ನವದೆಹಲಿ: 2023 ಜ.26ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈಜಿಪ್ಟ್ ಅಧ್ಯಕ್ಷ ಅಬ್ಧೆಲ್ ಫತ್ತಾಹ್ ಎಲ್-ಸಿಸಿ ಅವರನ್ನು ಭಾರತ ಆಹ್ವಾನಿಸಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಧಿಕೃತ ಆಹ್ವಾನವು ಈಜಿಪ್ಟ್ ಅಧ್ಯಕ್ಷರಿಗೆ ತಲುಪಿದೆ. ಭಾರತ-ಈಜಿಪ್ಟ್ ರಕ್ಷಣಾ ಸಹಕಾರ, ಜಂಟಿ ಸಮಾರಾಭ್ಯಾಸ ಹಾಗೂ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ತಯಾರಿಸಿರುವ 70 ತೇಜಸ್ ಲಘು ಯುದ್ಧ ವಿಮಾನಗಳನ್ನು ಈಜಿಪ್ಟ್ಗೆ ಭಾರತ ರಫ್ತು ಮಾಡುತ್ತಿರುವ ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಆಹ್ವಾನಿಸಿರುವುದು ವಿಶೇಷವಾಗಿದೆ.
ಕಳೆದ ತಿಂಗಳು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈಜಿಪ್ಟ್ ರಾಜಧಾನಿ ಕೈರೊಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈಜಿಪ್ಟ್ ಅಧ್ಯಕ್ಷ ಹಾಗೂ ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದರು. ಅಲ್ಲದೇ ಸಿಸಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಸಂದೇಶವನ್ನು ರವಾನಿಸಿದ್ದರು.