Advertisement

ಚುನಾವಣೆ ವಿಳಂಬ: ಸರ್ಕಾರಕ್ಕೆ 5 ಲಕ್ಷ ರೂ. ದಂಡ

09:53 PM Dec 14, 2022 | Team Udayavani |

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ವಿಚಾರದಲ್ಲಿ ಒಂದಲ್ಲ ಒಂದು ಸಬೂಬು ಹೇಳಿ ಪದೇ ಪದೆ ಕಾಲ ಸಾಗಹಾಕುತ್ತಿರುವ ಸರ್ಕಾರ ಬುಧವಾರ ಹೈಕೋರ್ಟ್‌ನಲ್ಲಿ ತೀವ್ರ ಮುಜುಗರ ಅನುಭವಿಸಿದೆ. ಮಾತ್ರವಲ್ಲ, 5 ಲಕ್ಷ ರೂ. ದಂಡವನ್ನೂ ಹಾಕಿಸಿಕೊಂಡಿದೆ!

Advertisement

ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಬರೋಬ್ಬರಿ 24 ವಾರಗಳ ಕಾಲಾವಕಾಶ ತೆಗೆದುಕೊಂಡಿದ್ದರೂ, ಸರ್ಕಾರ ಒಂದಿಂಚೂ ಮುಂದಕ್ಕೆ ಹೋಗಿಲ್ಲ. ಸರ್ಕಾರ “ಬಸವನಹುಳು’ ರೀತಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೈಕೋರ್ಟ್‌ ಚಾಟಿ ಬೀಸಿದೆ.

ಅಲ್ಲದೇ ಜಿ.ಪಂ. ಹಾಗೂ ತಾ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಒಬಿಸಿ ಸೇರಿದಂತೆ ಇತರೆ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು 2023ರ ಫೆಬ್ರವರಿ 1ರೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗಕ್ಕೆ ಹೈಕೋರ್ಟ್‌ ಗಡುವು ನೀಡಿದೆ.

ರಾಜ್ಯದಲ್ಲಿ ತಾ.ಪಂ ಹಾಗೂ ಜಿ.ಪಂ. ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಮೂಲ ಅರ್ಜಿಯಲ್ಲಿ ತನ್ನನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕು. ಅಲ್ಲದೇ, ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರಿ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಸಲ್ಲಿಸಿದ ಎರಡು ಮಧ್ಯಂತರ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಹಾಗೂ ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿತು.

ಫೆ.2ಕ್ಕೆ ಮುಂದಿನ ವಿಚಾರಣೆ:
ರಾಜ್ಯ ಚುನಾವಣಾ ಆಯೋಗದ ಮೂಲ ಅರ್ಜಿಯಲ್ಲಿ ಪ್ರತಿವಾದಿಯಾಗಿ ಸೇರಲು ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಸಲ್ಲಿಸಿದ ಮಧ್ಯಂತರ ಮನವಿಯನ್ನು ಹೈಕೋರ್ಟ್‌ ಅಂಗೀಕರಿಸಿತು. ಆದರೆ, ಕ್ಷೇತ್ರಗಳ ಗಡಿ ಹಾಗೂ ಮೀಸಲಾತಿ ನಿಗದಿಗೆ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ತಿಂಗಳು ಕಾಲಾವಕಾಶ ಕೋರಿದ್ದ ಮನವಿಯನ್ನು ತಳ್ಳಿಹಾಕಿದ ಹೈಕೋರ್ಟ್‌, ಫೆಬ್ರವರಿ 2ರವರೆಗೆ ಕಾಲಾವಕಾಶ ನೀಡಿ ಮನವಿಯನ್ನು ಇತ್ಯರ್ಥಪಡಿಸಿತು. ಅದರಂತೆ, ಫೆ.1ರೊಳಗೆ ಜಿ.ಪಂ. ಹಾಗೂ ತಾ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಒಬಿಸಿ ಸೇರಿದಂತೆ ಇತರೆ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.

Advertisement

ವಿಚಾರಣೆ ವೇಳೆ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌, ಕ್ಷೇತ್ರ ಪುನರ್‌ ವಿಂಗಡಣೆ ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಅವುಗಳನ್ನು ವಿಲೇವಾರಿ ಮಾಡಿ, ಅಂತಿಮ ಅಧಿಸೂಚನೆ ಹೊರಡಿಸಲು ಮೂರು ತಿಂಗಳು ಕಾಲಾವಕಾಶ ಬೇಕು ಎಂದು ಕೋರಿದರು. ಸರ್ಕಾರದ ಪರ ಪ್ರತಿಮಾ ಹೊನ್ನಾಪುರ, ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫ‌ಣೀಂದ್ರ ವಾದ ಮಂಡಿಸಿದರು.

ಸರ್ಕಾರ “ಬಸವನಹುಳು’ ರೀತಿ ಸಾಗುತ್ತಿದೆ: ಹೈಕೋರ್ಟ್‌
ಜಿ.ಪಂ-ತಾ.ಪಂ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಮೊದಲು ಸರ್ಕಾರ 12 ವಾರ ಕಾಲಾವಕಾಶ ಕೇಳಿತ್ತು. 2022ರ ಸೆ.23ರಂದು ಅರ್ಜಿ ವಿಚಾರಣೆ ಬಂದಾಗ ಸೀಮಾ ನಿರ್ಣಯ ಆಯೋಗದ ಪತ್ರ ಆಧರಿಸಿ, ಪುನಃ 12 ವಾರ ಕಾಲಾವಕಾಶ ಕೇಳಲಾಯಿತು.

ಆಗ 12 ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸ್ವತಃ ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ಭರವಸೆ ಕೊಟ್ಟಿದ್ದರು. ಆ 12 ವಾರಗಳ ಗಡುವು ಡಿ.16ಕ್ಕೆ ಮುಗಿಯುತ್ತಿದೆ. ಈ ನಡುವೆ ಸೀಮಾ ನಿರ್ಣಯ ಆಯೋಗ ಮತ್ತೆ ಮೂರು ತಿಂಗಳು ಕಾಲಾವಕಾಶ ಕೇಳುತ್ತಿದೆ. ಅಚ್ಚರಿ ಎಂದರೆ, ಮೂರು ತಿಂಗಳಲ್ಲಿ ಕ್ಷೇತ್ರ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿಸುತ್ತೇವೆ ಎಂದು 2022ರ ಸೆ.19ರ ಪತ್ರದಲ್ಲಿ ಹೇಳಿದ್ದ ಸೀಮಾ ನಿರ್ಣಯ ಆಯೋಗ ಈಗ ಮತ್ತೆ 3 ತಿಂಗಳು ಸಮಯ ಕೇಳುತ್ತಿದೆ. ಸರ್ಕಾರದ ಈ ನಡೆಯನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲ. ಒಂದಾದ ಮೇಲೊಂದು ನೆಪಗಳನ್ನು ಸರ್ಕಾರ ಹೇಳುತ್ತಿದೆ. ಸರ್ಕಾರ ಬಸವನಹುಳುವಿನ ರೀತಿ ಸಾಗುತ್ತಿದೆ. ಇದು ನ್ಯಾಯಾಲಯದ ಆದೇಶಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ. ಹೈಕೋರ್ಟ್‌ನ ಆದೇಶಗಳು, ಸುಪ್ರೀಂಕೋರ್ಟ್‌ನ ನಿರ್ದೇಶನಗಳು ಮತ್ತು ಕಾಲಬದ್ಧವಾಗಿ ಚುನಾವಣೆ ನಡೆಸಬೇಕು ಎಂಬ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸುವ ಬದ್ಧತೆ ಸರ್ಕಾರಕ್ಕೆ ಇದ್ದಂತಿಲ್ಲ ಎಂದು ಹೈಕೋರ್ಟ್‌ ಆಕ್ರೋಶ ಹೊರಹಾಕಿತು.

Advertisement

Udayavani is now on Telegram. Click here to join our channel and stay updated with the latest news.

Next