Advertisement

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

12:15 AM May 09, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 2 ಹಂತಗಳ ಲೋಕಸಭಾ ಚುನಾವಣೆ ಮುಗಿಯಿತು. ಇನ್ನು ರಾಜ್ಯದ ಮಟ್ಟಿಗೆ ಚುನಾವಣ ಮಾದರಿ ನೀತಿ ಸಂಹಿತೆ ಸಡಿಲಿಕೆ ಆಗುತ್ತದಾ ಎಂಬ ಪ್ರಶ್ನೆಗೆ ಚುನಾವಣ ಆಯೋಗ ಸ್ಪಷ್ಟವಾಗಿ “ಇಲ್ಲ’ ಎಂದಿದೆ. ಈ ಹಿಂದೆ ನಿರ್ಧರಿಸಿದಂತೆ ಜೂ.6ರ ವರೆಗೂ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸ್ಪಷ್ಟಪಡಿಸಿದ್ದಾರೆ.

Advertisement

ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ “ಮತದಾನ ಮುಗಿದ ಬಳಿಕವೂ ನೀತಿ ಸಂಹಿತೆ ಜಾರಿಯಲ್ಲಿರಬೇಕು ಅನ್ನುವುದು ನ್ಯಾಯವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನ್ಯಾಯ, ಅನ್ಯಾಯದ ಪ್ರಶ್ನೆ ಅಲ್ಲ. ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಿದಾಗ ಕೇಂದ್ರ ಚುನಾವಣ ಆಯೋಗ ಸ್ಪಷ್ಟವಾಗಿ ಹೇಳಿತ್ತು. ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದ ಜೂನ್‌ 6ರ ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು. ಹಾಗಿದ್ದಾಗ ರಾಜ್ಯದಲ್ಲಿ ಮತದಾನ ಮುಗಿದಿದೆ ಎಂದು ನೀತಿ ಸಂಹಿತೆ ಸಡಿಲಿಕೆ ಮಾಡಲು ಆಗುವುದಿಲ್ಲ ಎಂದರು.

ಅಲ್ಲದೆ, ಏನಾದರೂ ವಿಶೇಷ ಸಂದರ್ಭಗಳಿದ್ದಾಗ ರಾಜ್ಯ ಸರಕಾರ ಚುನಾವಣ ಆಯೋಗಕ್ಕೆ ಮನವಿ ಮಾಡಿಕೊಳ್ಳಬಹುದಾದರೂ ಆಯೋಗದ ತೀರ್ಮಾನವೇ ಅಂತಿಮ. ಆದರೆ ದೈನಂದಿನ ಆಡಳಿತಾತ್ಮಕ ಕೆಲಸಗಳಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಕಾಲಬದ್ಧವಾಗಿ ಆಗಬೇಕಾದ ಮತ್ತು ತುರ್ತು ಕೆಲಸಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಕುಡಿಯುವ ನೀರು, ಬಿತ್ತನೆ ಬೀಜ-ಗೊಬ್ಬರ ಖರೀದಿ, ಬರಗಾಲ ನಿರ್ವಹಣೆ ಮತ್ತಿತರ ಕೆಲಸಗಳಿಗೆ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿ ಸಲ್ಲಿಸುವ ಪ್ರಸ್ತಾವನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇದೇ ಮೇ 20ಕ್ಕೆ 1 ವರ್ಷ ಪೂರೈಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೀತಿ ಸಂಹಿತೆಯಿಂದಾಗಿ ರಾಜ್ಯದಲ್ಲಿ ಮತದಾನ ಮುಗಿದರೂ ಅಭಿವೃದ್ಧಿ ಸಹಿತ ವಿವಿಧ ಯೋಜನೆ, ಕಾಮಗಾರಿಗಳ ಅನುಷ್ಠಾನಕ್ಕೆ 1 ತಿಂಗಳು ಕಾಯಬೇಕಾಗುತ್ತದೆ. ಕೆಲ ಅತಿ ಆವಶ್ಯಕ ಕೆಲಸಗಳನ್ನು ಹೊರತುಪಡಿಸಿದರೆ ಇತರ ಯೋಜನೆ, ಕಾಮಗಾರಿಗಳನ್ನು ಈ ಅವಧಿಯಲ್ಲಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಾಜ್ಯದಲ್ಲಿ ಮತದಾನ ಮುಗಿಯುತ್ತಿದ್ದಂತೆ ನೀತಿ ಸಂಹಿತೆ ಸಡಿಲಿಸುವಂತೆ ಚುನಾವಣ ಆಯೋಗವನ್ನು ಒತ್ತಾಯಿಸುತ್ತೇವೆ. ಈ ಕುರಿತು ಆಯೋಗಕ್ಕೆ ಪತ್ರ ಬರೆಯುತ್ತೇವೆ ಎಂದು ಇತ್ತೀಚೆಗೆ ಉದಯವಾಣಿಗೆ ನೀಡಿದ ಸಂದರ್ಶನ ತಿಳಿಸಿದ್ದರು.

ಅದಕ್ಕೂ ಮುನ್ನ ಎ.19ರ ಮೊದಲ ಹಂತದಲ್ಲೇ ಮತದಾನ ಮುಗಿದ ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವೂ ತನ್ನ ರಾಜ್ಯದಲ್ಲಿ ನೀತಿ ಸಂಹಿತೆ ಸಡಿಲಿಕೆ ಮಾಡುವಂತೆ ಚುನಾವಣ ಆಯೋಗವನ್ನು ಒತ್ತಾಯಿಸಿತ್ತು ಎಂಬುದು ಇಲ್ಲಿ ಸ್ಮರಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next