ಬೆಂಗಳೂರು: “ಒಬ್ಬ ಶಾಸಕನನ್ನು ವಿಧಾನಸಭೆಗೆ ಹತ್ತಿಸಲು ಚುನಾವಣಾ ಆಯೋಗ ಅಂದಾಜು 2 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಅದರಂತೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 224 ಶಾಸಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಆಯೋಗಕ್ಕೆ ಬರೋಬ್ಬರಿ 500 ಕೋಟಿ ರೂ. ವೆಚ್ಚ ಬರಲಿದೆ.
ಕಳೆದ ವಿಧಾನಸಭೆ ಚುನಾವಣೆಗೆ ಸುಮಾರು 394 ಕೋಟಿ ರೂ. ವೆಚ್ಚವಾಗಿತ್ತು. ಈಗ ವಾರ್ಷಿಕ ಹಣದುಬ್ಬರ, ಬೆಲೆ ಏರಿಕೆ ಇತ್ಯಾದಿ ಕಾರಣ ಗಳಿಂದಾಗಿ ಈ ಬಾರಿಯ ಚುನಾವಣೆಗೆ 500 ಕೋಟಿ ಬೇಕಾಗಬಹುದು ಎಂದು ಚುನಾವಣಾ ಆಯೋಗ ಆರಂಭದಲ್ಲಿ ಅಂದಾಜಿಸಿತ್ತು. ಇದರಲ್ಲಿ ಒಂದಿಷ್ಟು ಹೆಚ್ಚಳ ಆಗುವ ಸಾಧ್ಯತೆಯೂ ಇದೆ. ಪ್ರತಿ ಚುನಾವಣೆಗೆ ವೆಚ್ಚ ದುಪ್ಪಟ್ಟು ಆಗುತ್ತಲೇ ಇದೆ. 2008ರಲ್ಲಿ 75 ರಿಂದ 80 ಕೋಟಿ ರೂ. ವೆಚ್ಚ ಆಗಿತ್ತು. 2013ರ ವಿಧಾನಸಭೆ ಚುನಾವಣೆಗೆ ಸುಮಾರು 160 ಕೋಟಿ ರೂ. ವೆಚ್ಚವಾಗಿತ್ತು. 2018ರಲ್ಲಿ 250 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್ ಬಳಕೆ ಮಾಡಿದ್ದರಿಂದ ವೆಚ್ಚ 394 ಕೋಟಿಗೆ ತಲುಪಿತ್ತು. ಈಗ 500 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಯಾವುದಕ್ಕೆ ವೆಚ್ಚ?: ಮತದಾರರ ಪಟ್ಟಿ ತಯಾರಿಕೆ, ಮುದ್ರಣ, ಎಪಿಕ್ ಕಾರ್ಡ್‌ಗಳ ಮುದ್ರಣ, ಮತದಾರರ ಜಾಗೃತಿ ಕಾರ್ಯಕ್ರಮ, ಚುನಾವಣಾ ಸಿಬ್ಬಂದಿಗೆ ತರಬೇತಿ, ಕರ್ತವ್ಯ ಭತ್ಯೆ, ಇವಿಎಂ ಹಾಗೂ ಇತರ ಚುನಾವಣಾ ಸಾಮಗ್ರಿಗಳ ಸಾಗಾಟ, ಚೆಕ್‌ಪೋಸ್ಟ್‌ಗಳ ನಿರ್ಮಾಣ, ಮತಗಟ್ಟೆ, ಸ್ಟ್ರಾಂಗ್‌ರೂಂ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಸಜ್ಜುಗೊಳಿಸುವುದು, ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಚುನಾವಣಾ ಆಯೋಗ ವೆಚ್ಚ ಮಾಡುತ್ತದೆ.
ಯಾವುದಕ್ಕೆ ಹೆಚ್ಚು?: ಚುನಾವಣೆಗೆ ತಗಲುವ ಒಟ್ಟು ವೆಚ್ಚದಲ್ಲಿ ಭದ್ರತಾ ವೆಚ್ಚ ಹಾಗೂ ಸಿವಿಲ್ ವೆಚ್ಚಕ್ಕೆ ಬಹುಪಾಲು ಹೋಗುತ್ತದೆ. ರಾಜ್ಯ ಪೊಲೀಸ್ ಇಲಾಖೆಯಿಂದ ಮಾಡುವ ಭದ್ರತಾ ವ್ಯವಸ್ಥೆಗೆ 100ರಿಂದ 150 ಕೋಟಿ ರೂ. ಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಡುವ ಭದ್ರತಾ ಪಡೆಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗುತ್ತದೆ. ಉಳಿದಂತೆ ಸಿವಿಲ್ ವೆಚ್ಚಗಳಾದ ಮತದಾರರ ಜಾಗೃತಿ ಕಾರ್ಯಕ್ರಮಗಳು, ಚುನಾವಣಾ ಸಿಬ್ಬಂದಿ ಮತ್ತು ವೀಕ್ಷಕರ ನಿಯೋಜನೆ ಹಾಗೂ ತರಬೇತಿ, ಮತಗಟ್ಟೆಗಳ ನಿರ್ಮಾಣ. ಮತದಾರರ ಪಟ್ಟಿಯ ಮುದ್ರಣ, ಗುರುತಿನ ಚೀಟಿ ಮುದ್ರಣ, ಚುನಾವಣಾ ಸಾಮಗ್ರಿಗಳ ಸಾಗಟಕ್ಕೆ ಒಟ್ಟು ವೆಚ್ಚದ ಶೇ.45ರಿಂದ 50ರಷ್ಟು ಬೇಕಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮೂಲಗಳು ತಿಳಿಸಿವೆ. ಉಳಿದಂತೆ, ಚೆಕ್‌ಪೋಸ್ಟ್‌ಗಳ ನಿರ್ಮಾಣಕ್ಕೆ ಶೇ.10, ಮತ ಎಣಿಕೆ ಕೇಂದ್ರಗಳ ಸ್ಥಾಪನೆ, ಸ್ಟ್ರಾಂಗ್ ರೂಂಗಳ ನಿರ್ಮಾಣಕ್ಕೆ ಶೇ.30ರಷ್ಟು, ಚುನಾವಣಾ ನೀತಿ ಸಂಹಿತೆ ಜಾರಿಗೆ ಶೇ.10ರಷ್ಟು ಬೇಕಾಗಬಹುದು ಎಂದು ಚುನಾವಣಾ ಆಯೋಗ ಅಂದಾಜು ಹಾಕಿಕೊಂಡಿದೆ.
ಚುನಾವಣೆ ವೆಚ್ಚವು ಮತಗಟ್ಟೆಗಳ ಸಂಖ್ಯೆ ಏರಿಕೆಯನ್ನು ಅವಲಂಬಿ ಸಿರುತ್ತದೆ. ಮತದಾರರ ಸಂಖ್ಯೆ ಹೆಚ್ಚಾದರೆ ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ, ಕಳೆದ ಬಾರಿಗಿಂತ ಮತಗಟ್ಟೆಗಳ ಸಂಖ್ಯೆಯ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಏರಿಕೆ ಆಗಿಲ್ಲ. ಆದರೂ, ಸಿವಿಲ್ ವೆಚ್ಚ ಇದ್ದೇ ಇರುತ್ತದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ.