ಕೈರೋ: ಪ್ರಾಚೀನ ಉಡುಪನ್ನು ಧರಿಸಿ ಈಜಿಪ್ಟ್ ನ ಐತಿಹಾಸಿಕ ಜೋಸೆರ್ ಪಿರಾಮಿಡ್ ಮುಂಭಾಗದಲ್ಲಿ ಫೋಟೋ ಶೂಟ್ ನಡೆಸಿ ಅಗೌರವ ತೋರಿಸಿದ್ದ ಆರೋಪದಡಿ ಫ್ಯಾಶನ್ ಫೋಟೋಗ್ರಾಫರ್ ಹಾಗೂ ರೂಪದರ್ಶಿ ಸಲ್ಮಾ ಅಲ್ ಶಿಮಿಯನ್ನು ಈಜಿಪ್ಟ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಪುರಾತತ್ವ ವಲಯದೊಳಗೆ ರೂಪದರ್ಶಿ, ಡ್ಯಾನ್ಸರ್ ಸಲ್ಮಾ ಅಲ್ ಶಮಿ ಜತೆ ಖಾಸಗಿಯಾಗಿ ಫೋಟೋ ಶೂಟ್ ನಡೆಸಿದ್ದ ಸಲ್ಮಾ ಹಾಗೂ ಫೋಟೋಗ್ರಾಫರ್ ನನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಭದ್ರತಾ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಗಾರ್ಡಿಯನ್ ವರದಿ ಮಾಡಿದೆ.
ಪಿರಮಿಡ್ ಮುಂಭಾಗದಲ್ಲಿ ನಾಗಕನ್ನಿಕೆಯಂತೆ ಫೋಸು ಕೊಟ್ಟು ತೆಗೆದಿದ್ದ ಫೋಟೋ ಮತ್ತು ವಿಡಿಯೋವನ್ನು ಕೆಲವು ದಿನಗಳ ಹಿಂದೆ ಸಲ್ಮಾ ತನ್ನ ಇನ್ಸ್ ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಳು. ಸಲ್ಮಾಗೆ ಇನ್ಸ್ ಟಾದಲ್ಲಿ ಸಾವಿರಾರು ಮಂದಿ ಫಾಲೋವರ್ಸ್ ಇದ್ದಿರುವುದಾಗಿ ವರದಿ ತಿಳಿಸಿದೆ.
ಪಿರಮಿಡ್ ಮುಂಭಾಗದಲ್ಲಿ ನಿಂತು ಫೋಟೋ ಶೂಟ್ ಮಾಡಿದ್ದ ಸಲ್ಮಾ ಭಂಗಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದು, ಕೂಡಲೇ ಸಲ್ಮಾಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಐತಿಹಾಸಿಕ ಈಜಿಪ್ಟ್ ನ ಪಿರಮಿಡ್ ಮುಂಭಾಗದಲ್ಲಿ ತುಂಡು ಉಡುಗೆ ತೊಟ್ಟು ಅಗೌರವ ತೋರಿಸಿದ ಸಲ್ಮಾಳನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು ಎಂದು ವರದಿ ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ರೂಪದರ್ಶಿ ಸಲ್ಮಾ ತನ್ನ ಇನ್ಸ್ ಟಾಗ್ರಾಮ್ ನಲ್ಲಿನ ಫೋಟೋಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದರು ಕೂಡಾ ಸಲ್ಮಾ ಖಾತೆಯಲ್ಲಿ ಇನ್ನೂ ಫೋಟೋಗಳನ್ನು ತೆಗೆದುಹಾಕಿಲ್ಲ ಎಂದು ವರದಿ ತಿಳಿಸಿದೆ.