Advertisement

ಮಾ.4ರಂದು ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಉದ್ಘಾಟನೆ: ಮುಖ್ಯಮಂತ್ರಿ ಚಂದ್ರು

12:27 PM Feb 26, 2023 | Team Udayavani |

ದಾವಣಗೆರೆ: ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದ ಉದ್ಘಾಟನಾ ಸಮಾರಂಭ ಮಾ.4 ರಂದು ದಾವಣಗೆರೆಯಲ್ಲಿ ನಡೆಯಲಿದೆ ಎಂದು ಪಕ್ಷದ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶನಿವಾರ ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವತ್‌ಸಿಂಗ್ ಮಾನ್ ಇತರರು ಭಾಗವಹಿಸುವರು ಎಂದರು.

ಆಮ್ ಆದ್ಮಿ ಪಾರ್ಟಿ ಈಗ ದೇಶದ 9ನೇ ರಾಷ್ಟ್ರೀಯ ಪಕ್ಷವಾಗಿದೆ. ಕಾನೂನಾತ್ಮಕವಾಗಿ ಘೋಷಣೆ ಆಗಬೇಕಿದೆ. ರಾಜ್ಯ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ ಆಪ್ ಶೂನ್ಯದಿಂದ ಪ್ರಾರಂಭವಾಗಬೇಕಿದೆ. ಹಾಗಾಗಿ ಇಂತಿಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಆಂಧ್ರಪ್ರದೇಶದಲ್ಲಿ ಎನ್.ಟಿ. ರಾಮರಾವ್, ಅಸ್ಸಾಂನಲ್ಲಿ ಅಸ್ಸಾಂ ಗಣ ಪರಿಷದ್, ತಮಿಳುನಾಡಿನಲ್ಲಿ ಜಯ ಲಲಿತ ಪಕ್ಷ ಪ್ರಾರಂಭಿಸಿದಾಗ ಏನೂ ಇರಲಿಲ್ಲ, ಅಧಿಕಾರಕ್ಕೆ ಬಂದರು. ಅದೇ ರೀತಿ ಇಲ್ಲೂ ಆಗಬಹುದು. 20 ಸ್ಥಾನ ಗೆಲ್ಲಬಹುದು. ಸ್ವೀಪ್ ಸಹ ಮಾಡಬಹುದು. ಕಾಂಪೌಂಡ್ ಮೇಲೆ ನಿಂತಿರುವ ಜೆಡಿಎಸ್‌ಗಿಂತಲೂ ಉತ್ತಮ ನಿರ್ವಹಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಜೆಸಿಬಿ (ಜನತಾದಳ, ಕಾಂಗ್ರೆಸ್, ಬಿಜೆಪಿ) ಆಡಳಿತದಲ್ಲಿ ಆಗಿರುವ ಲೋಪದೋಷ, ಸಮಸ್ಯೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಕೇಜ್ರಿವಾಲ್ ದಾವಣಗೆರೆಗೆ ಆಗಮಿಸುತ್ತಿದ್ದಾರೆ. ಮೂರು ಪಕ್ಷದ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಪರ್ಯಾಯ, ಸ್ವಚ್ಛ, ಶುದ್ಧ ಆಡಳಿತ ನೋಡುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯೇ ಸೂಕ್ತ ಪರಿಹಾರ. ನಮ್ಮ ಪಕ್ಷದ ಗುರುತು ಪೊರಕೆ ಎಂದರೆ ಬರೀ ಕಸ ಗುಡಿಸುವುದು, ಸ್ವಚ್ಛ ಮಾಡುವುದಲ್ಲ. ರಾಜಕೀಯ ಸ್ವಚ್ಚತೆ ನಮ್ಮ ಗುರಿ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಮಾ. 4ರ ಬೃಹತ್ ಸಮಾವೇಶ, ಟಿಕೆಟ್ ಹಂಚಿಕೆ ನಂತರ ಚರ್ಚೆ ಮಾಡಲಾಗುವುದು. ಘೋಷಣೆ ಆಗಬಹುದು. ಆಗದಿರಬಹುದು. ಎಲ್ಲವೂ ಮಾ. 4ರ ನಂತರವೇ ಚರ್ಚೆಗೆ ಬರಲಿದೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಹಿರೇಮಠ್, ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಬಸವಂತಪ್ಪ, ಆದಿಲ್ ಖಾನ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next