Advertisement

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

05:16 PM Apr 30, 2024 | Kavyashree |

ತೀರ್ಥಹಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೆಜೆಎಂ ಯೋಜನೆಯಡಿ ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕೇಂದ್ರೀಕೃತ, ಅವೈಜ್ಞಾನಿಕ, ಜನ ವಿರೋಧಿ ಮತ್ತು ಪ್ರಕೃತಿ ವಿರೋಧಿ ಯೋಜನೆಯಾಗಿದೆ. ಇದರ ಕುರಿತು ಕಳೆದ ಸುಮಾರು 6 ತಿಂಗಳಿಂದ ಮನವಿ, ಪ್ರತಿಭಟನೆ, ಆಹೋರಾತ್ರಿ ಧರಣಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆಗಿನ ಸಭೆ, ಗಂಜಿ ಚಳವಳಿ ಹೀಗೆ ನಾನಾ ರೀತಿಯಲ್ಲಿ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿಕೊಂಡು ಬಂದರೂ ಸಮಸ್ಯೆ ಪರಿಹಾರ ಆಗದ ಕಾರಣ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

Advertisement

ಮಂಗಳವಾರ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ ತಾಲೂಕಿನ ಕೋಡ್ಲು, ಅಲಗೇರಿ, ಗುಡ್ಡೆಕೊಪ್ಪ ಕಾಸರವಳ್ಳಿ, ಹಾರೋಗೋಳಿಗೆ, ಹುಣಸವಳ್ಳಿ ಗ್ರಾಮಗಳ 1 ಸಾವಿರಕ್ಕೂ ಅಧಿಕ ಗ್ರಾಮಸ್ಥರು ಸ್ವ ಇಚ್ಛೆಯಿಂದ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಸಹಿ ಹಾಕಿ ಪತ್ರ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯೋಜನೆಗಳು ಜನರ ಹೆಸರಿನಲ್ಲಿ ಜಾರಿಯಾಗುತ್ತವೆ. ಆದರೆ ಜನರು ವಿರೋಧ ಬಂದ ಮೇಲೂ ಅನುಷ್ಠಾನಕ್ಕೆ ತಾವುಗಳು ಪೊಲೀಸ್ ಬಲ ಪ್ರಯೋಗ ಬಳಸಿಕೊಂಡಿದ್ದೀರಿ, ಯೋಜನೆಯ ರೂಪು-ರೇಷೆಗಳನ್ನು ಮನಸೋ ಇಚ್ಛೆ ಬದಲಾಯಿಸಿಕೊಂಡಿದ್ದೀರಿ, ಕಾಡನ್ನು ನಾಶಗೊಳಿಸಿದ್ದೀರಿ, ಮಲೆನಾಡಿನ ಪರಿಸರವನ್ನು ಹಾಳುಗೆಡವಿದ್ದೀರಿ, ಜನರ ಯಾವ ಪ್ರತಿರೋಧವನ್ನೂ ಲೆಕ್ಕಿಸದೆ, ಈ ನೆಲದ ಕಾನೂನನ್ನು ಗಾಳಿಗೆ ತೂರಿ ಬಲಿಷ್ಠರಿಗೆ ಅನುಕೂಲವನ್ನು ಮಾಡಿ ಕೊಟ್ಟಿದ್ದೀರಿ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನರು ರಾಜ್ಯ ಹೈಕೋರ್ಟ್‌ ಮೆಟ್ಟಿಲೇರಿದಾಗಲೂ ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಎಂದು ನ್ಯಾಯಾಲಯ ಗಮನಿಸಿ, ಆದೇಶ ನೀಡಿದೆ. ಹೀಗಿದ್ದರೂ ತಾವುಗಳು ಸಾರ್ವಜನಿಕರ ಹಿತವನ್ನು ಬದಿಗೊತ್ತಿ, ಬಲಪ್ರಯೋಗದ ಮೂಲಕ ಪರಿಸರದ ಮೇಲೆ ಎರಗಿದ್ದೀರಿ. ಇದರ ಜೊತೆಗೆ ಈ ಭಾಗದ ತೂಗು ಸೇತುವೆ ದುರಸ್ತಿಗೆ ನೀವುಗಳು ತೋರಿಸುತ್ತಿರುವ ತಾತ್ಸಾರ, ಗುಣಮಟ್ಟವಿಲ್ಲದೆ ಹಾಕಿದ ರಸ್ತೆಗಳಿಂದಾಗಿ ಜನರಿಗೆ ವಿಶ್ವಾಸ ಕಡಿಮೆಯಾಗಿದೆ. ಹೀಗಿರುವಾಗ, ಲೋಕಸಭಾ ಚುನಾವಣೆ 2024ರ ಮತದಾನದಲ್ಲಿ ಭಾಗವಹಿಸುವ ಯಾವ ಆಸಕ್ತಿಯೂ ನಮಗೆ ಉಳಿದಿಲ್ಲ ಎಂದಿದ್ದಾರೆ.

ಇಡೀ ವ್ಯವಸ್ಥೆಯೇ ಕಣ್ ಕಟ್ಟಾಗಿರುವಾಗ ನಮ್ಮ ಮತವನ್ನು ಮಾತ್ರ ನೀವು ಪವಿತ್ರ ಎನ್ನುತ್ತಿರುವುದು ಸಂವಿಧಾನಕ್ಕೆ ನೀವೆಲ್ಲರೂ ಸೇರಿ ಎಸಗುತ್ತಿರುವ ಅಪಚಾರವಾಗಿದೆ. ವಿಕೇಂದ್ರಿಕರಣ ವ್ಯವಸ್ಥೆಯನ್ನು ಸಂವಿಧಾನದ ಆಶಯಗಳನ್ನು ಕಡೆಗಣಿಸಿರುವುದರಿಂದ ನಮಗೆ ಸಂವಿಧಾನವನ್ನು ಅನುಷ್ಠಾನಗೊಳಸುತ್ತಿರುವ ನಿಮ್ಮಗಳ ಮೇಲೆ ಇದ್ದ ನಂಬಿಕೆ, ವಿಶ್ವಾಸ ಕಡಿಮೆಯಾಗಿದೆ. ಬಂಡವಾಳಶಾಯಿ ವ್ಯವಸ್ಥೆಯ ಸರ್ವಾಧಿಕಾರಿ ಧೋರಣೆ ಆಡಳಿತ ಮತ್ತು ಸರ್ಕಾರ ನಿಮ್ಮದು ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದರು.

Advertisement

ಇದರಿಂದಾಗಿ ಭಾರತದ ಸಂವಿಧಾನದ ಮಹಾಹಬ್ಬ 2024ರ ಲೋಕಸಭೆ ಚುನಾವಣೆಯ ಮತದಾನದಲ್ಲಿ ನಾವು/ನಮ್ಮ ಕುಟುಂಬ ಭಾಗವಹಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತೇವೆ ಎಂದು ಸಹಿ ಹಾಕಿರುವ ಪತ್ರದ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next