ನವದೆಹಲಿ: ದುಬೈನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾನ್‌ಪ್ರಿಯಲ್ಲಿ ಭಾರತೀಯ ತಂಡವು ಒಟ್ಟಾರೆ ಏಳು ಪದಕ ಗೆದ್ದು ತವರಿಗೆ ಮರಳಿದೆ. ತಂಡದಲ್ಲಿದ್ದ ಏಕ್ತಾ ಭ್ಯಾನ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ಭ್ಯಾನ್ ವೀಲ್‌ಚೇರ್ ಡಿಸ್ಕಸ್ ಎಫ್53 ವಿಭಾಗದಲ್ಲಿ 6.35 ಮೀ. ದೂರ ಎಸೆದು ಕಂಚಿನ ಪದಕ ಗೆದ್ದರು. ಉಕ್ರೇನ್‌ನ ಜೋಯಿಯಾ ಒವಿಸಿ(13.19 ಮೀ.) ಚಿನ್ನ ಪಡೆದಿದ್ದಾರೆ.
ಭಾರತ ತಂಡದಲ್ಲಿದ್ದ ಹಲವು ಯುವ ಆಟಗಾರರು ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಅನುಭವ ಪಡೆದರು. ಭಾರತ ಇಲ್ಲಿ ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದಿದೆ. ದುಬೈ ಕೂಟದಲ್ಲಿ ಒಟ್ಟಾರೆ ಏಳು ವಿಶ್ವ ದಾಖಲೆ ಮತ್ತು 45 ವಲಯ ದಾಖಲೆಗಳು ನಿರ್ಮಾಣವಾಗಿವೆ. ಪದಕ ಪಟ್ಟಿಯಲ್ಲಿ ಚೀನಾ 102 ಪದಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಉಕ್ರೇನ್ ದ್ವಿತೀಯ ಮತ್ತು ಉಜ್ಬೆಕಿಸ್ಥಾನ ಮೂರನೇ ಸ್ಥಾನ ಪಡೆದಿದೆ. ಭಾರತ 28ನೇ ಸ್ಥಾನದಲ್ಲಿದೆ.