ಹೊಸದಿಲ್ಲಿ : 12,600 ಕೋಟಿ ರೂ.ಗಳ ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಾಲ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿವ್ಯ ಮೌನ ವಹಿಸಿದ್ದಾರೆ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ ಹೀಗೆ ಲೇವಡಿ ಮಾಡಿದ್ದಾರೆ:
ಒಬ್ಬರು ನೀರವ್ ಮೋದಿ ಇದ್ದಾರೆ; ಇನ್ನೊಬ್ಬರು ಮೋದಿ ನೀರವ್ ಇದ್ದಾರೆ !
ಸಂಸತ್ತಿನ ಹೊರಗೆ ಪಿಎನ್‌ಬಿ ಬಹುಕೋಟಿ ಸಾಲ ಹಗರಣದ ಬಗ್ಗೆ ಕೇಂದ್ರ ಸರಕಾರದ ವಿರುದ್ಧ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ರಾಹುಲ್ ಗಾಂಧಿ, ಪ್ರಧಾನಿಯವರು ಈ ಹಗರಣದ ಬಗ್ಗೆ ದಿವ್ಯ ಮೌನ ವಹಿಸಿರುವುದನ್ನು ಖಂಡಿಸಿದ್ದಾರೆ.
“ಇವತ್ತು ಎಲ್ಲೆಡೆಯಲ್ಲೂ ನೀರವ್ ಮೋದಿ, ನೀರವ್ ಮೋದಿ ಎಂಬ ಘೋಷಣೆ ದೊಡ್ಡ ಗುಲ್ಲಿನ ರೂಪದಲ್ಲಿ ಕೇಳಿ ಬರುತ್ತಿದೆ’ ಎಂದು ಸಂಸತ್ತಿನ ಹೊರಗೆ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮುಂದೆ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಪ್ರದರ್ಶನದಲ್ಲಿ ರಾಹುಲ್ ಹೇಳಿದರು.
ಪಿಎನ್‌ಬಿ ಬಹುಕೋಟಿ ಸಾಲ ಹಗರಣದ ವಂಚಕರು ಎಲ್ಲೇ ಅಡಗಿಕೊಂಡಿದ್ದರು ಅವರನ್ನು ಪತ್ತೆ ಹಚ್ಚಿ ದೇಶದೊಳಗೆ ಎಳೆತಂದು ಕಾನೂನು ಪ್ರಕಾರ ಶಿಕ್ಷಿಸಬೇಕು ಎಂದು ರಾಹುಲ್ ಆಗ್ರಹಿಸಿದರು.
ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ಎಂಬ ಮೋದಿ ಘೋಷ ವಾಕ್ಯ ಕೇವಲ ಚುನಾವಣಾ ಪ್ರಚಾರ ಘೋಷಣೆಯಗಿ ಉಳಿದಿದೆ ಎಂದು ರಾಹುಲ್ ಟೀಕಿಸಿದರು.