು ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಪರಿಣಾಮ ಕಲಬುರಗಿ ಮೇಯರ್‌-ಉಪಮೇಯರ್‌ ಚುನಾವಣೆಗೆ ಎಲ್ಲಿಲ್ಲದ ರಂಗು ಮೂಡಿದೆ.

ಚುಕ್ಕಾಣಿ ಯಾರ ಕೈಗೆ?

ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು 32 ಸದಸ್ಯರ ಬೆಂಬಲ ಬೇಕು. ಹೀಗಾಗಿ ಮ್ಯಾಜಿಕ್‌ ಸಂಖ್ಯೆ ತಲುಪಲು ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ತೆರೆಮರೆಯಲ್ಲಿ ತಂತ್ರಗಾರಿಕೆ ನಡೆದಿವೆ. ಯಾರೇ ಆಗಲಿ ಅಧಿಕಾರಕ್ಕೆ ಬರಬೇಕೆಂದರೆ ಜೆಡಿಎಸ್‌ ಪಕ್ಷದ ಬೆಂಬಲ ಬೇಕೆಬೇಕು. ಹೀಗಾಗಿ ಜೆಡಿಎಸ್‌ ಪಾತ್ರವೇ ನಿರ್ಣಾಯಕವಾಗಿದೆ. ಅಲ್ಲದೇ ಈ ಪಕ್ಷವೇ ಕಿಂಗ್‌ ಮೇಕರ್‌ ಆಗಿದೆ. ಜೆಡಿಎಸ್‌ ಪಕ್ಷದ ಬೆಂಬಲ ತಮಗೆ ಸಿಗಲಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷ ತನ್ನದೇಯಾದ ನಿಟ್ಟಿನಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದೆ. ಒಟ್ಟಾರೆ ಇನ್ಮುಂದೆ ಮತ್ತೂಂದು ಸುತ್ತಿನಲ್ಲಿ ಚುನಾವಣೆ ಕಸರತ್ತುಗಳು ನಡೆಯಲಿವೆ.

Advertisement

ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿದ್ದರಿಂದ ಚುನಾವಣೆ ದಿನದಂದು ಚುನಾವಣೆ ನಡೆಯುವ ಸ್ಥಳದಲ್ಲಿ 144ಕಲಂ ಜಾರಿ ಮಾಡಲು ಸಹ ಚುನಾವಣಾ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಮೇಯರ್‌-ಉಪಮೇಯರ್‌ ಚುನಾವಣೆ ಹಿಂದೆಂದಿಗಿಂತಲೂ ಬಿರುಸಿನಿಂದ ಕೂಡಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ:ಚಿರಂಜೀವಿ ದೊಡ್ಡಪ್ಪ ಅಪ್ಪ ಭಾವಚಿತ್ರದ ಮೈ ಸ್ಟಾಂಪ್‌ ಬಿಡುಗಡೆ

ಮತದಾರರ ವಿವರ

ಪಾಲಿಕೆಯಲ್ಲಿ ಚುನಾಯಿತ 55 ಪಾಲಿಕೆ ಸದಸ್ಯರು ಸೇರಿ ಒಟ್ಟಾರೆ 62 ಸದಸ್ಯರ ಬಲಾಬಲವಿದೆ. ಪಾಲಿಕೆ ಸದಸ್ಯರು 55 ಸದಸ್ಯರ ಜತೆ ಇಬ್ಬರು ಸಂಸದರು, ಮೂವರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್‌ ಸದಸ್ಯರನ್ನು ಒಳಗೊಂಡಂತೆ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ, ಉತ್ತರ ಮತಕ್ಷೇತ್ರದ ಶಾಸಕಿ ಖನೀಜಾ ಫಾತೀಮಾ, ಸಂಸದ ಡಾ| ಉಮೇಶ ಜಾಧವ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ ಹಾಗೂ ಶಶೀಲ್‌ ನಮೋಶಿ ಮತದಾನದ ಹಕ್ಕು ಹೊಂದಿದ್ದಾರೆ.

ಮೇಯರ್‌ ಯಾರು?

ಮೇಯರ್‌ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದೆ. ಉಪಮೇಯರ್‌ ಹಿಂದುಳಿದ ವರ್ಗ ಬ ವರ್ಗಕ್ಕೆ ಮೀಸಲಾಗಿದೆ. ಮೇಯರ್‌ ಸ್ಥಾನಕ್ಕೆ ಬಿಜೆಪಿಯಲ್ಲಿ ಹೆಚ್ಚು ಹೆಸರುಗಳು ಮುಂಚೂಣಿಗೆ ಬರುತ್ತಿವೆ. ಅದರಲ್ಲೂ ಕಲಬುರಗಿ ದಕ್ಷಿಣ ಹಾಗೂ ಉತ್ತರ ಕ್ಷೇತ್ರ ಎಂಬ ಪೈಪೋಟಿಯೂ ನಡೆದಿದೆ. ಬಿಜೆಪಿಯಿಂದ ಮೇಯರ್‌ ಸ್ಥಾನಕ್ಕೆ ವಾರ್ಡ್‌ ನಂ 5ರ ಸದಸ್ಯೆ ಗಂಗಮ್ಮಬಸವರಾಜ ಮುನ್ನಳ್ಳಿ, ವಾರ್ಡ್‌ ನಂ. 6ರ ಸದಸ್ಯೆ ಅರುಣಾದೇವಿ ಲಿಂಗನವಾಡಿ ಹಾಗೂ ವಾರ್ಡ್‌ 52ರ ಸದಸ್ಯೆ ಶೋಭಾ ದೇಸಾಯಿ, ವಾರ್ಡ್‌ 51 ಪಾರ್ವತಿ ದೇವದುರ್ಗ ಹಾಗೂ ವಾರ್ಡ್‌ 55 ರ ಸದಸ್ಯೆ ಅರ್ಚನಾ ಬವಸರಾಜ ಬಿರಾಳ ಹೆಸರುಗಳು ಕೇಳಿ ಬರುತ್ತಿವೆ. ಆದರೆ ಕಾಂಗ್ರೆಸ್‌ನಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಕುರಿತಾಗಿ ಚರ್ಚೆ ನಡೆದಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next