Advertisement

ಮೊಟ್ಟೆ ವಿತರಣೆ 3 ತಿಂಗಳಲ್ಲಿ ಸ್ಥಗಿತದ ಆತಂಕ!  

04:51 PM Feb 09, 2021 | Team Udayavani |

ಕೊರಟಗೆರೆ: ರಾಜ್ಯದಲ್ಲಿ ವಿವಿಧ ವರ್ಗಗಳ ಫ‌ಲಾನುಭವಿಗಳಿಗೆ ಅಂಗನವಾಡಿಯಿಂದ  ವಿತರಣೆಯಾಗುತ್ತಿರುವ ಮೊಟ್ಟೆ ವಿತರಣೆ ಯೋಜನೆ ಇನ್ನೂ ಮೂರು ತಿಂಗಳಲ್ಲಿ ನಿಂತುಹೋಗುವ  ಆತಂಕ ಎದುರಾಗಿದೆ!.

Advertisement

ಕೋಳಿ ಮೊಟ್ಟೆಗೆ ಕೊಡಬೇಕಾಗಿರುವ ಹಣವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡದೇ ಇರುವುದರಿಂದ ಖರೀದಿಗೆ ಕಷ್ಟವಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾಕಷ್ಟು ಸಮಸ್ಯೆಯಿದೆ: 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೈಕೆಗಾಗಿ ವಿಶೇಷ ಪೌಷ್ಟಿಕಾಂಶ ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಕೋಳಿ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು 2017ನೇ ಸಾಲಿನಿಂದ ರೂಪಿಸಿದೆ. ಆದರೆ, ಇತ್ತೀಚೆಗೆ ಕೋಳಿ ಮೊಟ್ಟೆಗೂ ಕೊಡಬೇಕಾದ ಹಣವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಪ್ರತಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ತಿಂಗಳಿಗೆ 25 ಮೊಟ್ಟೆ, ಮಕ್ಕಳಿಗೆ ತಿಂಗಳಿಗೆ 8 ಮೊಟ್ಟೆ ನೀಡುವಂತೆ ಸರ್ಕಾರ ನಿಗದಿ ಮಾಡಿದೆ. ಆದರೆ, ಇತ್ತೀಚೆಗೆ ಕೋಳಿ ಮೊಟ್ಟೆ ದರ ದಿನಕ್ಕೊಂದು ರೀತಿ ಬದಲಾವಣೆ ಆಗುತ್ತಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ  ಕೋಳಿ ಮೊಟ್ಟೆ ಕೊಡಲು ಸಾಕಷ್ಟು ಸಮಸ್ಯೆಯಾಗುತ್ತಿದೆ.

ಬಾಕಿ ಹಣ ಯಾರು ನೀಡುತ್ತಾರೆ: ಮೇಲಾಗಿ ಸರ್ಕಾರದಿಂದ ಹಣ ಯಾವಾಗ ಬರುತ್ತದೆ ಎಂದು ಹೇಳಲಾಗದು. ಇದಕ್ಕೊಂದು ನಿರ್ದಿಷ್ಟ ಬಜೆಟ್‌ ಸಹ ನಿಗದಿ ಮಾಡಿಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ದೂರಾಗಿದೆ. ಸರ್ಕಾರದ ಅನುದಾನಕ್ಕಾಗಿ 6 ತಿಂಗಳಿನಿಂದ ವರ್ಷದವರೆಗೂ ಕಾಯಬೇಕಾಗುತ್ತದೆ. ಮೇಲಾಗಿ ಒಂದು ಮೊಟ್ಟೆಗೆ ಸರ್ಕಾರ ನೀಡುವುದು 5ರೂ ಮಾತ್ರ. ಆದರೆ, ಕೆಲ ಗ್ರಾಮೀಣ ಭಾಗಗಳಲ್ಲಿ 1 ಮೊಟ್ಟೆ ದರ 6ರಿಂದ 8ರೂ.,ವರೆಗೂ ಮಾರಾಟ ಮಾಡುತ್ತಾರೆ. ಹೀಗಾಗಿ ಸರ್ಕಾರದ 5ರೂ. ಬಿಟ್ಟರೆ ಬಾಕಿ ಹಣವನ್ನು ಯಾರು ನೀಡುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ :ಆಧುನೀಕರಣದಲ್ಲಿ ನಲಗುತ್ತಿದೆ ಜಾನಪದ: ಸ್ವಾಮಿ

ನಮ್ಮ ಮೇಲೆಯೇ ದೂರು: ಬೇರೆ ದವಸ,ಧಾನ್ಯಗಳಿಗೆ ಸರ್ಕಾರ ಟೆಂಡರ್‌ಗಳ ಮೂಲಕ ಹಣ ಮೀಸಲಿಡುತ್ತಿದೆ. ಆದರೆ, ಕೋಳಿ ಮೊಟ್ಟೆಗೆ ಈ ರೀತಿ ಹಣ ಮೀಸಲಿಡದೆ ಇರುವುದರಿಂದ ಈ ರೀತಿಯ ದೊಡ್ಡ ಸಮಸ್ಯೆ ಅನುಭವಿಸುತ್ತಿದ್ದೇವೆ. ಇದು ಪೋಷಕರಿಗೆ ಅರ್ಥವಾಗುವುದಿಲ್ಲ. ಒಂದು ವೇಳೆ ಮೊಟ್ಟೆ  ಕೊಡದ ಸಂದರ್ಭದಲ್ಲಿ ನಮ್ಮ ಮೇಲೆ ದೂರು ಹೇಳುವ ಸಂದರ್ಭಗಳೂ ಸೃಷ್ಟಿಸುತ್ತಿವೆ ಎಂದು ಹೆಸರು ಹೇಳದ ಅಂಗನವಾಡಿ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next