Advertisement

eKYC, ಆಧಾರ್‌ ಸೀಡಿಂಗ್‌ ತೊಡಕು: ಫ‌ಲಾನುಭವಿಗಳ ಕೈ ಸೇರದ ಕೃಷಿ ಸಮ್ಮಾನ್‌

10:59 PM Oct 28, 2023 | Team Udayavani |

ಉಡುಪಿ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ ಕೃಷಿ ಸಮ್ಮಾನ್‌ ಮೂಲಕ ಹಲವಾರು ರೈತರು ಪ್ರಯೋಜನ ಪಡೆದುಕೊಂಡಿದ್ದರೂ ಪ್ರಸ್ತುತ ಆಧಾರ್‌ ಇಕೆವೈಸಿ ಹಾಗೂ ಆಧಾರ್‌ ಸೀಡಿಂಗ್‌ ಮಾಡದ ಕಾರಣ ಉಡುಪಿ ಜಿಲ್ಲೆಯ 13 ಸಾವಿರ ಹಾಗೂ ದ.ಕ. ಜಿಲ್ಲೆಯ 20,400 ಮಂದಿ ಫ‌ಲಾನುಭವಿಗಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.

Advertisement

ಈ ಯೋಜನೆಯ ಆರಂಭದಲ್ಲಿ ಆಧಾರ್‌ ಅನ್ನು ಬ್ಯಾಂಕ್‌ ಅಕೌಂಟ್‌ಗೆ ಲಿಂಕ್‌ ಮಾಡುವಂತೆ ಸೂಚಿಸಲಾಗಿತ್ತು. ಲಿಂಕ್‌ ಆಗಿರುವ ಖಾತೆಗಳಿಗಷ್ಟೇ ಕೃಷಿ ಸಮ್ಮಾನ್‌ ಹಣ ಜಮೆಯಾಗುತ್ತಿತ್ತು. ಬಳಿಕ ಇ ಕೆವೈಸಿ ಜತೆಗೆ ಆಧಾರ್‌ ಸೀಡಿಂಗ್‌ ಕಡ್ಡಾಯ ಗೊಳಿಸಲಾಗಿತ್ತು. ಬ್ಯಾಂಕ್‌ ಖಾತೆ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿ ಎನ್‌ಪಿಸಿಐ ಮ್ಯಾಪಿಂಗ್‌ ಮಾಡಿದರಷ್ಟೇ ಫ‌ಲಾನುಭವಿಗಳ ಖಾತೆಗೆ ಕೃಷಿ ಸಮ್ಮಾನ್‌ ಹಣ ಜಮೆಯಾಗಲಿದೆ.

ಏನಿದು ಆಧಾರ್‌ ಸೀಡಿಂಗ್‌?
ಸರಕಾರ ವಿವಿಧ ಯೋಜನೆಗಳ ಮೂಲಕ ನೀಡುವ ಹಣವನ್ನು ಫ‌ಲಾನುಭವಿಗಳ ಆಧಾರ್‌ ಸಂಖ್ಯೆಯ ಮೂಲಕ ಬ್ಯಾಂಕ್‌ ಖಾತೆಗಳಿಗೆ ಹಾಕಲಾಗುತ್ತದೆ. ಆದರೆ ಫ‌ಲಾನುಭವಿಗಳು ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೆ ನಿರ್ದಿಷ್ಟ ಬ್ಯಾಂಕ್‌ನ ಅಕೌಂಟ್‌ ಸಂಖ್ಯೆಯನ್ನು ನೀಡುವ ಜತೆಗೆ ಆ ಅಕೌಂಟ್‌ಗೆ ಆಧಾರ್‌ ಸೀಡಿಂಗ್‌ ಮಾಡಬೇಕಾಗುತ್ತದೆ. ಈಗಾಗಲೇ ಸೀಡಿಂಗ್‌ ಮಾಡಿದ್ದರೂ ಈ ನಡುವೆ ಫ‌ಲಾನುಭವಿ ಮತ್ತೂಂದು ಬ್ಯಾಂಕ್‌ನಲ್ಲಿ ಅಕೌಂಟ್‌ ಮಾಡಿದ್ದರೆ ಹೊಸ ಖಾತೆಯನ್ನೇ ತೋರಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಫ‌ಲಾನುಭವಿಗಳು ಮತ್ತೂಮ್ಮೆ ಬ್ಯಾಂಕ್‌ಗೆ ತೆರಳಿ ಯೋಜನೆಯ ಹಣ ಹೋಗಬೇಕಾದ ಬ್ಯಾಂಕ್‌ ಖಾತೆಯನ್ನು ಆ ಬ್ಯಾಂಕ್‌ ನೀಡುವ ಫಾರ್ಮ್ ಭರ್ತಿ ಮಾಡಿ ಸೀಡಿಂಗ್‌ ಮಾಡಬೇಕಾಗುತ್ತದೆ.

ಸೌಲಭ್ಯ ವಂಚಿತರು
ಕೆಲವರು 13 ಹಾಗೂ 14ನೇ ಕಂತಿನ ಕೃಷಿ ಸಮ್ಮಾನ್‌ ಹಣ ತಮ್ಮ ಖಾತೆಗೆ ಜಮೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇಕೆವೈಸಿ, ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿದ್ದರೂ ಆಧಾರ್‌ ಸೀಡಿಂಗ್‌ ಮಾಡದ ಕಾರಣ ಈ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಸೀಡಿಂಗ್‌ ಮಾಡಿದರೆ ಮುಂದಿನ ಕಂತು ಪಾವತಿಯಾಗಬಹುದು. 1 ಅಥವಾ 2 ಕಂತಿನ ಹಣ ಪಾವತಿಯಾಗದವರಿಗೆ ಸಂಬಂಧಪಟ್ಟ ಇಲಾಖೆಯವರು ಮರುಪಾವತಿಸಿದರೆ ಅದು ಮತ್ತೆ ಖಾತೆಗೆ ಜಮೆಯಾಗಲು ಸಾಧ್ಯವಿದೆ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿಯೊಬ್ಬರು.

ಇ ಕೆವೈಸಿ ಸಹಿತ ಆಧಾರ್‌ ಸೀಡಿಂಗ್‌ ಮಾಡದ ಕಾರಣ ಕೆಲವು ಮಂದಿ ಫ‌ಲಾನುಭವಿಗಳಿಗೆ ಕಿಸಾನ್‌ ಸಮ್ಮಾನ್‌ ಹಣ ಪಾವತಿಯಾಗದೆ ಇರಬಹುದು. ಅಂತಹವರು ಕೂಡಲೇ ಬ್ಯಾಂಕ್‌ಗೆ ತೆರಳಿ ಇಕೆವೈಸಿ ಅಪ್‌ಡೇಟ್‌ ಮಾಡುವ ಜತೆಗೆ ಆಧಾರ್‌ ಸೀಡಿಂಗ್‌ ಕೂಡ ಮಾಡಬೇಕು.
-ಡಾ| ಸೀತಾ ಎಂ.ಸಿ.,
ಡಾ| ಕೆಂಪೇಗೌಡ
ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next