Advertisement

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

04:12 AM Dec 27, 2024 | Team Udayavani |

ಬೆಂಗಳೂರು: ಆರ್‌.ಆರ್‌.ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು-ಪ್ರತಿದೂರು ದಾಖಲಾಗಿದೆ. ಈ ಬೆನ್ನಲ್ಲೇ ಮೊಟ್ಟೆ ಎಸೆದ ಮೂವರು ಆರೋಪಿಗಳನ್ನು ಬಂಧಿ ಸಿದ್ದ ಪೊಲೀಸರು ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ. ಮತ್ತೊಂದೆಡೆ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುನಿರತ್ನ ವೈದ್ಯರ ಸಲಹೆ ಮೇರೆಗೆ ಗುರುವಾರ ಬೆಳಗ್ಗೆ ಡಿಸಾcರ್ಜ್‌ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Advertisement

ಲಗ್ಗೆರೆ ನಿವಾಸಿ ಅಶೋಕ್‌ ಕುಮಾರ್‌(30), ಭೈರವೇಶ್ವರ ನಗರ ನಿವಾಸಿ ವಿಶ್ವಮೂರ್ತಿ(32) ಮತ್ತು ಪಾಪರೆಡ್ಡಿಪಾಳ್ಯ ನಿವಾಸಿ ವಿಶ್ವಕಿರಣ್‌(31) ಬಂಧಿತರು. ಈ ಮೂವರೂ ಕಾಂಗ್ರೆಸ್‌ ಕಾರ್ಯಕರ್ತರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಅಭಿವೃದ್ಧಿ ಕಾರ್ಯ ಮಾಡದ್ದಕ್ಕೆ ಮೊಟ್ಟೆ ದಾಳಿ ನಡೆಸಿದ್ದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ಮೂವರು ಹೇಳಿಕೆ ನೀಡಿದ್ದಾರೆ. ಮತ್ತೊಂದೆಡೆ ಮೂವರಿಗೂ ನ್ಯಾಯಾಲಯ ಜಾಮೀನು ಸಹ ಮಂಜೂರು ಮಾಡಿದೆ.

ಇನ್ನೊಂದೆಡೆ ಬಿಜೆಪಿ ಶಾಸಕ ಮುನಿರತ್ನ ಅವರ ಹೇಳಿಕೆ ಆಧರಿಸಿ ನಂದಿನಿ ಲೇಔಟ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಮತ್ತೂಂದೆಡೆ ಮುನಿರತ್ನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವಿಶ್ವಮೂರ್ತಿ ಎಂಬಾತ, ತನ್ನ ಮೇಲೆ ಅಪರಿಚಿತ ವ್ಯಕ್ತಿಗಳು (ಶಾಸಕ ಮುನಿರತ್ನ ಬೆಂಬಲಿಗರು) ಹಲ್ಲೆ ನಡೆಸಿದ್ದಾಗಿ ಪ್ರತಿದೂರು ನೀಡಿದ್ದಾನೆ.

ಮುನಿರತ್ನ ದೂರಿನಲ್ಲಿ ಏನಿದೆ?
ಡಿ.5ರಂದು ನಾನು ಕೋರ್ಟ್‌ಗೆ ಹೋದಾಗ ವಕೀಲರ ರೂಪದಲ್ಲಿ ಬಂದ ಇಬ್ಬರು, “ನಿನಗೆ ಈಗಲೂ ಕಾಲ ಮಿಂಚಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು. ಇಲ್ಲದಿದ್ದರೆ ನಿನ್ನ ಮೇಲೆ ಪೋಕ್ಸೋ  ಕೇಸ್‌ ಹಾಕಿ ಮತ್ತೆ ಜೈಲಿಗೆ ಕಳುಹಿಸುತ್ತೇವೆ. ನಮ್ಮ ಅಣ್ಣ, ಡಿ.ಕೆ ಸುರೇಶ್‌ ಸಂತೋಷವಾಗಿರಬೇಕು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಅವರನ್ನು 1 ಲಕ್ಷ ಮತಗಳಿಂದ ಸೋಲಿಸಿರುವೆ. ಅವರು ಸಂತೋಷವಾಗಿರಬೇಕಾದರೆ ಕುಸುಮಾ ಅವರು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಬೇಕು.

ಮುಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್‌ರಂತೆ ಸಚಿವರಾಗಿ ನೋಡಬೇಕು. ಹೀಗಾಗಿ ನೀನು ರಾಜೀನಾಮೆ ಕೊಟ್ಟರೆ ಜೀವ ಉಳಿಯುತ್ತದೆ. ಇಲ್ಲದಿದ್ದರೆ 100-150 ಜನ ಸೇರಿಸಿ ಒಟ್ಟಿಗೆ ಬಂದು ನೀನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಆ್ಯಸಿಡ್‌ ಮಿಶ್ರಿತ ಕೋಳಿ ಮೊಟ್ಟೆ ಹಾಕಿ, ನಿನ್ನ ಬಟ್ಟೆ ಹರಿದು, ಮುಖಕ್ಕೆ ಮಸಿ ಬಳಿದು ಚಪ್ಪಲಿ ಹಾರ ಹಾಕುತ್ತೇವೆ. ದಲಿತ ಸಮುದಾಯದವರಿಂದ ಪೊರಕೆಯಿಂದ ಹೊಡೆಸುತ್ತೇವೆ. ನಿನ್ನ ಕಾರಿಗೆ ಬೆಂಕಿ ಇಡುತ್ತೇವೆ. ಇವೆಲ್ಲ ಆಗುವುದಕ್ಕಿಂತ ಮೊದಲು ರಾಜೀನಾಮೆ ಕೊಡಬೇಕು ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಎನ್‌ಐಎ, ಸಿಬಿಐ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದೇನೆ.

Advertisement

ಮತ್ತೂಂದೆಡೆ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸರು ಭದ್ರತೆ ನೀಡಿದ್ದಾರೆ. ಜತೆಗೆ ಕೆಲವೊಂದು ಕಾರ್ಯಕ್ರಮಗಳಿಗೆ ಪೊಲೀಸರ ಮಾಹಿತಿಯಂತೆ ಹಾಜರಾಗಿಲ್ಲ. ಆದರೆ, ಡಿ.25ರಂದು ಲಕ್ಷ್ಮೀ ದೇವಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನ ಮೇಲೆ ಆ್ಯಸಿಡ್‌ ಮೊಟ್ಟೆಯ ದಾಳಿ ಮಾಡಿದ್ದು, ನನ್ನ ತಲೆಗೆ ಪೆಟ್ಟು ಬಿದ್ದು ಉರಿ ಊತ ಕಾಣಿಸಿಕೊಂಡಿದ್ದು, ಆ್ಯಸಿಡ್‌ ದಾಳಿಯಿಂದ ನೋವಾದಾಗ ಕೈಯಿಂದ ಉಜ್ಜಿದಾಗ ನನ್ನ ಕೂದಲು ಸಹ ಕಿತ್ತು ಬಂದಿದೆ. 100-150 ಜನರು ಗುಂಪು ಸೇರಿಕೊಂಡು ಬಂದು ನನ್ನ ಮೇಲೆ ದಾಳಿ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಮುನಿರತ್ನ ಉಲ್ಲೇಖೀಸಿದ್ದಾರೆ. ಈ ಬೆನ್ನಲ್ಲೇ ಸ್ಥಳದಲ್ಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮುನಿರತ್ನ ಬೆಂಬಲಿಗರ ವಿರುದ್ಧ ಪ್ರತಿದೂರು-ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ವಿಶ್ವಮೂರ್ತಿ ಎಂಬಾತ ಕೂಡ ಅಪರಿಚಿತ 10-15 ಮಂದಿ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮೊಟ್ಟೆ ಎಸೆತ ಪೂರ್ವಯೋಜಿತ: ಕಾಂಗ್ರೆಸ್‌ ನಾಯಕ ನಾರಾಯಣಸ್ವಾಮಿ
ಶಾಸಕ ಮುನಿರತ್ನನ ಮೇಲೆ ಮೊಟ್ಟೆ ಎಸೆದ ಘಟನೆ ಪೂರ್ವಯೋಜಿತವಾದದ್ದು, ಘಟನೆಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಕೂಡಲೇ ಅವರೇ ಆಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ, ದಲಿತ ಸಮುದಾಯದ ನಿಂದನೆ ಮಾಡಿರುವ ಪ್ರಕರಣದ ಆಡಿಯೋ ಶಾಸಕ ಮುನಿರತ್ನನ ಎಂಬುದು ಎಫ್‌ಎಸ್‌ಎಲ್‌ ವರದಿಯಲ್ಲಿ ಸಾಬೀತಾಗಿದೆ. ಕ್ಷೇತ್ರದ ಮತದಾರರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮತ್ತೆ ಜನರ ವಿಶ್ವಾಸ ಪಡೆಯಲು ಈ ರೀತಿ ಕಥೆ ಸೃಷ್ಟಿಸಿದ್ದಾರೆ ಎಂದು ದೂರಿದರು. ಮೊಟ್ಟೆ ಎಸೆತಕ್ಕೂ ಮೊದಲೇ ಆ್ಯಸಿಡ್‌ ದಾಳಿ ಎಂದು ಕೂಗಿರುವುದು, ದಲಿತ ಯವಕರೊಬ್ಬರ ಕಾರು ಪುಡಿಗಟ್ಟಿ ಶಾಸಕರ ಕಾರಿನ ಮೇಲೆ ದಾಳಿ ಎಂದು ಹೇಳಿಕೊಂಡಿರುವುದು ಮುನಿರತ್ನ ಮತ್ತು ತಂಡದ ನಾಟಕಕ್ಕೆ ಸಾಕ್ಷಿ ಎಂದರು.

ಕೆಟ್ಟ ಕೆಲಸ ಮಾಡಿದಕ್ಕೆ ಮೊಟ್ಟೆ ಎಸೆದೆವು: ಆರೋಪಿಗಳು
ಶಾಸಕ ಮುನಿರತ್ನ ಕ್ಷೇತ್ರದಲ್ಲಿ ಸರಿಯಾಗಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರು ಅವರ ಮನೆ ಬಳಿ ಹೋದರೂ ದುರಂಹಕಾರದಿಂದ ವರ್ತಿಸುತ್ತಾರೆ. ಅವರ ಬೆಂಬಲಿಗರು ದೌರ್ಜನ್ಯ ಮಾಡುತ್ತಾರೆ. ಕಷ್ಟ ಎಂದು ಕೇಳಿದರೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು, ಇಂತಹ ವ್ಯಕ್ತಿಗೆ ಮತಹಾಕಿದ್ದಕ್ಕೆ ಬೇಸರಗೊಂಡು ಮೊಟ್ಟೆ ದಾಳಿ ನಡೆಸಿದ್ದೇವೆ ಎಂದು ಆರೋಪಿಗಳು ಪೊಲೀಸರ ಎಂದು ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next