Advertisement

ಮೊಟ್ಟೆ ವಿರುದ್ದ ಸಿಡಿದೆದ್ದ ಮಠಾಧೀಶರು

02:57 PM Dec 14, 2021 | Team Udayavani |

ಬೀದರ: ಶಾಲೆ ಮತ್ತು ಅಂಗನವಾಡಿಗಳಲ್ಲಿ ಮೊಟ್ಟೆ ಬದಲು ಸತ್ವಯುತ, ಸರ್ವಸಮ್ಮತ ಸಸ್ಯಾಹಾರ ಪದಾರ್ಥ ನೀಡಬೇಕು. ಇಲ್ಲವೇ ರಾಜ್ಯಾದ್ಯಂತ ಸಸ್ಯಾಹಾರಿ ಮಕ್ಕಳಿಗಾಗಿ ಪ್ರತ್ಯೇಕ ಶಾಲೆ- ಅಂಗನವಾಡಿ ತೆರೆಯಲು ಹಕ್ಕೊತ್ತಾಯಿಸಿ ಡಿ.20ರಂದು ಅಖೀಲ ಭಾರತ ಸಸ್ಯಾಹಾರಿಗಳ ಒಕ್ಕೂಟದಿಂದ ಬೆಳಗಾವಿಯಲ್ಲಿ ಸಂತ ಸಮಾವೇಶ ಹಾಗೂ ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ.

Advertisement

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಒಕ್ಕೂಟದ ಪ್ರಧಾನ ಸಂಚಾಲಕ ಶ್ರೀ ದಯಾನಂದ ಸ್ವಾಮೀಜಿ ಮತ್ತು ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕೋಟ್ಯಂತರ ಜನರ ಹಿತಾಸಕ್ತಿ, ಧರ್ಮ ಮತ್ತು ಪರಂಪರೆ ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ, ಸಮಾನತೆ ಬೋಧಿಸಬೇಕಾಗಿದ್ದ ಶಿಕ್ಷಣ ಕೇಂದ್ರಗಳಲ್ಲಿ ಪೌಷ್ಟಿಕಾಂಶ ಹೆಸರಿನಲ್ಲಿ ಮೊಟ್ಟೆ ತಿನ್ನಿಸುವ ಮೂಲಕ ಸರ್ಕಾರವೇ ಪರಂಪರೆ ಮೇಲೆ ಅಪರೋಕ್ಷವಾಗಿ ಆಕ್ರಮಣ ಮಾಡುತ್ತಿದೆ. ಈ ಹಿಂದೆ 1997ರಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತು 2006ರಲ್ಲಿ ಸಮ್ಮಿಶ್ರ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ತೀವ್ರ ಹೋರಾಟದ ಹಿನ್ನೆಲೆ ಕೈಬಿಟ್ಟಿರುವುದು ಬಿಜೆಪಿ ಸರ್ಕಾರಕ್ಕೆ ಗೊತ್ತಿದೆ. ಆದರೂ ಸಸ್ಯಾಹಾರ ಲಭ್ಯವಿದ್ದರೂ, ಹಠದಿಂದ ಕೇವಲ ಕೆಲವೇ ಪೌಲ್ಟ್ರಿಗಳ ಹಿತಾಸಕ್ತಿಗಾಗಿ ಅನಾರೋಗ್ಯಕರವಾದ ಮೊಟ್ಟೆ ತಿನ್ನಿಸಲು ಹೊರಟಿದೆ. ಮೊಟ್ಟೆ ಮೂಲಕ ಓಟ್‌ ಬ್ಯಾಂಕ್‌ ಸಿಗಬಹುದೆಂಬ ಭ್ರಮೆಯಲ್ಲಿದೆ. ಎಂದು ಆಕ್ರೋಶಗೊಂಡ ಸ್ವಾಮೀಜಿಗಳು, ಮುಂದೆ ಈ ಮೊಟ್ಟೆ ಬಗೆದೀತು ಸರ್ಕಾರದ ಹೊಟ್ಟೆ ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ವಿಜಯಪುರದ ಸಿದ್ದೇಶ್ವರ ಶ್ರೀ, ಸಿದ್ಧಗಂಗಾ ಮಠದ ಶ್ರೀ, ಸುತ್ತೂರು ಶ್ರೀ ಮತ್ತು ಭಾಲ್ಕಿಯ ಶ್ರೀಗಳನ್ನು ಒಳಗೊಂಡಂತೆ ನಾಡಿನ ನೂರಾರು ಮಠಾಧೀಶರು, ಸಂತರು, ಸಸ್ಯಾಹಾರಿ ಸಮುದಾಯಗಳು ಹಾಗೂ ಸಂಘಟನೆಗಳು ವಿನಂತಿಸಿದರೂ ಸರ್ಕಾರ ಇದಕ್ಕೆ ಕಿವಿಗೊಡದೇ ಮೊಟ್ಟೆ ತಿನ್ನಿಸಲು ಆರಂಭಿಸಿದೆ. ಆ ಮೂಲಕ ಸಸ್ಯಾಹಾರಿ, ಮಾಂಸಾಹಾರಿಗಳ ನಡುವೆ ಕಲಹ, ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ಬಂದಿದೆ ಎಂದರು.

ಸರ್ಕಾರ ಡಿ.19ರೊಳಗೆ ಹಕ್ಕೊತ್ತಾಯಕ್ಕೆ ಮಣಿಯದಿದ್ದರೆ ಡಿ.20ರಂದು ನೂರಾರು ಮಠಾಧೀಶರು, ಸಾರ್ವಜನಿಕರೊಂದಿಗೆ ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಜೈಲು ಭರೋ ಚಳವಳಿ ನಡೆಸಲಾಗುವುದು. ನಂತರ ಲಿಂಗಾಯತ ಶಾಸಕರಿಗೆ ಮುತ್ತಿಗೆ ಸೇರಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ಈ ವೇಳೆ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಮಾತೆ ಸತ್ಯಾದೇವಿ, ವೈಜಿನಾಥ ಕಮಠಾಣೆ, ಶಿವರಾಜ ಪಾಟೀಲ ಅತಿವಾಳ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next