ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಪ್ರತಿ ವಾರ ಏಳೆಂಟು ಸಿನಿಮಾಗಳು ಬಿಡುಗಡೆಯಾಗುತ್ತಾ, ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದವು. ಆದರೆ, ಏಪ್ರಿಲ್ ಮೊದಲ ಹಾಗೂ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಚುನಾವಣೆ ಘೋಷಣೆಯಾಗಿದ್ದರಿಂದ ಚಿತ್ರಮಂದಿರಗಳಿಗೆ ಜನ ಬರಲ್ಲ ಎಂಬ ಲೆಕ್ಕಾಚಾರದೊಂದಿಗೆ ಒಂದಷ್ಟು ಮಂದಿ ತಮ್ಮ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು.ಆದರೆ, ಈಗ ಏಪ್ರಿಲ್ ಮೂರನೇ (ಏ.21) ಮತ್ತೆ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಈ ವಾರ ಬರೋಬ್ಬರಿ ಎಂಟು ಚಿತ್ರಗಳು ತೆರೆಕಾಣುತ್ತಿವೆ. “ಬಿಸಿಲು ಕುದುರೆ’, “ಚಾಂದಿನಿ ಬಾರ್’, “ಇಂಗ್ಲೀಷ್ ಮಂಜ’, “ಮಗಳೇ’, “ನನ್ನಾಕಿ’, “ನೋಡದ ಪುಟಗಳು’, “ಪ್ರಭುತ್ವ’ ಹಾಗೂ ಮಾವು-ಬೇವು’ ಚಿತ್ರಗಳು ಈ ವಾರ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿವೆ.
ಇಷ್ಟೊಂದು ಸಿನಿ ಟ್ರಾಫಿಕ್ ಯಾಕೆ ಎಂದು ನೀವು ಕೇಳಬಹುದು. ಅನೇಕ ಸಿನಿಮಾಗಳು ಲಾಕ್‌ಡೌನ್ ಮುಂಚೆ ತಯಾರಾಗಿವೆ. ಆದರೆ, ಸಿನಿಮಾ ಬಿಡುಗಡೆಯ ಹಾದಿಯಲ್ಲಿ ಎದುರಾದ ತೊಂದರೆಗಳಿಂದ ರಿಲೀಸ್ ತಡವಾಗುತ್ತಾ ಬಂದಿವೆ. ಸದ್ಯ ಚಿತ್ರಮಂದಿರಗಳಿಂದ ಹಿಡಿದು ಎಲ್ಲವೂ ಕೂಡಿ ಬಂದ ಕಾರಣ ಸಿನಿಮಾ ಬಿಡುಗಡೆ ಮಾಡುತ್ತಿವೆ.
ಇದು ಕೇವಲ ಈ ವಾರದ ಕಥೆಯಲ್ಲ, ಮುಂದಿನ ವಾರವೂ ಸಾಕಷ್ಟು ಸಿನಿಮಾಗಳು ಬಿಡುಗಡೆಯ ಕ್ಯೂನಲ್ಲಿವೆ. ಈ ವಾರ ಬಿಟ್ಟರೆ ಮತ್ತೆ ತಿಂಗಳುಗಟ್ಟಲೇ ಮುಂದೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ವಾರ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ವಿಭಿನ್ನ ಜಾನರ್: ಈ ವಾರ ತೆರೆಕಾಣುತ್ತಿರುವ ಎಂಟಕ್ಕೆ ಎಂಟು ಸಿನಿಮಾಗಳು ಕೂಡಾ ಭಿನ್ನ-ವಿಭಿನ್ನ ಜಾನರ್‌ಗೆ ಸೇರಿದೆ ಎಂಬುದು ಒಂದು ಅಂಶವಾದರೆ, ಬಹುತೇಕ ಚಿತ್ರಗಳಲ್ಲಿ ಹೊಸಬರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ ಎಂಬುದು ಮತ್ತೂಂದು ವಿಶೇಷ.