ಮಂಡ್ಯ: ಜಿಲ್ಲಾ ಕೇಂದ್ರವಾದ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದು, ಅವರೇ ಖುದ್ದು ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ನಿರಾಸೆಯಾಯಿತು.
ಕಳೆದ ಎರಡು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಬದಲಾಯಿಸಿ ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ನಾಮಪತ್ರ ಸಲ್ಲಿಕೆ ಕೊನೇ ದಿನ ಕುಮಾರಸ್ವಾಮಿಯೇ ಖುದ್ದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಲ್ಲಿದ್ದರು.
ಜೆಡಿಎಸ್‌ನ ಬಹುತೇಕ ಮಂದಿ, ಶಾಸಕ ಎಂ.ಶ್ರೀನಿವಾಸ್ ಬೆಂಬಲಿಗರು, ಕಾರ್ಯ ಕರ್ತರು ತಮ್ಮ ಶಕ್ತಿ ಪ್ರದರ್ಶನ ಮಾಡಿ ದರು. ಜೆಡಿಎಸ್‌ನ ಕಾರ್ಯಕರ್ತರು ಛಿದ್ರವಾಗಲಿದ್ದಾರೆ. ಅವರ ಬೆನ್ನಿಗೆ ಕುಮಾರಸ್ವಾಮಿ ನಿಲ್ಲಲಿದ್ದು, ಕಾರ್ಯಕರ್ತರ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿಯೇ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಮಧ್ಯಾಹ್ನ 3 ಗಂಟೆಯ ಅನಂತರ ಆ ವಿಶ್ವಾಸ, ನಿರೀಕ್ಷೆ ಹುಸಿಯಾಯಿತು.
ಕ್ಷೇತ್ರ ಹೈವೋಲ್ಟೆಜ್ ನಿರೀಕ್ಷೆ: ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಂಸದೆ ಸುಮಲತಾ ಫುಲ್ ಅಲರ್ಟ್ ಆಗಿದ್ದರು. ಕುಮಾರಸ್ವಾಮಿ ಅವರು ಸ್ಪರ್ಧಿಸಿದರೆ ಅವರ ವಿರುದ್ಧ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದರ ನಡುವೆ ಕುಮಾರಸ್ವಾಮಿ ಹಾಗೂ ಸುಮಲತಾ ಹೆಸರಿನಲ್ಲಿ ನಗರದ ಎಚ್‌ಡಿಎಫ್‌ಸಿ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಯಲಾಗಿತ್ತು. ಅಲ್ಲದೆ, ದಾಖಲಾತಿಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಬ್ಬರೂ ನಾಮಪತ್ರ ಸಲ್ಲಿಸಲಿದ್ದು, ಮಂಡ್ಯ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಲಿದೆ ಎಂಬ ಚರ್ಚೆಗಳು ಜೋರಾಗಿಯೇ ನಡೆದಿತ್ತು.
ಬೆಳಗ್ಗೆಯಿಂದಲೂ ಕುತೂಹಲ: ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದರಿಂದ ಕುಮಾರಸ್ವಾಮಿ, ಸುಮಲತಾ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಬೆಳಗ್ಗೆ ಮದ್ದೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡ ಎಸ್.ಗುರುಚರಣ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಹಾಸನಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಹೊರಬಿತ್ತು. ಆದರೆ ಕುಮಾರಸ್ವಾಮಿ ಮಂಡ್ಯ ಬಿಟ್ಟು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ. ಕೊನೇ ಕ್ಷಣದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತ ಸುಮಲತಾ ಕೂಡ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಪರ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆಯವರೆಗೂ ಅಲ್ಲೇ ಇದ್ದ ಸುಮಲತಾ ನಂತರ ಹೊರ ಬಂದರು.
ಈ ಎಲ್ಲದರ ನಡುವೆ ಕುಮಾರಸ್ವಾಮಿ ಅವರು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸುವ ಬಗ್ಗೆ ಚರ್ಚೆಗಳು ಆರಂಭಗೊಂಡವು. ಚುನಾವಣೆಗೆ ಸುಮಲತಾ ಸ್ಪರ್ಧಿಸದಂತೆ ತಡೆಯುವ ಹಿನ್ನೆಲೆಯಲ್ಲಿ ಮೊದಲು ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಸಿ ಅನಂತರ ತಮ್ಮ ಆಪ್ತರ ಮೂಲಕ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿ ದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಎಲ್ಲ ರಾಜ ಕೀಯ ಚರ್ಚೆಗಳು, ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.