Advertisement

ಎಕ್ಕೂರು: ರಾಮಕೃಷ್ಣ ಮಿಷನ್‌ ವತಿಯಿಂದ ಶ್ರಮದಾನ 

02:40 PM Jun 11, 2018 | |

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 35ನೇ ಶ್ರಮದಾನ ನಗರದ ಹೊರವಲಯದ ಎಕ್ಕೂರಿನಲ್ಲಿ ರವಿವಾರ ನಡೆಯಿತು. ಸ್ವಾಮಿ ಜಿತಕಾಮಾನಂದಜಿ ಮಹರಾಜ್‌ ಸಮಕ್ಷಮದಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪೂರ್ವ ನಿರ್ದೇಶಕ ದೇವಕಿ ಮುತ್ತುಕೃಷ್ಣನ್‌ ಅವರು ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು. ಮೋಹನ್‌ ಭಟ್‌, ಕಮಲಾಕ್ಷ ಪೈ, ಭಾಸ್ಕರ್‌
ಶೆಟ್ಟಿ, ವಸಂತಿ ನಾಯಕ್‌, ಯಶೋಧರ ಚೌಟ್‌, ಕಿರಣ್‌ ಫೆರ್ನಾಂಡಿಸ್‌, ಮಸಾಹಿರೊ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

Advertisement

ಅನುಕರಣೀಯ
ದೇವಕಿ ಮುತ್ತುಕೃಷ್ಣನ್‌ ಮಾತನಾಡಿ, ಸ್ವಚ್ಛ  ಮಂಗಳೂರು ಅಭಿಯಾನದಲ್ಲಿ ಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮಗಳು ನಡೆಯುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ. ಮನಸ್ಸುಗಳು ಹಸನಾದರೆ ನಮ್ಮ ಪರಿಸರ ಸಹಜವಾಗಿಯೇ ಸ್ವತ್ಛವಾಗುತ್ತದೆ. ಈ ದಿಸೆಯಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಈ ಯಶಸ್ವಿ ಸ್ವಚ್ಛತಾ ಅಭಿಯಾನ ದೇಶಾದ್ಯಂತ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ನಡೆಯುವಂತಾಗಬೇಕು. ಇಲ್ಲಿನ ಕಾರ್ಯಕರ್ತರ ಬದ್ಧತೆ ಹಾಗೂ ಶ್ರಮವನ್ನು ಕಾಣಬಹುದು. ಮಳೆಗಾಳಿಯನ್ನೂ ಲೆಕ್ಕಿಸದೇ ಮಾಡುವ ಈ ನಿಸ್ವಾರ್ಥ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯ ಎಂದರು.

ಶ್ರಮದಾನ
ಆರಂಭದಲ್ಲಿ ಮಳೆಯಿದ್ದರೂ ಲೆಕ್ಕಿಸದ ಕಾರ್ಯಕರ್ತರು ಸುಮಾರು ಹತ್ತುಗಂಟೆಯ ತನಕ ಶ್ರಮದಾನ ಮಾಡಿದರು. ಮೊದಲು ನೂತನವಾಗಿ ನಿರ್ಮಾಣ ಮಾಡಲ್ಪಟ್ಟ ತಂಗುದಾಣದ ಸುತ್ತಮುತ್ತ ಕಸ ಹೆಕ್ಕಿದರು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಪೇಪರ್‌ ತೆಗೆದು ಶುಚಿಗೊಳಿಸಿದರು. ಎಕ್ಕೂರ್‌ ಜಂಕ್ಷನ್‌ನಿಂದ ಸುಮಾರು ದೂರದವರೆಗೆ ಹೆದ್ದಾರಿಯ ಪಕ್ಕದಲ್ಲಿ ದೊಡ್ಡದಾಗಿ ಬೆಳೆದಿದ್ದ ಹುಲ್ಲು ಪೊದೆ ಕತ್ತರಿಸಿ ತೆರವು ಮಾಡಿ ಟಿಪ್ಪರಿಗೆ ಹಾಕಿ ಸಾಗಿಸಲಾಯಿತು. ಅನಂತರ ಜೇಸಿಬಿ ಸಹಾಯದಿಂದ ನೆಲವನ್ನು ಸಮತಟ್ಟು ಮಾಡಲಾಯಿತು. ಹುಲ್ಲು ಬೆಳೆದು ಕಸ ತುಂಬಿಕೊಂಡಿದ್ದ ಜಾಗವನ್ನು ಸ್ವತ್ಛವಾಗಿ ಸಮತಟ್ಟಾಗಿ ಆಟೋರಿಕ್ಷಾ ನಿಲ್ದಾಣವಾಗಿ ಬಳಸಲಾಗುತ್ತಿದೆ. ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ಮಾರ್ಗದಶನ ನೀಡಿದರು. ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಎಕ್ಕೂರಿನ ಅಂಗಡಿ ಹಾಗೂ ಮನೆಗಳನ್ನು ಸಂಪರ್ಕಿಸಿ ಸ್ವಚ್ಛತಾ ಜಾಗೃತಿ ಮೂಡಿಸಲಾಯಿತು.

ನಿರ್ವಹಣೆ
ತ್ಯಾಜ್ಯ ಬಿಸಾಡುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಹೂಕುಂಡಗಳನ್ನಿಟ್ಟು ಸುಂದರಗೊಳಿಸಲಾಯಿತು. ಕಾರ್ಯಕರ್ತರಾದ ಉದಯ ಕೆ.ಪಿ. ನೇತೃತ್ವದಲ್ಲಿ ಕಾಸ್ಸಿಯಾ ಪ್ರೌಢಶಾಲೆಯ ಮುಂಭಾಗದ ಫ‌ುಟ್‌ಪಾತ್‌ ಸ್ವಚ್ಛಗೊಳಿಸಿ, ಹೂಕುಂಡಗಳ ಹತ್ತಿರದ ಜಾಗದಲ್ಲಿ ಬೆಳೆದಿದ್ದ ಹುಲ್ಲು ತೆಗೆದು ಶುಚಿಗೊಳಿಸಲಾಯಿತು. ಅದೇ ರೀತಿ ಮಾರ್ನಮಿಕಟ್ಟೆಯ ಹತ್ತಿರದ ಹೂಕುಂಡಗಳನ್ನಿಟ್ಟ ಜಾಗವನ್ನು ಸ್ವಚ್ಛಗೊಳಿಸಿ ನಿರ್ವಹಣೆ ಮಾಡಲಾಯಿತು. ಚಿರಾಗ್‌, ಪ್ರಜ್ವಲ್‌, ವೈಶಾಖ್‌ ಮತ್ತಿತರರು ಶ್ರಮದಾನ ಮಾಡಿದರು.

ಎಕ್ಕೂರಿನ ಹಿಂದೂಯುವಸೇನೆ, ಅಯ್ಯಪ್ಪ ಭಜನ ಮಂದಿರ, ನಂದಾದೀಪ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯರು ಅಭಿಯಾನದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದರು. ಬಾಬಾ ಎಕ್ಕೂರ್‌, ಸತೀಶ್‌ ಟಿ., ತೇಜಸ್ವಿನಿ ಬಿ. ಆಚಾರ್ಯ, ಶರಣಬಸವ, ಅವಿನಾಶ್‌ ಅಂಚನ್‌, ರಾಜೇಶ್ವರಿ ವಿಜಯರಾಜ್‌ ಅಭಿಷೇಕ್‌ ವಿ.ಎಸ್‌. ಸೇರಿದಂತೆ ಅನೇಕ ಕಾರ್ಯಕರ್ತರು ಶ್ರಮದಾನಗೈದರು. ಶುಭೋದಯ ಆಳ್ವ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಅಭಿಯಾನದ ಬಳಿಕ ಎಲ್ಲರಿಗೂ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಭಿಯಾನಕ್ಕೆ ಎಂಆರ್‌ಪಿಎಲ್‌ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ ಎಂದು ಸ್ವಾಮಿ ಚಿದಂಬರಾನಂದಜಿ ಹಾಗೂ ಸ್ವಾಮಿ ಏಕಗಮ್ಯಾನಂದಜಿ ತಿಳಿಸಿದರು. 

Advertisement

ಎಕ್ಕೂರಿನಲ್ಲಿ ಬಸ್‌ ತಂಗುದಾಣ ನಿರ್ಮಾಣ
ಎಕ್ಕೂರ್‌ ಜಂಕ್ಷನ್‌ನಲ್ಲಿ ಸ್ಥಳೀಯರ ಸಹಕಾರದಿಂದ ನೂತನವಾಗಿ ಬಸ್‌ ತಂಗುದಾಣವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಬಹುದಿನಗಳಿಂದ ಬಸ್‌ ತಂಗುದಾಣಕ್ಕೆ ಸಂಬಂಧಪಟ್ಟ ಸರಕಾರಿ ಇಲಾಖೆಗಳಿಗೆ ಬೇಡಿಕೆ ಇಟ್ಟಿದ್ದರೂ ಇಲ್ಲಿಯತನಕ ಯಾವುದೇ ತೆರನಾದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸ್ವಚ್ಛ ಎಕ್ಕೂರು ತಂಡದ ವತಿಯಿಂದ ರಾಮಕೃಷ್ಣ ಮಿಷನ್‌ ಸಹಕಾರದೊಂದಿಗೆ ಬಸ್‌ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಯಿತು. ಮಳೆಗಾಲದಲ್ಲಿ ಹೆಚ್ಚು ಉಪಯುಕ್ತವಾಗುವ ಈ ಬಸ್‌ ನಿಲ್ದಾಣವನ್ನು ಕೇವಲ ಐದೇ ದಿನಗಳಲ್ಲಿ ಕಾರ್ಯಕರ್ತರು ಮಳೆ ಗಾಳಿಯನ್ನೂ ಲೆಕ್ಕಿಸದೇ ಶ್ರಮವಹಿಸಿ ನಿರ್ಮಿಸಿದ್ದಾರೆ. ಮೇಲ್ಛಾವಣಿ, ಸ್ವತಂತ್ರ ಆಸನ ವ್ಯವಸ್ಥೆ, ಕಾಂಕ್ರೀಟ್‌ ನೆಲಹಾಸು, ಸಾಮಾಜಿಕ ಸಂದೇಶವುಳ್ಳ ಫಲಕಗಳನ್ನು ಈ
ತಂಗುದಾಣವು ಒಳಗೊಂಡಿದೆ. ಇಂದು ತಂಗುದಾಣದ ಆಸನಗಳಿಗೆ ಬಣ್ಣ ಬಳಿದು, ಸುತ್ತಮುತ್ತಲಿನ ಜಾಗವನ್ನು ಸ್ವತ್ಛಗೊಳಿಸಲಾಯಿತು. ಪ್ರಯಾಣಿಕರು ಉಪಯೋಗಿಸುವುದರ ಮೂಲಕ ತಂಗುದಾಣ ಲೋಕಾರ್ಪಣೆಯಾಯಿತು. 

500ಕ್ಕೂ ಅಧಿಕ ಬ್ಯಾನರ್‌ಗಳ ತೆರವು
ಫ್ಲೆಕ್ಸ್‌ ಬ್ಯಾನರ್‌ ಅಲ್ಲಲ್ಲಿ ಕಟ್ಟುವುದನ್ನು ತಡೆಗಟ್ಟುವ ಸಲುವಾಗಿ ಪ್ರತಿ ವಾರದಂತೆ ಈ ಬಾರಿಯೂ ಸೌರಜ್‌ ಮಂಗಳೂರು, ಸಂದೀಪ್‌ ಕೋಡಿಕಲ್‌ ಹಾಗೂ ಕಾರ್ಯಕರ್ತರು ತಂಡಗಳನ್ನು ರಚಿಸಿಕೊಂಡು ಎಕ್ಕೂರು, ಪಂಪ್‌ವೆಲ್‌, ಪಡೀಲ್‌ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಐನೂರಕ್ಕೂ ಅಧಿಕ ಬ್ಯಾನರ್‌ ಗಳನ್ನು ತೆರವುಗೊಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next