ಕುಣಿಗಲ್: ಪದವೀಧರ ಉದ್ಯೋಗಿಗಳು ನಿರುದ್ಯೋಗಿಗಳಾಗಿ ಸಂಕಷ್ಟಕ್ಕೆ ಸಿಲುಕಲು ಕೇಂದ್ರ, ರಾಜ್ಯ ಬಿಜೆಪಿ ಸರಕಾರಗಳ ತಪ್ಪು ನಿರ್ಧಾರಗಳೇ ಕಾರಣ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಆರೋಪಿಸಿದರು.
ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿಮಾತನಾಡಿದರು. ಕೇಂದ್ರ ಸರಕಾರದ ಜಿಎಸ್‌ಟಿ, ನೋಟು ಅಮಾನೀಕರಣ ದಂತಹ ಯೋಜನೆಗಳಿಂದ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸುಲುಕಿದೆ, ಪ್ರಧಾನಿ ನರೇಂದ್ರ ಮೋದಿ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದ್ದಾಗಿ ಚುನಾವಣೆ ಸಂದರ್ಭದಲ್ಲಿ ಯವ ಜನಾಂಗಕ್ಕೆ ಭರವಸೆ ನೀಡಿ ಈಗ ಎರಡು ಕೋಟಿ ಉದ್ಯೋಗವನ್ನೇ ಕಸಿದುಕೊಂಡಿದ್ದಾರೆ ಎಂದು ದೂರಿದರು.
ಸರ್ಕಾರ ವಿಫಲ: ಇದರ ಪರಿಣಾಮ ಲಕ್ಷಾಂತರ ಮಂದಿ ಪದವೀಧರರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ, ಖಾಸಗಿ ಕಾರ್ಖಾನೆಗಳು ಕಂಪನಿಗಳು ತೀವ್ರ ಸಂಕಷ್ಟದಿಂದ ನಲುಗಿ ಬಾಗಿಲು ಮುಂಚಿವೆ, ಇದರ ನೆರವಿಗೆ ಧಾವಿಸುವಲ್ಲಿ ಸರ್ಕಾರಗಳು ವಿಫಲಗೊಂಡಿವೆ ಎಂದು ಆರೋಪಿಸಿದರು.
ಜೆಡಿಎಸ್ ಬೆಂಬಲಿಸಿ: ಎನ್‌ಪಿಎಸ್ ಯೋಜನೆಯಿಂದ ಲಕ್ಷಾಂತರ ಮಂದಿ ನೌಕರರು ತಮ್ಮ ನಿವೃತ್ತಿ ನಂತರ ಪಿಂಚಣಿ ಪಡೆಯಲು ಸಾಧ್ಯವಾಗದೇ ಪರಿತಪ್ಪಿಸುವಂತಾಗಿದೆ. ಈ ಸಂಬಂಧ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಮಿತಿ ರಚಿಸಿದ್ದರು ಸಮಿತಿ ವರದಿ ನೀಡುವ ಮುನ್ನವೇ ಸರಕಾರ ಬಿದ್ದು ಬಿಜೆಪಿ ಅಧಿಕಾರಿಕ್ಕೆ ಬಂದಿದೆ. ಎನ್‌ಪಿಎಸ್ ನೌಕರರ ಸಹಾಯಕ್ಕೆ ಬರಲು ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಆದರೇ ಎನ್‌ಪಿಎಸ್ ನೌಕರರ ಹಿತ ಹಾಗೂ ಎಲ್ಲಾ ಶಿಕ್ಷಕರ ವೃಂದ ಸೇರಿದಂತೆ ಪದವೀಧರರ ಹಿತ ರಕ್ಷಣೆಗೆ ಪಣತೊಟ್ಟು ಹೋರಾಟ ಮಾಡುತ್ತೇನೆ. ಈ ಸಂಬಂಧ ಆಗ್ನೇಯ ಪದವೀಧರ ಮತದಾರರು ತಮ್ಮ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಪದವೀಧರರ ಹಾಗೂ ಶಿಕ್ಷಕ ವರ್ಗಕ್ಕೆಕಳೆದ ಆರು ವರ್ಷದ ಅವರ ಅಧಿಕಾರ ಅವಧಿಯಲ್ಲಿಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ ಎಂದರು. ಎಂಎಲ್‌ಸಿಗಳಾದ ಬೆಮಲ್ ಕಾಂತರಾಜು, ಅಪ್ಪಾಜಿಗೌಡ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್, ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ್, ಶಿವರಾಜು ಇತರರು ಇದ್ದರು.