Advertisement

ಬೈಪಾಸ್‌ಗೆ ಷಟ್ಪಥ ಎಕ್ಸ್‌ಪ್ರೆಸ್‌ವೇ ಭಾಗ್ಯ

05:17 PM Feb 05, 2022 | Team Udayavani |

ಹುಬ್ಬಳ್ಳಿ: ಸಾವಿನ ಹೆದ್ದಾರಿ ಎಂಬ ಹಣೆಪಟ್ಟಿ ಹೊತ್ತಿದ್ದ ಹು-ಧಾ ನಡುವಿನ ಬೈಪಾಸ್‌ ಹೆದ್ದಾರಿಗೆ ಇದೀಗ ಷಟ್ಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ಭಾಗ್ಯ ಲಭ್ಯವಾಗುತ್ತಿದೆ. ಹುಬ್ಬಳ್ಳಿಯ ಗಬ್ಬೂರು ಜಂಕ್ಷನ್‌ನಲ್ಲಿ ಫ್ಲೈಓವರ್‌ ಸೇರಿದಂತೆ ಒಟ್ಟು ಸುಮಾರು 31 ಕಿಮೀ ಉದ್ದದ ರಸ್ತೆಯಲ್ಲಿ ವಾಹನ, ಜಾನುವಾರು ಸಂಚಾರಕ್ಕೆ ಕೆಳಸೇತುವೆಗಳು ಸೇರಿದಂತೆ ಆಧುನಿಕವಾಗಿ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಗೊಳ್ಳಲಿದೆ.

Advertisement

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4 ಬಹುತೇಕ ಕಡೆ ಆರು ಪಥ ಹೊಂದಿದ್ದು, ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಧಾರವಾಡದ ನರೇಂದ್ರ ಕ್ರಾಸ್‌ನಿಂದ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ವರೆಗಿನ ಬೈಪಾಸ್‌ ಹೆದ್ದಾರಿ ಮಾತ್ರ ದ್ವಿಪಥ ಹೊಂದಿತ್ತು. ಆರು ಪಥದ ರಸ್ತೆಯಲ್ಲಿ ಆಗಮಿಸುವ ವಾಹನ ಸವಾರರು ನರೇಂದ್ರ ಕ್ರಾಸ್‌ನಿಂದ ಗಬ್ಬೂರು ಕ್ರಾಸ್‌ವರೆಗೆ ದ್ವಿಪಥದ ರಸ್ತೆಗೆ ಹೊಂದಿಕೊಳ್ಳಬೇಕಿತ್ತು. ಇದರಿಂದಾಗಿ ಅದೆಷ್ಟೋ ಅಪಘಾತಗಳಿಗೆ ವೇದಿಕೆಯಾಗಿ ಅನೇಕ ಜೀವಗಳನ್ನು ಬಲಿ ಪಡೆದಿದೆ. ರಸ್ತೆ ಅಗಲೀಕರಣದ ಬೇಡಿಕೆ ಹಲವು ವರ್ಷಗಳದ್ದಾಗಿತ್ತಾದರೂ, ಇದೀಗ ಆರು ಪಥ ಎಕ್ಸ್‌ಪ್ರೆಸ್‌
ರಸ್ತೆಯಾಗಲು ಯೋಗ ಕೂಡಿ ಬಂದಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಇನ್ನಿತರೆ ಜನಪ್ರತಿನಿಧಿಗಳ ವಿಶೇಷ ಆಸಕ್ತಿ ಹಾಗೂ ಯತ್ನದೊಂದಿಗೆ ಕೇಂದ್ರ ಸರಕಾರ ಅಂದಾಜು 1,200 ಕೋಟಿ ರೂ. ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಿದ್ದು, ಟೆಂಡರ್‌ ಕರೆಯಲಾಗಿದೆ.

ಒಂದೇ ಕಡೆ ಟೋಲ್‌ ಸಂಗ್ರಹ ಆರು ಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ನಂತರದಲ್ಲಿ ಹು-ಧಾ ಬೈಪಾಸ್‌ನಲ್ಲಿ ಬರುವ ಎಲ್ಲ ಟೋಲ್‌ ಸಂಗ್ರಹ ಕೇಂದ್ರಗಳನ್ನು ತೆರವು ಮಾಡಿ ಒಂದೇ ಕಡೆ ಟೋಲ್‌ ಸಂಗ್ರಹಿಸಲು, ಹು-ಧಾ ಮಧ್ಯ ಸಂಚರಿಸುವವರಿಗೆ ಟೋಲ್‌ನಿಂದ ಮುಕ್ತಗೊಳಿಸುವ ಚಿಂತನೆ ಹೊಂದಲಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮೇಲುಸ್ತುವಾರಿ, ಒತ್ತಡ ತರುವ ಯತ್ನಗಳು ಅವಶ್ಯವಾಗಿವೆ.

ನಗರ ಪ್ರವೇಶಕ್ಕೆ ಅನುಕೂಲ
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಂಗಳೂರು ಕಡೆಯಿಂದ ಬರುವವರಿಗೆ ಹುಬ್ಬಳ್ಳಿ ಪ್ರವೇಶಕ್ಕೆ ಇರುವ ಗಬ್ಬೂರು ಕ್ರಾಸ್‌ ಹೆದ್ದಾರಿಯಲ್ಲಿನ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾಗಿದೆ. ಹು-ಧಾ ನಡುವಿನ ಹೆದ್ದಾರಿ ಬೈಪಾಸ್‌ ರಸ್ತೆ ಅಗಲೀಕರಣ ಯೋಜನೆ ಅಡಿಯಲ್ಲಿಯೇ ಗಬ್ಬೂರು ಜಂಕ್ಷನ್‌ನಲ್ಲಿ ಸುಮಾರು 680 ಮೀಟರ್‌ ಫ್ಲೈಓವರ್‌ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪ್ರಸ್ತುತ ಬೆಂಗಳೂರು ಕಡೆಯಿಂದ ಬರುವವರಿಗೆ ಹುಬ್ಬಳ್ಳಿ ಪ್ರವೇಶಕ್ಕೆ ಅಲ್ಲಿ ಸಿಗ್ನಲ್‌ ನಿರ್ವಹಣೆ ಇಲ್ಲವಾಗಿದ್ದು, ಒಂದೋ ಬೆಂಗಳೂರು ಕಡೆಯಿಂದ ಬಂದು ಹುಬ್ಬಳ್ಳಿ ಪ್ರವೇಶಕ್ಕೆ ಮುಂದಾಗುವ ವಾಹನಗಳು ನಿಂತು ಸಾಗಬೇಕು. ಇಲ್ಲವೆ ಪುಣೆ ಕಡೆಯಿಂದ ಆಗಮಿಸುವ ವಾಹನಗಳು ನಿಲುಗಡೆಯಾಗಬೇಕು ಎಂಬ ಸ್ಥಿತಿ ಇದೆ. ಫ್ಲೈಓವರ್‌ ನಿರ್ಮಾಣವಾದರೆ ಬೈಪಾಸ್‌ನಲ್ಲಿ ಸಾಗುವ ವಾಹನಗಳು ನೇರವಾಗಿ ಸಾಗುತ್ತವೆ. ಹುಬ್ಬಳ್ಳಿ ಮಹಾನಗರಕ್ಕೆ ಪ್ರವೇಶ ಪಡೆಯುವ ವಾಹನಗಳ ಸಂಚಾರಕ್ಕೆ ಸುಲಭವಾಗಲಿದೆ.

Advertisement

ಅಂಡರ್‌ಪಾಸ್‌-ಇಂಟರ್‌ಚೇಂಜ್‌ ವ್ಯವಸ್ಥೆ
ಹು-ಧಾ ನಡುವಿನ ಹೆದ್ದಾರಿ ಬೈಪಾಸ್‌ ಷಟ³ಥ ಎಕ್ಸ್‌ಪ್ರೆಸ್‌ ರಸ್ತೆಯಾಗಿ ಪರಿವರ್ತನೆಗೊಂಡ ನಂತರ ರಸ್ತೆಯಲ್ಲಿನ ಹಳ್ಳಿ ಹಾಗೂ ಬಡಾವಣೆಗಳ ಜನರು ಈ ತುದಿಯಿಂದ ಇನ್ನೊಂದು ತುದಿಗೆ ಸಾಗಲು ವಾಹನ, ಪಾದಚಾರಿಗಳು, ಜಾನುವಾರುಗಳಿಗೆ ತೊಂದರೆ ಆಗದ ರೀತಿಯಲ್ಲಿ ಸುಮಾರು 31 ಕಿಮೀ ಉದ್ದದ ರಸ್ತೆಯಲ್ಲಿ ಅಗತ್ಯವಿರುವ ಕಡೆ ಅಂಡರ್‌ಪಾಸ್‌ ಹಾಗೂ ಇಂಟರ್‌ ಚೇಂಜ್‌ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಕಾರವಾರ ರಸ್ತೆ, ತಾರಿಹಾಳ, ಯರಿಕೊಪ್ಪ ಮತ್ತು ಗೋವಾ ರಸ್ತೆ, ನೇಕಾರ ನಗರ, ಅಯೋಧ್ಯೆ ನಗರ, ಗೋಕುಲ, ಇಟಗಟ್ಟಿ ರಸ್ತೆ, ಹಳಿಯಾಳ ರಸ್ತೆ, ಕ್ಯಾರಕೊಪ್ಪ ರಸ್ತೆ, ಮಲ್ಲಿಗವಾಡ ಇನ್ನಿತರೆ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಪೂರಕವಾಗಿ ಅಂಡರ್‌ಪಾಸ್‌ ಹಾಗೂ ಇಂಟರ್‌ಚೇಂಜ್‌ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಕೃಷಿ ಕಾಯಕ್ಕೆ ಪೂರಕವಾಗಿ ಹಾಗೂ ಜಾನುವಾರುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಗಿರಿಯಾಲ, ನೇಕಾರನಗರ, ರಾಯನಾಳ, ಗೋಕುಲ, ಇಟಗಟ್ಟಿ, ಜೋಗೆಲ್ಲಾಪುರ, ಮನ್ಸೂರ, ಗೋವಾ ರಸ್ತೆ ಇನ್ನಿತರೆ ಕಡೆಗಳಲ್ಲಿ ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ.

ಐದು ವರ್ಷ ನಿರ್ವಹಣೆ ಹೊಣೆ
ಹು-ಧಾ ನಡುವಿನ ಬೈಪಾಸ್‌ ರಸ್ತೆಯನ್ನು ಆರು ಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಹಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದವು. ಮುಖ್ಯವಾಗಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಟೋಲ್‌ ಸಂಗ್ರಹ ಗುತ್ತಿಗೆ ಪಡೆದಿರುವ ನಂದಿ ಹೈವೇ ಇನ್ಫ್ರಾಸ್ಟ್ರಕ್ಚರ್‌ನ ಅಶೋಕ ಖೇಣಿ ಅವರು ರಸ್ತೆ ಅಗಲೀಕರಣಕ್ಕೆ ಆಕ್ಷೇಪ ತೋರಿದ್ದರಲ್ಲದೆ ಗುತ್ತಿಗೆ ಅವಧಿ ಮುಗಿದ ನಂತರದಲ್ಲಿ ಇದನ್ನು ಕೈಗೊಳ್ಳುವಂತೆ ಹೇಳಿದ್ದರು. ಹು-ಧಾ ಬೈಪಾಸ್‌
ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಆಗುತ್ತಿರುವುದು, ಜನ-ಜಾನುವಾರು ಪ್ರಾಣ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಖೇಣಿ ಅವರೊಂದಿಗೆ ಮಾತುಕತೆ ನಡೆಸಿ ಹೆದ್ದಾರಿ ಅಗಲೀಕರಣಕ್ಕೆ ಸಮ್ಮತಿಸುವಂತೆ ಮಾಡಿದ್ದರು.

ಆರು ಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ರೂಪನೆಯ ಮೊದಲ ಹಂತದಲ್ಲಿ ರಸ್ತೆಯ ಎರಡು ಬದಿಯಲ್ಲಿ ಸೇವಾ ರಸ್ತೆಗಳನ್ನು ನಿರ್ಮಿಸುವ ಮೂಲಕ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತು ಇದ್ದು, ರಸ್ತೆ ಪೂರ್ಣಗೊಂಡ ನಂತರ ಮುಂದಿನ ಐದು ವರ್ಷಗಳವರೆಗೆ ರಸ್ತೆ ನಿರ್ವಹಣೆ ಜವಾಬ್ದಾರಿ ರಸ್ತೆ ನಿರ್ಮಿಸಿದ ಗುತ್ತಿಗೆದಾರನದ್ದಾಗಿರುತ್ತದೆ. ರಸ್ತೆಯ ಎರಡು ಬದಿಯಲ್ಲಿ ಸೇವಾ ರಸ್ತೆಗಳನ್ನು ನಿರ್ಮಿಸುವ ಮೂಲಕ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next