ಹೊಸದಿಲ್ಲಿ: ಮಹಾರಾಷ್ಟ್ರದ ಒಂಭತ್ತು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಶುಕ್ರವಾರ ಅನುಮತಿ ನೀಡಿರುವುದರೊಂದಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲ್ಮನೆ ಪ್ರವೇಶಕ್ಕೆ ಹಾದಿ ಸುಗಮವಾಗಿದೆ.
ಚುನಾವಣೆ ಘೋಷಿಸುವಂತೆ ಕೋರಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪತ್ರ ಬರೆದ ಬೆನ್ನಲ್ಲೇ ಆಯೋಗ ಈ ನಿರ್ಧಾರ ಕೈಗೊಂಡಿದ್ದು, ಮೇ 21ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಇದೇ ವೇಳೆ ಕೋವಿಡ್ 19 ವೈರಸ್ ವಿರುದ್ಧದ ಸುರಕ್ಷತೆಗಾಗಿ ಅಗತ್ಯ ಮಾರ್ಗಸೂಚಿಗಳ ಜಾರಿಯನ್ನು ಖಚಿತಪಡಿಸಿಕೊಳ್ಳುವಂತೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಸಮಿತಿ ಸೂಚಿಸಿದೆ.
ಯಾವುದೇ ಮನೆಯ ಸದಸ್ಯರಾಗದೆ ಮುಖ್ಯ ಮಂತ್ರಿಯಾಗಿರುವ ಉದ್ಧವ್ ಮೇ 28ರೊಳಗಾಗಿ ಮಹಾ ರಾಷ್ಟ್ರ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಲೇಬೇಕು.
ಕೋವಿಡ್ 19 ವೈರಸ್ ಸಮಯದಲ್ಲಿ ಮೇಲ್ಮನೆ ಚುನಾವಣೆ ನಡೆಯುವ ಬಗ್ಗೆ ಅನುಮಾನ ಇದ್ದಿದ್ದರಿಂದ ರಾಜ್ಯ ರಾಜಕೀಯದಲ್ಲಿ ತಳಮಳ ಉಂಟಾಗಿತ್ತು. ಇದೀಗ ಆಯೋಗ ಚುನಾವಣೆಗೆ ಅನುಮತಿ ನೀಡಿರುವುದರಿಂದ ಉದ್ಧವ್ ನಿರಾಳರಾಗಿದ್ದಾರೆ.