Advertisement

ಟಿಕೆಟ್‌ ತಂದ್ರೆ ನಾವು ಬಸನಗೌಡ ಬಾದರ್ಲಿಗೆ ಜೈ!

05:54 PM Apr 12, 2022 | Team Udayavani |

ಸಿಂಧನೂರು: ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ನಡೆಯುತ್ತಿರುವ ಕಾಂಗ್ರೆಸ್‌ ರಾಜಕೀಯ ಬೆಳವಣಿಗೆಯಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಂದಿನ ಅಭ್ಯರ್ಥಿ ವಿಷಯದಲ್ಲಿ ಒಳ ಒಪ್ಪಂದ, ವೈಯಕ್ತಿಕ ಸಂಬಂಧಗಳು ಸದ್ದು ಮಾಡಲಾರಂಭಿಸಿವೆ.

Advertisement

ರಾಜ್ಯ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಪಟ್ಟು ಹಿಡಿದ ಬೆನ್ನಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿದ ಬಳಿಕ ರಾಜಕೀಯ ಚರ್ಚೆ ತೀವ್ರಗೊಂಡಿದೆ.

ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಾದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ರಾಜಕೀಯ ಇತಿಹಾಸ ಕಾಂಗ್ರೆಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಾರ್ವತ್ರಿಕವಾಗಿ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್‌ ಪಕ್ಷದ ಪಾಳಯದಲ್ಲಿ ಬಸನಗೌಡ ಬಾದರ್ಲಿ ಪ್ರಬುದ್ಧ ಪಟ್ಟುಗಳನ್ನು ಪ್ರಯೋಗಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಏನಿದು ಬೆಳವಣಿಗೆ?: ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಸಂಬಂಧಿಕರು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದೇ ನಿಟ್ಟಿನಲ್ಲಿ ಬಸನಗೌಡ ಬಾದರ್ಲಿ ಶರವೇಗದಲ್ಲಿ ಬೆಳೆಯುವುದರ ಜತೆಗೆ ಹೊಸತರ ರಾಜಕೀಯ ಪಟ್ಟುಗಳನ್ನು ಹಿರಿಯ ನಾಯಕರಿಗೆ ಮನದಟ್ಟು ಮಾಡಿಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಟ್ಟಿಯೂ ಕೂಡ ಇದೇ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ ಎಂದೇ ಹೇಳಲಾಗುತ್ತಿದೆ.

ಟಿಕೆಟ್‌ ತಂದ್ರೆ ನಿಮಗೆ ಬೆಂಬಲ: ಕಾಂಗ್ರೆಸ್‌ನೊಳಗೆ ಇರುವ ರಾಜಕೀಯ ನಾಯಕರು ನೀಡಿರುವ ಆಶ್ವಾಸನೆಗಳು ಕೂಡ ಬಸನಗೌಡ ಬಾದರ್ಲಿಗೆ ಶಕ್ತಿ ನೀಡಲಾರಂಭಿಸಿವೆ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ ಬೆಂಬಲಿಸುವುದಾಗಿ ದೂರದ ಸಂಬಂಧಿಗಳು, ಬಂಧು ಬಳಗ ಕೈಜೋಡಿಸಿದೆ. ಆಂತರಿಕವಾಗಿ ನಡೆಯುತ್ತಿರುವ ಈ ಬೆಳವಣಿಗೆ ಭವಿಷ್ಯದಲ್ಲಿ ರಾಜಕೀಯ ಇತಿಹಾಸವನ್ನೇ ಬದಲಿಸುವ ಮುನ್ಸೂಚನೆ ದಟ್ಟವಾಗಿವೆ. ಮಾಜಿ ಶಾಸಕ ಹಂಪನಗೌಡರ ಪಾಳಯದಲ್ಲಿರುವವರು ಪರೋಕ್ಷವಾಗಿ ಈ ರೀತಿ ಹುರಿದುಂಬಿಸುತ್ತಿರುವ ಪರಿಣಾಮವೇ ದೊಡ್ಡ ರಾದ್ಧಾಂತ ಸೃಷ್ಟಿಸಿದೆ. ಟಿಕೆಟ್‌ ತಂದರೆ, ನಿಮಗೆ ಬೆಂಬಲ ನೀಡುತ್ತೇವೆಂಬ ವಾಗ್ಧಾನ ಬಸನಗೌಡ ಬಾದರ್ಲಿಗೆ ದೊಡ್ಡ ಬಲ ಒದಗಿಸಿದೆ.

Advertisement

ಬುದ್ಧಿ ಹೇಳಿದ ಬಸನಗೌಡ

ಬಾದರ್ಲಿ ಹಿರಿಯ ಮುಖಂಡರು ಈಗಾಗಲೇ ಬಸನಗೌಡ ಬಾದರ್ಲಿ ಅವರನ್ನು ಭೇಟಿ ಮಾಡಿ, ಇದೊಂದು ಸಲ ಹಂಪನಗೌಡ ಬಾದರ್ಲಿ ಅವರಿಗೆ ಅವಕಾಶ ಕೊಡಬೇಕೆಂದು ಮನವಿ ಮಾಡಲಾರಂಭಿಸಿದ್ದಾರೆ. ಇದ್ಯಾವುದಕ್ಕೂ ಒಪ್ಪದ ಬಸನಗೌಡ ಬಾದರ್ಲಿ, ಹಿರಿಯ ನಾಯಕರಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಮಾಜಿ ಶಾಸಕ ಹಂಪನಗೌಡರೇ ಕಾಂಗ್ರೆಸ್‌ ಪಕ್ಷ ತೊರೆಯಲು ತಯಾರಿಸಿ ನಡೆಸಿದ್ದಾರೆಂಬ ಊಹಾಪೋಹ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ

ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು ನಿಜ. ಹಂಪನಗೌಡ ಬಾದರ್ಲಿ ಅವರು ಪಕ್ಷ ಬಿಡಲ್ಲ. ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಬಸವರಾಜ ಹಿರೇಗೌಡರನ್ನು ಬೇಕಾದ್ರೆ, ಕೇಳಿ, ಅವರೇ ಸ್ಪಷ್ಟಪಡಿಸುತ್ತಾರೆ. -ಭೀಮನಗೌಡ ನೆಟೆಕಲ್‌, ಕಾಂಗ್ರೆಸ್‌ ಹಿರಿಯ ಮುಖಂಡ, ಗೋರೆಬಾಳ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next