Advertisement

Election 2023: ಪ್ರಗತಿ ರಥ ಸಂಚಾರ ತಾತ್ಕಾಲಿಕ ನಿಲುಗಡೆ

10:59 PM Apr 05, 2023 | Team Udayavani |

ಉಡುಪಿ: ಡಿಜಿಟಲ್‌ ರೂಪದ ಆಕರ್ಷಕ ವಿಧಾನದಲ್ಲಿ ಪ್ರಚಾರ ಪ್ರಕ್ರಿಯೆ ಮೂಲಕ ಬಿಜೆಪಿ ಸರಕಾರದ ಸಾಧನೆ ಸಾರಲು ಜಿಲ್ಲೆಗೆ ಬಂದಿರುವ ಪ್ರಗತಿ ರಥಕ್ಕೂ ಈಗ ನೀತಿ ಸಂಹಿತೆ ಬಿಸಿ ತಟ್ಟಿದೆ.

Advertisement

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ಒಂದರಂತೆ ಐದು ವಾಹನಗಳು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಫೆಬ್ರವರಿ ತಿಂಗಳಲ್ಲಿ ಬಂದಿದ್ದವು. ಈ ರಥದ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯ ವೀಡಿಯೋ ತುಣುಕುಗಳನ್ನು ಗ್ರಾಮ ಗ್ರಾಮಗಳಲ್ಲೂ ಪ್ರಚಾರ ಮಾಡಲಾಗುತ್ತಿತ್ತು.

ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಯಲ್ಲಿ ಐದು ವಾಹನಗಳು ಪ್ರಚಾರ ಪ್ರಕ್ರಿಯೆ ಸ್ಥಗಿತಗೊಳಿಸಿ, ಬಿಜೆಪಿ ಕಚೇರಿಯಲ್ಲಿ ನಿಂತಿವೆೆ. ಚುನಾವಣೆಪ್ರಚಾರ ಪ್ರಕ್ರಿಯೆ ನೀತಿ ಸಂಹಿತೆ ಜತೆಗೆ ವೆಚ್ಚದ ವ್ಯಾಪ್ತಿಗೂ ಬರಲಿರುವುದರಿಂದ ಸದ್ಯದ ಮಟ್ಟಿಗೆ ವಾಹನ ಸಂಚಾರ ಮಾಡುತ್ತಿಲ್ಲ. ರಾಜ್ಯಮಟ್ಟದಲ್ಲಿ ಇದಕ್ಕೆ ಪರವಾನಿಗೆ ಪಡೆಯುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಬಿಜೆಪಿ ಪ್ರಮುಖರೊಬ್ಬರು ಮಾಹಿತಿ ನೀಡಿದರು.

ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಚುನಾವಣೆಯಲ್ಲಿ ಇದೇ ಪ್ರಗತಿ ರಥಗಳನ್ನು ಪ್ರಚಾರ ಕಾರ್ಯಕ್ಕೆ ವ್ಯಾಪಕವಾಗಿ ಬಳಸಲಾಗಿತ್ತು. ಅಲ್ಲದೇ ಬಹುತೇಕ ರಾಜ್ಯಗಳಲ್ಲಿ ಇದು ಬಿಜೆಪಿಗೆ ಉತ್ತಮ ಫ‌ಲಿತಾಂಶವನ್ನು ತಂದುಕೊಟ್ಟಿದೆ.

ಹೊಸರೂಪ
ಸದ್ಯ ಇರುವ ಪ್ರಗತಿ ರಥದಲ್ಲಿ ಬಿಜೆಪಿಯೇ ಭರವಸೆ ಎಂಬ ವಾಕ್ಯದ ಜತೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರ ಭಾವಚಿತ್ರ ಇರುವ ಪೋಸ್ಟರ್‌ ಇದೆ. ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರಲಿರುವುದರಿಂದ ಪ್ರಗತಿ ರಥದ ವಿನ್ಯಾಸವನ್ನೇ ಸಂಪೂರ್ಣ ಬದಲಿಸಲಿದ್ದಾರೆ. ಅಲ್ಲದೇ, ಆಯಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿ ಆಯ್ಕೆಯಾದ ಅನಂತರದಲ್ಲಿ ವರಿಷ್ಠರ ಜತೆಗೆ ಅಭ್ಯರ್ಥಿಯ ಭಾವಚಿತ್ರವೂ ರಾರಾಜಿಸುವ ಸಾಧ್ಯತೆಯಿದೆ. ಸ್ಥಳೀಯವಾಗಿ ಪ್ರಚಾರಕ್ಕೆ ಬೇಕಾದಂತೆ ಸಿದ್ಧಪಡಿಸುವ ಸಾಧ್ಯತೆಯಿದೆ.

Advertisement

ಏಕರೂಪತೆ
ಪ್ರಗತಿ ರಥದಲ್ಲಿ ಡಿಜಿಟಲ್‌ ಸ್ಕ್ರೀನ್‌, ಸ್ಪೀಕರ್‌ ಹೀಗೆ ಎಲ್ಲವೂ ಇದೆ. ಆದರೆ ಜಿಲ್ಲಾ ಬಿಜೆಪಿ ಅಥವಾ ಕ್ಷೇತ್ರಕ್ಕೆ ಆಯ್ಕೆಯಾಗುವ ಅಭ್ಯರ್ಥಿ ತಮಗೆ ಬೇಕಾದವೀಡಿಯೋಗಳನ್ನು ಅದರಲ್ಲಿ ಬಿತ್ತರಿಸುವಂತಿಲ್ಲ. ರಾಜ್ಯ ಸಮಿತಿ ನೀಡುವ ವೀಡಿಯೋಗಳನ್ನು ಎಲ್ಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಪ್ರಸಾರ ಮಾಡಬೇಕು. ಕ್ಷೇತ್ರದಲ್ಲಿ ತಾವಾಗಿಯೇ ಸಿದ್ಧಪಡಿಸುವ ವೀಡಿಯೋ ಗಳನ್ನು ಪ್ರಸಾರ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಯಾಗುವ ಸಾಧ್ಯತೆ ಇದೆ. ಏಕರೂಪ ವೀಡಿಯೋ ಬಿತ್ತ ರಿಸಲುಬೇಕಾದ ಅನುಮತಿಯನ್ನು ರಾಜ್ಯದಿಂದಲೇ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಸರಕಾರದ ಸಾಧನೆ, ಬಿಜೆಪಿ ಪ್ರಚಾರ ಪ್ರಕ್ರಿಯೆಗೆ ಬಂದಿದ್ದ ಪ್ರಗತಿ ರಥಕ್ಕೂ ನೀತಿ ಸಂಹಿತೆಯ ಬಿಸಿ ತಟ್ಟಿದ್ದು, ಸದ್ಯದ ಮಟ್ಟಿಗೆ ಪ್ರಚಾರ ಕಾರ್ಯ ಮೊಟಕುಗೊಳಿಸಿರುವ ರಥ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಮೂಕ ಹಕ್ಕಿಯಂತೆ ನಿಂತಿದೆ.

~ ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next