ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಮುಖಂಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿವಾದಕ್ಕೊಳಗಾಗಿದ್ದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವು ಎಂದಾದರೆ, ಸೋನಿಯಾ ಗಾಂಧಿ ವಿಷ ಕನ್ಯೆಯೇ ಎಂದು ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಈ ಚುನಾವಣೆ ಕರ್ನಾಟಕ ಮುಂದಿನ ಭವಿಷ್ಯದ ಚುನಾವಣೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ J. P. Nadda
ಯಲಬುರ್ಗಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಪರ ಗುರುವಾರ (ಎ.27) ರಾತ್ರಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಂತಹ ನಾಯಕನನ್ನು ಹಾವಿಗೆ ಹೋಲಿವುವುದು ಸರಿಯೇ ಎಂದು ತಿರುಗೇಟು ನೀಡಿದ್ದಾರೆ.
ಭಾರತದ ಘನತೆಗೆ ಧಕ್ಕೆ ತಂದಿರುವ ಸೋನಿಯಾ ಗಾಂಧಿ ಚೀನಾ ಮತ್ತು ಪಾಕ್ ಏಜೆಂಟರಂತೆ ಕೆಲಸ ಮಾಡುತ್ತಿರುವುದಾಗಿ ಯತ್ನಾಳ್ ಆರೋಪಿಸಿದ್ದಾರೆ. ಸೋನಿಯಾ ವಿಷಯ ಕನ್ಯೆಯೇ ಎಂದು ಪ್ರಶ್ನಿಸಿರುವ ಯತ್ನಾಳ್, ರಾಹುಲ್ ಗಾಂಧಿ ಹುಚ್ಚ ಎಂದು ಟೀಕಿಸಿದ್ದು, ಮೌನ್ ಸಿಂಗ್ (ಮನಮೋಹನ್ ಸಿಂಗ್) ಅವರು ಪ್ರಧಾನಿಯಾಗಿದ್ದೇ ದುರಂತ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಲಿಂಗಾಯತರು ಭ್ರಷ್ಟರು ಅಂತ ಹೇಳುತ್ತಾರೆ. ಇಡೀ ಸಮುದಾಯವನ್ನು ಭ್ರಷ್ಟರು ಎಂದು ಹೇಳುವುದು ಸರಿಯಲ್ಲ. ಕಾಂಗ್ರೆಸ್ ನವರಿಗೆ ತಾಕತ್ ಇದ್ದರೆ ಲಿಂಗಾಯತ ಸಿಎಂ ಘೋಷಣೆ ಮಾಡಲಿ. ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಯತ್ನಾಳ್ ಈ ಸಂದರ್ಭದಲ್ಲಿ ವ್ಯಂಗ್ಯವಾಡಿದರು.