Advertisement

Election 2023: ಹೇಗಿತ್ತು BJP, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ?

12:17 AM Apr 20, 2023 | Team Udayavani |

ಹೆಚ್ಚು ಕಡಿಮೆ ಮೂರು ಪಕ್ಷಗಳೂ ಅಭ್ಯರ್ಥಿಗಳನ್ನು ಅಖೈರುಗೊಳಿಸುವಲ್ಲಿ ಅಂತಿಮ ಹಂತಕ್ಕೆ ಬಂದಿವೆ. ಬಿಜೆಪಿ, ಕಾಂಗ್ರೆಸ್‌ ಅಳೆದು ತೂಗಿ ಟಿಕೆಟ್‌ ಘೋಷಣೆ ಮಾಡಿದ್ದರೂ ಬಂಡಾಯಕ್ಕೇನೂ ಕಡಿಮೆ ಇರಲಿಲ್ಲ. ಈ ಪಕ್ಷಗಳ ಬಂಡಾಯವನ್ನು ಜೆಡಿಎಸ್‌ ಲಾಭ ಮಾಡಿಕೊಂಡಿದೆ. ಹಾಗಾದರೆ ಮೂರು ಪಕ್ಷಗಳು      ಅಭ್ಯರ್ಥಿಗಳನ್ನು ಅಖೈರು ಮಾಡಿದ್ದು ಹೇಗೆ? ಆದ ಸಮಸ್ಯೆ ಏನು? ಮೂರು ಪಕ್ಷಗಳ ಕುರಿತ ವರದಿ ಇಲ್ಲಿದೆ…

Advertisement

ಕಮಲ ಪಡೆ ಸೋಲು- ಗೆಲುವು ಎಲ್ಲವೂ ವರಿಷ್ಠರದೇ

ಬೆಂಗಳೂರು: ಒಟ್ಟು ನಾಲ್ಕು ಹಂತದಲ್ಲಿ ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪೂರ್ಣಗೊಳ್ಳುವುದಕ್ಕೆ ಒಟ್ಟು 21 ದಿನಗಳು ಬೇಕಾಗಿದ್ದು, ಎಲ್ಲವೂ ರಾಷ್ಟ್ರೀಯ ನಾಯಕರ ಕಣ್ಣಂಚಿನಲ್ಲೇ ನಡೆದಿರುವುದು ವಿಶೇಷ.

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಪ್ರತೀ ಬಾರಿಯಂತೆ ನಿಧಾನ ನಡೆಯನ್ನೇ ಅನುಸರಿಸಿದೆ. ಅಳೆದು-ತೂಗಿ ಮೊದಲ ಹಂತದಲ್ಲಿ 189 ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಯಾವುದೇ ವಿವಾದ ಸೃಷ್ಟಿಯಾಗದೇ ಇದ್ದರೂ ಮೂರನೇ ಪಟ್ಟಿ ಬಿಡುಗಡೆಗೆ ಮುನ್ನವೇ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಂಡಾಯದ ಬಾವುಟ ಹಾರಿಸಿ ಹೊರ ನಡೆದರು. ಮೊದಲ ಪಟ್ಟಿಯಲ್ಲಿ ಟಿಕೆಟ್‌ ವಂಚಿತರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾದಿಯಲ್ಲೇ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆಗೊಂಡರು. ಮಾನ್ವಿ ಹಾಗೂ ಶಿವಮೊಗ್ಗ ನಗರ ಟಿಕೆಟ್‌ ಮಾತ್ರ ಕೊನೆಯಲ್ಲಿ ಉಳಿಯಿತು.

ಮಾ.31ರಿಂದ ಬಿಜೆಪಿಯ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿತು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೋರ್‌ ಕಮಿಟಿ ಸಭೆ ಕರೆದ ಬಿಜೆಪಿ ಅಲ್ಲಿನ ಬೂತ್‌ ಪ್ರಮುಖರು, ಶಕ್ತಿ ಕೇಂದ್ರ, ಮಾಹಶಕ್ತಿ ಕೇಂದ್ರಗಳ ಸದಸ್ಯರಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಇದೇ ಮೊದಲ ಬಾರಿಗೆ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಇದರ ಆಧಾರದ ಮೇಲೆಯೇ ಹೊಸಮುಖಗಳು ಹಾಗೂ ಕಾರ್ಯಕರ್ತರಿಗೆ ಟಿಕೆಟ್‌ ನೀಡುವ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಳ್ಳಲಾಯಿತು ಎಂಬುದು ಈಗ ಬಿಜೆಪಿ ನೀಡುತ್ತಿರುವ ಸಮಜಾಯಿಸಿ.

Advertisement

ಜಿಲ್ಲಾ ಕೋರ್‌ ಕಮಿಟಿ ಸಭೆಯ ಬಳಿಕ ಬೆಂಗಳೂರಿನ ಹೊರ ವಲಯದಲ್ಲಿ ಚುನಾವಣಾ ಸಮಿತಿ ಸಭೆ ನಡೆಸಿದ ಬಿಜೆಪಿ ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರಿಂದ ಮಾಹಿತಿ ವಿಶ್ಲೇಷಣೆ ನಡೆಸಿತು. ಆ ಬಳಿಕ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಬಿ.ಎಸ್‌.ಯಡಿಯೂರಪ್ಪ , ಸಿ.ಟಿ.ರವಿ ಸಹಿತ ಪಕ್ಷದ ಘಟಾನುಘಟಿ ನಾಯಕರು ಪ್ರತಿಯೊಬ್ಬ ಅಭ್ಯರ್ಥಿಯ ಸಾಮರ್ಥ್ಯ, ಗುಣಾವಗುಣಗಳನ್ನು ವಿಶ್ಲೇಷಿಸಿ ಪ್ರತೀ ಕ್ಷೇತ್ರಕ್ಕೆ ತಲಾ ಮೂವರು ಆಕಾಂಕ್ಷಿಗಳ ಹೆಸರನ್ನು ಅಂತಿಮಗೊಳಿಸಿ ದಿಲ್ಲಿಗೆ ಕಳುಹಿಸಲಾಯಿತು. ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ 52 ಹೊಸಮುಖಗಳಿಗೆ ಅವಕಾಶ ನೀಡುವ ಮಹತ್ವದ ನಿರ್ಧಾರದ ಜತೆಗೆ ಹಲವು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆದಾಗಿಯೂ ಬಿಜೆಪಿಯ ಪಟ್ಟಿ ಅಲ್ಲಲ್ಲಿ ಬಂಡಾಯ ಸೃಷ್ಟಿಸಿದ್ದಂತೂ ಸುಳ್ಳಲ್ಲ.

ವಿಶೇಷವಾಗಿ ಕಟ್ಟಾ ಬೆಂಬಲಿಗರೆಂದು ಹೇಳಿಕೊಂಡ ಜಗದೀಶ್‌ ಶೆಟ್ಟರ್‌ ಅವರಂತಹವರೇ ಬಿಜೆಪಿ ವಿರುದ್ಧ ಸಿಡಿದೆದ್ದರು. ಆಯನೂರು ಮಂಜುನಾಥ್‌, ಮೂಡಿಗೆರೆ ಕುಮಾರಸ್ವಾಮಿ ಸಹಿತ ಹಲವು ಟಿಕೆಟ್‌ ವಂಚಿತರು ಪಕ್ಷ ತೊರೆದರು. ಅಷ್ಟೇ ಅಲ್ಲ ಪಕ್ಷಕ್ಕೆ ಸಾಕಷ್ಟು ಹಾನಿಯನ್ನು ಮಾಡಿ ಹೋಗಿದ್ದಾರೆ. ವಿಶೇಷವಾಗಿ ಶೆಟ್ಟರ್‌ ಸಿಡಿಸಿದ ಬಾಂಬ್‌ ಹಲವರ ಸಂತೋಷವನ್ನು ಹಾಳು ಮಾಡಿದೆ. ಟಿಕೆಟ್‌ ಹಂಚಿಕೆಯಲ್ಲಿ ಅಗಿರುವ ಎಡವಟ್ಟುಗಳು ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕಕ್ಕೆ ಒಳಗಾಗಿರುವ ಕಮಲ ಪಡೆ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ.

ಎಂದಿನಂತೆ ಈ ಬಾರಿಯೂ ಗಜಪ್ರಸವ ಕಾಂಗ್ರೆಸ್‌ ಪಟ್ಟಿ

ಬೆಂಗಳೂರು: “ಟಿಕೆಟ್‌ ಹಂಚಿಕೆಯಲ್ಲಿ ಈ ಬಾರಿ ತಮಗೆ ಗೊಂದಲವೇ ಇಲ್ಲ; ಎಲ್ಲವೂ ಕ್ಲಿಯರ್‌ ಆಗಿದ್ದು, ಎಲ್ಲರಿಗಿಂತ ಮೊದಲೇ ಪಟ್ಟಿ ಬಿಡುಗಡೆ ಮಾಡ್ತೀವಿ’ ಅಂತ ಘೋಷಿಸಿತ್ತು ಕಾಂಗ್ರೆಸ್‌. ಅದರಂತೆ ಸಲೀಸಾಗಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಹೊರಬಿದ್ದಿತು. ಆದರೆ ಅನಂತರದ ಒಂದೊಂದು ಪಟ್ಟಿಯೂ “ಕೈ’ ಪಾಲಿಗೆ ಗಜಪ್ರಸವ ಆಯಿತು!

“ಕೈ’ ಪಾಳಯ ಮೊದಲ ಪಟ್ಟಿ ಬಿಡುಗಡೆಯಾದಾಗ ತಾನು ಈ ಮೊದಲೇ ನೀಡಿದ ಹೇಳಿಕೆಗೆ ಬದ್ಧವಾಗಿರುವ ಮುನ್ಸೂಚನೆಯೂ ಇತ್ತು. ಆದರೆ ಅನಂತರದ ಬೆಳವಣಿಗೆಗಳು ಮತ್ತದೆ ಹಿಂದಿನ “ಚಾಳಿ’ ಮರುಕಳಿಸುವಂತೆ ಮಾಡಿದವು. ಪರಿಣಾಮ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದರೂ ಪೂರ್ಣಪ್ರಮಾಣದ ಪಟ್ಟಿ ಹೊರಬಿದ್ದಿಲ್ಲ. ಬುಧವಾರ ತಡರಾತ್ರಿವರೆಗೂ ಕಸರತ್ತು ನಡೆದಿತ್ತು.

ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೊದಲ ಪಟ್ಟಿ ಮಾರ್ಚ್‌ 25ಕ್ಕೆ ಬಿಡುಗಡೆಗೊಂಡಿತು. ಅದರಲ್ಲಿ ಬಹುತೇಕರು ಹಾಲಿ ಶಾಸಕರಾಗಿದ್ದು, ಹೆಚ್ಚು ಪೈಪೋಟಿ ಇರಲಿಲ್ಲ. ಹಾಗಾಗಿ ಸಮಸ್ಯೆಯೂ ಆಗಲಿಲ್ಲ. ಎರಡನೇ ಪಟ್ಟಿಯಲ್ಲಿ ಚೌಕಾಸಿ ಶುರುವಾಯಿತು. ಜಿಲ್ಲಾಮಟ್ಟದ ಹಲವು ಸುತ್ತಿನ ಸ್ಕ್ರೀನಿಂಗ್‌ ಕಮಿಟಿ ಸಭೆಗಳು ನಡೆದವು. ಅಲ್ಲಿಂದ ರಾಜ್ಯ ನಾಯಕರು ಮತ್ತೂಂದು ಹಂತದ ಸ್ಕ್ರೀನಿಂಗ್‌ ಮಾಡಿದರು. ಈ ಮಧ್ಯೆ ಹೈಕಮಾಂಡ್‌ “ಮೂರ್‍ನಾಲ್ಕು ಆಕಾಂಕ್ಷಿಗಳನ್ನು ತರಬೇಡಿ; ಇಬ್ಬರಿಂದ ಮೂವರಿಗೇ ಸೀಮಿತಗೊಳಿಸಿ ತರುವಂತೆ’ ತಾಕೀತು ಮಾಡಿತು. ಇದರಿಂದ ಮತ್ತೆ ಕೂಡಿ-ಕಳೆದು ಪರಿಷ್ಕೃತ ಆಕಾಂಕ್ಷಿಗಳ ಪಟ್ಟಿಯನ್ನು ಮುಂದಿಡಲಾಯಿತು. ಅಂತಿಮವಾಗಿ ಎಪ್ರಿಲ್‌ 6ರಂದು 42 ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಲಾಯಿತು. ಇಲ್ಲಿಂದ “ಕೈ’ಗೆ ಬಂಡಾಯದ ಬಿಸಿ ತಟ್ಟಲು ಆರಂಭಗೊಂಡಿತು.

ಅಳೆದು-ತೂಗಿದರೂ ಬಂಡಾಯದಲ್ಲಿ ಬೆಂದ “ಕೈ’!

ಎರಡನೇ ಪಟ್ಟಿ ಬಿಡುಗಡೆ ಮಾಡಲು ಹೈಕಮಾಂಡ್‌ಗೆ ಹೆಚ್ಚು-ಕಡಿಮೆ 12 ದಿನಗಳು ಹಿಡಿಯಿತು. ಅಷ್ಟೆಲ್ಲ ಅಳೆದು- ತೂಗಿ ಪಟ್ಟಿ ಸಿದ್ಧಗೊಳಿಸಿದರೂ ಪ್ರತಿರೋಧಗಳು ತಪ್ಪಲಿಲ್ಲ. ಕೆಲವು ಆಕಾಂಕ್ಷಿಗಳ ಬೆಂಬಲಿಗರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿದರೆ, ಹಲವರು ಸ್ಥಳೀಯವಾಗಿಯೇ ಆಕ್ರೋಶ ಹೊರಹಾಕಿದರು. ಈ ಮಧ್ಯೆ ಬಿಜೆಪಿ ಪಟ್ಟಿ ಕೂಡ ತಡವಾಗಿದ್ದರಿಂದ ಕಾಂಗ್ರೆಸ್‌ ಕಾದುನೋಡುವ ತಂತ್ರಕ್ಕೆ ಮೊರೆಹೋಯಿತು. “ಕಮಲ’ದ ಮೊದಲ ಪಟ್ಟಿಯಲ್ಲೇ ಬಂಡಾಯದ ಬೆಂಕಿ ವ್ಯಾಪಕವಾಯಿತು. ಅಲ್ಲಿಂದ ಅತೃಪ್ತರನ್ನು ಕರೆತರುವ ಪ್ರಕ್ರಿಯೆ ಶುರುವಾಯಿತು.

ಹೀಗೆ ಕರೆತಂದವರಿಗೆ 43 ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಮಣೆ ಹಾಕಲಾಯಿತು. ಇಲ್ಲಿ ಬೆಳಗಾವಿಯ ಅಥಣಿ, ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಾಗಿ ಹೇಳಿದ್ದ ಕೋಲಾರ ಸಹಿತ ಕುತೂಹಲ ಕೆರಳಿಸಿದ್ದ ಹಲವು ಪ್ರತಿಷ್ಠಿತ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಯಿತು. ಆದರೂ ಹಾಲಿ-ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರಗಳಿಗೆ ಯಾರು ಎಂಬ ಪ್ರಶ್ನೆ ಹಾಗೇ ಉಳಿದಿತ್ತು. ಮಂಗಳವಾರವಷ್ಟೇ ಬಿಡುಗಡೆ ಮಾಡಿದ 7 ಅಭ್ಯರ್ಥಿಗಳ ಪಟ್ಟಿಯಲ್ಲಿ ಆ ಕುತೂಹಲಕ್ಕೂ ತೆರೆಬಿದ್ದಿದೆ. ಇನ್ನೂ ಕೆಲವು ಕ್ಷೇತ್ರಗಳು ಕಗ್ಗಂಟಾಗಿಯೇ ಉಳಿದಿವೆ.

ಬಂಡಾಯದ “ಲಾಭ’ ಮಾಡಿಕೊಂಡ ಜೆಡಿಎಸ್‌

ಬೆಂಗಳೂರು: ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸಿದ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿನ ಬಂಡಾಯವನ್ನು ತನ್ನ ಇಡಗಂಟಾಗಿ ಮಾಡಿಕೊಳ್ಳುವ ಮೂಲಕ ಜಾಣ್ಮೆ ಮೆರೆದಿದೆ.

ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚೆಯೇ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿ ಅಚ್ಚರಿ ಮೂಡಿಸಿದ್ದ ಜೆಡಿಎಸ್‌ ಅನಂತರ ರಾಜಕೀಯ ಲೆಕ್ಕಾಚಾರದೊಂದಿಗೆ ಕಾದು ಕುಳಿತು ಒಂದಷ್ಟು ಪ್ರಬಲ ಅಭ್ಯರ್ಥಿಗಳಿಗೆ ಗಾಳ ಹಾಕಿ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಸಿಗದ ಮಾಜಿ ಸಚಿವರು, ಮಾಜಿ ಶಾಸಕರ ಸಮೇತ ತೆನೆ ಹೊತ್ತ ಜೆಡಿಎಸ್‌ನತ್ತ ಗುಳೇ ಬಂದಿದ್ದು, ತೆನೆ ಹೊತ್ತ ಮಹಿಳೆಗೆ ನಿರೀಕ್ಷೆಗಿಂತ ದೊಡ್ಡ ಮಟ್ಟದ ಬಲವೇ ಬಂದಂತಾಗಿದೆ.

ಅದರಲ್ಲೂ ಪ್ರಮುಖವಾಗಿ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ. ಮಧ್ಯ ಕರ್ನಾಟಕ. ಮಲೆನಾಡು ಭಾಗದಲ್ಲಿ ಜೆಡಿಎಸ್‌ ಬಲವರ್ಧನೆಗೂ  ಈ ಪಕ್ಷಾಂತರ ಸಹಾಯವಾಗುವ ನಿರೀಕ್ಷೆಯಿದೆ.

ಹಿಂದುಳಿದ ಸಮುದಾಯದ ಚಿತ್ರದುರ್ಗದ ರಘು ಆಚಾರ್‌, ಬಳ್ಳಾರಿಯ ಅನಿಲ್‌ ಲಾಡ್‌, ಹಾನಗಲ್‌ನ ಮನೋಹರ ತಹಸೀಲ್ದಾರ್‌, ಲಿಂಗಾಯತ ಸಮುದಾಯದ ಜೇವರ್ಗಿಯ ದೊಡ್ಡಪ್ಪಗೌಡ ನರಿಬೋಳ್‌, ಶಹಪುರದ ಗುರುಪಾಟೀಲ್‌ ಶಿರವಾಳ, ಶಿವಮೊಗ್ಗದ ಆಯನೂರು ಮಂಜುನಾಥ್‌, ಜಗಳೂರಿನ ಎಚ್‌.ಪಿ.ರಾಜೇಶ್‌, ಚನ್ನಗಿರಿಯ ತೇಜಸ್ವಿ ಪಟೇಲ್‌, ಅರಸೀಕೆರೆಯ ಎನ್‌.ಆರ್‌. ಸಂತೋಷ್‌, ರೆಡ್ಡಿ ಲಿಂಗಾಯತ ಸಮುದಾಯದ ಯಾದಗಿರಿಯ ಎ.ಬಿ.ಮಾಲಕರೆಡ್ಡಿ, ಪರಿಶಿಷ್ಟ ಸಮುದಾಯದ ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ,  ಎಸ್‌ಟಿ ಸಮುದಾಯದ ಮಾಯಕೊಂಡ ಸವಿತಾ ಮಲ್ಲೇಶ್‌, ನೇಮಿರಾಜ್‌ ನಾಯ್ಕ,  ಒಕ್ಕಲಿಗ ಸಮುದಾಯದ ಅರಕಲಗೂಡಿನ ಎ.ಮಂಜು, ಮದ್ದೂರಿನ ಗುರುಚರಣ್‌ ಹೀಗೆ ಎಲ್ಲ ಸಮುದಾಯದ ನಾಯಕರು ಜೆಡಿಎಸ್‌ಗೆ ಸಿಕ್ಕಂತಾಗಿದೆ.

ಅದರಲ್ಲೂ ಚಿತ್ರದುರ್ಗ, ಅರಕಲಗೂಡು, ಮೂಡಿಗೆರೆ, ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಹಳಿಯಾಳದ ಘೋಕ್ಲೃಕರ್‌, ಸವದತ್ತಿಯ ಸೌರಬ್‌ ಚೋಪ್ರಾ, ಅರಸೀಕೆರೆಯ ಎನ್‌.ಆರ್‌.ಸಂತೋಷ್‌ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಬಲ ಪೈಪೋಟಿ ಕೊಡುವ ಅಭ್ಯರ್ಥಿಗಳಾಗಿ ಅಖಾಡದಲ್ಲಿರುವುದು ವಿಶೇಷ.

ಮತ್ತೂಂದೆಡೆ ಕಡೂರಿನಲ್ಲಿ ವೈ.ಎಸ್‌.ವಿ.ದತ್ತಾ ಕಾಂಗ್ರೆಸ್‌ಗೆ ಹೋಗಿ ಮರಳಿ ಜೆಡಿಎಸ್‌ನತ್ತ ಬಂದಿದ್ದು, ಅರಕಲಗೂಡು, ಅರಸೀಕರೆ, ಗುಬ್ಬಿ, ಕೋಲಾರ ಸಹಿತ ಹಾಲಿ ಶಾಸಕರೇ ಪಕ್ಷಾಂತರ ಮಾಡಿದರೂ ಪ್ರಬಲ ಅಭ್ಯರ್ಥಿಗಳು ಸಿಕ್ಕಿರುವುದು ಪಕ್ಷದ ನಾಯಕರಲ್ಲಿ ಸಂಖ್ಯಾಬಲ ಕುಸಿತದ ಆತಂಕ ದೂರ ಮಾಡಿದೆ.

ಪಕ್ಷಾಂತರ ಹಾಗೂ ಅಭ್ಯರ್ಥಿಗಳ ಕೊರತೆಯಿಂದ ಸ್ಪರ್ಧೆ ಕಷ್ಟವಾಗಬಹುದು

ಎಂಬ ಅಂದಾಜು ಮಾಡಲಾಗಿತ್ತಾದರೂ ಕ್ರಮೇಣ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಸೇರ್ಪಡೆಯಿಂದ ಜೆಡಿಎಸ್‌ನ ಲೆಕ್ಕಾಚಾರವೂ ಬದಲಾಗಿದೆ. ಜೆಡಿಎಸ್‌ 30 ರಿಂದ 40

ಎಂಬ ರಾಜಕೀಯ ಸಮೀಕ್ಷಾ ವರದಿಗಳು ಸುಳ್ಳಾಗಲಿವೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನೇರ ಪೈಪೋಟಿಯನ್ನೇ ನೀಡಲಿದೆ ಎಂದು ನಾಯಕರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next