Advertisement
ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಈ ರೀತಿ ಸರಿಯಾಗಿ 30 ದಿನ ಗಳ ಕಾಲ ಚುನಾವಣ ಪ್ರಕ್ರಿಯೆಗಳು ನಡೆಯುವುದರಿಂದ ಇದೊಂದು “ಚುನಾವಣ ಮಾಸ’ ಆಗಿರಲಿದೆ. ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಎ. 14ರಂದು ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು 16ರಂದು ರವಿವಾರ ರಜಾ ದಿನವಾಗಿರುವುದರಿಂದ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಸಲು ಕೇವಲ 6 ದಿನ ಮಾತ್ರ ಸಮಯ ಸಿಗಲಿದೆ.
ಮಣಿಪಾಲ: ವಿಧಾನಸಭೆ ಚುನಾವಣೆಯ ಮೊದಲ ಹಂತವಾಗಿ ನಾಮಪತ್ರ ಸಲ್ಲಿಕೆ ಗುರುವಾರ ಆರಂಭ ಗೊಳ್ಳಲಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳೂ ಸಿದ್ಧತೆ ನಡೆಸಿವೆ.
Related Articles
Advertisement
ಕಾಂಗ್ರೆಸ್ ಮೊದಲ ಪಟ್ಟಿ ಯನ್ನು ಮಾ. 25ರಂದೇ ಬಿಡುಗಡೆ ಮಾಡಿ ಎಲ್ಲರಿಗಿಂತಲೂ ಮೊದಲೇ ಪ್ರಚಾರ ಆರಂಭಿಸಿತ್ತು. ಅನಂತರ ಎರಡನೇ ಪಟ್ಟಿ ಎ. 6ರಂದು ಬಿಡುಗಡೆ ಮಾಡಿದರೂ ಕರಾವಳಿಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ದ.ಕ. ಜಿಲ್ಲೆಯ ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಪುತ್ತೂರು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಿಸಿಲ್ಲ. 3ನೇ ಪಟ್ಟಿ ಗುರುವಾರ ಪ್ರಕಟವಾಗುವ ಸಂಭವವಿದೆ.
ಕರಾವಳಿಯಲ್ಲಿ ಎಲ್ಲರಿಗಿಂತ ಮೊದಲು ಪ್ರಚಾರಕ್ಕೆ ಚಾಲನೆ ನೀಡಿದ್ದ ಕಾಂಗ್ರೆಸ್ ಈಗ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗದೆ ಹಿಂದೆ ಬಿದ್ದಿದೆ. ಇದರ ನಡುವೆ ಬಿಜೆಪಿ ಟಿಕೆಟ್ ಘೋಷಣೆಯಾದ ಮರುದಿನವೇ 12 ಕ್ಷೇತ್ರಗಳಲ್ಲೂ ಪ್ರಚಾರದ ಹವಾ ಸೃಷ್ಟಿಸಿದೆ.
ಟಿಕೆಟ್ ವಿಳಂಬವಾದಷ್ಟು ಆಯಾ ಪಕ್ಷಗಳ ಪ್ರಚಾರಕ್ಕೆ ಕಡಿಮೆ ಅವಧಿ ದೊರಕಿ ಪ್ರಚಾರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಅಧಿಕವಾಗಿದೆ.
ಈ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿತ ಕೆಲವರು ಅಸಮಾ ಧಾನಗೊಂಡಿದ್ದು, ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಆದರೆ ಇದ್ಯಾವುದೂ ಈಗ ಅಂತಿಮವಾಗಿಲ್ಲ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಎ. 20ರ ವೇಳೆಗೆ ಒಂದು ಹಂತದ ಕಣ ಚಿತ್ರಣ ಲಭ್ಯವಾಗಲಿದೆ. ಎ. 24 ನಾಮಪತ್ರ ಹಿಂದೆಗೆತಕ್ಕೆ ಕೊನೆಯ ದಿನವಾಗಿದ್ದು, ಅಂದು ಕಣದ ಸ್ಪಷ್ಟ ಚಿತ್ರಣ ರೂಪುಗೊಳ್ಳಲಿದೆ.
ಅಭ್ಯರ್ಥಿ ಸುಳಿವಿಲ್ಲ !ನಾಮಪತ್ರ ಸಲ್ಲಿಕೆ ಇಂದು ಆರಂಭವಾಗುತ್ತಿದ್ದರೂ ಇನ್ನೂ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗದಿರುವುದು ಆ ಪಕ್ಷದ ಕಾರ್ಯಕರ್ತರಲ್ಲಿ ತಳಮಳ ಸೃಷ್ಟಿಸಿದೆ.
ಕಾರ್ಕಳ ಕ್ಷೇತ್ರದಿಂದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ತನಗೆ ಟಿಕೆಟ್ ಖಚಿತ ಎಂದು ಹೇಳುತ್ತಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿಯವರ ಅಭಯವೂ ಇದೆ. ಗುತ್ತಿಗೆದಾರ, ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರೂ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ದಕ್ಷಿಣದಿಂದ ಜೆ. ಆರ್.ಲೋಬೊ, ಐವನ್ ಡಿಸೋಜಾ ಮತ್ತು ಬಿಲ್ಲವ ಮುಖಂಡ ಪದ್ಮರಾಜ್ ಆರ್. ಅವರ ನಡುವೆ ಟಿಕೆಟ್‌ಗಾಗಿ ನಿಕಟ ಸ್ಪರ್ಧೆ ಇದೆ. ಮಂಗಳೂರು ಉತ್ತರದಲ್ಲಿ ಇನಾಯತ್ ಅಲಿ ಮತ್ತು ಮೊದಿನ್ ಬಾವಾ ನಡುವೆ ಸ್ಪರ್ಧೆ ಇದ್ದರೆ, ಪುತ್ತೂರಿನಲ್ಲಿ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಟಿಕೆಟ್‌ಗಾಗಿ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಈಗಾಗಲೇ ದ.ಕ.ದಲ್ಲಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್‌ನಿಂದ ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿದರೆ ಮಂಗಳೂರು ದಕ್ಷಿಣದಲ್ಲಿ ಮಾಜಿ ಮೇಯರ್ ಕವಿತಾ ಸನಿಲ್ ಅವರ ಹೆಸರು ಮುನ್ನೆಲೆಗೆ ಬರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.