Advertisement

ಮೇಲ್ಮನೆಗೆ ಸಂಬಂಧಿಗಳ ಕದನ?

09:59 AM Nov 21, 2021 | Team Udayavani |

ಬೀದರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರನ್ನು ಹೈಕಮಾಂಡ್‌ ಘೋಷಿಸಿದ್ದು, ಕಾಂಗ್ರೆಸ್‌ ಸ್ಪರ್ಧಿಯಾಗಿ ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ, ಇಲ್ಲವೇ ಅಮರ ಖಂಡ್ರೆ ಹೆಸರು ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಸಂಬಂಧಿಗಳ ನಡುವಿನ ಸಮರಕ್ಕೆ ಕ್ಷೇತ್ರ ಸಾಕ್ಷಿಯಾಗಲಿದೆ.

Advertisement

ಹಾಲಿ ಸದಸ್ಯರಾಗಿರುವ ಮಾಜಿ ವಿಜಯಸಿಂಗ್‌ ಅವರಿಂದ ತೆರವಾಗಿರುವ ಮೇಲ್ಮನೆ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನ ಕಮಲ ಪಾಳಯದಿಂದ ಆಕಾಂಕ್ಷಿತರ ದೊಡ್ಡ ಪಟ್ಟಿ ಚರ್ಚೆಯಲ್ಲಿತ್ತಾದರೂ ವರಿಷ್ಠರು ಕೊನೆಗೆ ಭಾಲ್ಕಿಯ ಹಿರಿಯ ರಾಜಕೀಯ ಮುಖಂಡ ಪ್ರಕಾಶ ಖಂಡ್ರೆಗೆ ಮಣೆ ಹಾಕಿದೆ.

ಇನ್ನೂ “ಕೈ’ ಅಭ್ಯರ್ಥಿಯಾಗಿ ನಿರೀಕ್ಷೆಯಂತೆ ಹುಮನಾಬಾದ್‌ನ ಭೀಮರಾವ್‌ ಪಾಟೀಲ ಅವರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ದಟ್ಟವಾಗಿದೆ. ಪ್ರಕಾಶ ಖಂಡ್ರೆ ಸತತ ಎರಡು ಬಾರಿ ಭಾಲ್ಕಿ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಪ್ರಬಲ ಪೈಪೋಟಿ ನೀಡಿ ಪಕ್ಷವನ್ನು ಬಲಪಡಿಸಿದವರು. 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ವಿಜಯಕುಮಾರ ಖಂಡ್ರೆ ಅವರನ್ನು ಮತ್ತು 2003ರಲ್ಲಿ ಈಶ್ವರ ಖಂಡ್ರೆ ಅವರನ್ನು ಸೋಲುಣಿಸಿದ್ದರು. ನಂತರ ಭಾಲ್ಕಿ ಕ್ಷೇತ್ರದಿಂದ 2008, 2013 ಮತ್ತು 2018ರ ಮೂರು ಚುನಾವಣೆ ಮತ್ತು ಬೀದರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸತತವಾಗಿ ಸೋಲು ಅನುಭವಿಸಿದ್ದರು. ಈ ನಡುವೆ 2018ರ ಚುನಾವಣೆ ವೇಳೆ ಟಿಕೆಟ್‌ ತಪ್ಪಿದ್ದರಿಂದ ಮುನಿಸಿಕೊಂಡು ಜೆಡಿಎಸ್‌ ನ ತೆನೆ ಹೊತ್ತಿದ್ದ ಪ್ರಕಾಶ ಅವರು ಹೀನಾಯವಾಗಿ ಸೋತು ಮೂರು ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ನಂತರ ಬಸವಕಲ್ಯಾಣ ಉಪ ಚುನಾವಣೆ ವೇಳೆ ಮರಳಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ:ಪ್ರತಾಪ ಸಿಂಹ ವಿರುದ್ದ ಕಾಂಗ್ರೆಸ್‌ ಪ್ರತಿಭಟನೆ

ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಇದರಿಂದ ಕಳೆದ ಬಾರಿ ಸೋಲುಂಡಿದ್ದ ಡಿ.ಕೆ. ಸಿದ್ರಾಮ್‌ ಗೆ ಟಿಕೆಟ್‌ ಕೈತಪ್ಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿಧಾನ ಪರಿಷತ್‌ ಅಭ್ಯರ್ಥಿಯಾಗುವ ಮೂಲಕ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಈ ಮೂಲಕ ಡಿ.ಕೆ. ಮತ್ತು ಪಿ.ಕೆ. ಅವರನ್ನು ಒಗ್ಗೂಡಿಸಿ, ಭಾಲ್ಕಿಯಲ್ಲಿ ಈಶ್ವರ ಖಂಡ್ರೆ ಅವರನ್ನು ಮಣಿಸಲು ಪ್ರಬಲ ನಾಯಕತ್ವದ ಕೊರತೆಯನ್ನು ಹೈಕಮಾಂಡ್‌ ನೀಗಿಸುವ ಪ್ರಯತ್ನ ಮಾಡಿದೆ ಎನ್ನಬಹುದು.

Advertisement

ಹಾಲಿ ಸದಸ್ಯರಾಗಿರುವ ಮಾಜಿ ಸಿಎಂ ಧರಂಸಿಂಗ್‌ ಅವರ ಪುತ್ರ ವಿಜಯಸಿಂಗ್‌ ಅವರು ಚುನಾವಣೆಯಿಂದ ಹಿಂದೆ ಸರಿದಿರುವುದು ಕಾಂಗ್ರೆಸ್‌ಗೆ ದೊಡ್ಡ ತಲೆನೋವು ತಂದಿಟ್ಟಿದೆ. ಹಾಗಾಗಿ ಹೊಸಬರನ್ನು ಅಖಾಡಕ್ಕಿಳಿಸುವ ಅನಿವಾರ್ಯತೆ ಇದ್ದು, ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಭೀಮರಾವ್‌ ಪಾಟೀಲ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ. ಅವರು “ಕೈ’ ಕೊಟ್ಟರೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಇಲ್ಲವೇ ಪತ್ನಿ ಗೀತಾ ಖಂಡ್ರೆ ಅವರನ್ನು ಕಣಕ್ಕಿಳಿಸಬಹುದು.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next