ಮಂಗಳೂರು: ದಲಿತ ಸಮುದಾಯಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಜ್ಞಾನ ವಂತರನ್ನಾಗಿಸಬೇಕು. ದಲಿತ ಸಂಘಟನೆಗಳಿಂದ ವ್ಯಕ್ತವಾದ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಉರ್ವಸ್ಟೋರ್‌ನಲ್ಲಿರುವ ಡಾ| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲೆ ಯ ಪರಿಶಿಷ್ಟ ಜಾತಿ, ಪಂಗಡಗಳ ಮಹಾಸಂಗಮ ಮತ್ತು ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಲಿತ ಸಂಘಟನೆಗಳು ತಮ್ಮೆಲ್ಲ ಭಿನ್ನಾಭಿ ಪ್ರಾಯಗಳನ್ನು ಬದಿಗೊತ್ತಿ ಸೌಹಾರ್ದತೆಯಿಂದ ಒಂದಾಗಿದ್ದು, ಒಗ್ಗಟ್ಟಿನಿಂದ ರಾಜ್ಯ ಹಾಗೂ ದೇಶವನ್ನೇ ಆಳಬಹುದು ಎಂಬುದನ್ನು ತೋರಿಸಿಕೊಡಬೇಕಾಗಿದೆ ಎಂದರು.
ದಲಿತರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ರಮಾನಾಥ ರೈ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಉಭಯ ಜಿಲ್ಲೆಗಳ ದಲಿತರ ಪ್ರಮುಖ ಹಕ್ಕೊತ್ತಾಯ ವಾಗಿರುವ ಡಿಸಿ ಮನ್ನಾ ಸೇರಿದಂತೆ ಎಲ್ಲ ಬೇಡಿಕೆ ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಸಚಿವರು ಮತ್ತು ಅಧಿ ಕಾರಿಗಳ ಸಭೆಗೆ ಕ್ರಮ ವಹಿಸಲಾಗು ವುದು. ಕಳೆದ ಹಲವು ವರ್ಷಗಳಿಂದ ಡಿಸಿ ಮನ್ನಾ ಜಾಗ ಇತ್ಯರ್ಥಕ್ಕೆ ಪ್ರಯತ್ನ ಮಾಡಿದರೂ ಪರಿಹಾರ ಆಗಿಲ್ಲ. ಈ ಬಾರಿಯ ಚುನಾವಣೆಯ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖೀಸಿದ್ದು, ಈ ಸಮಸ್ಯೆ ಇತ್ಯರ್ಥ ಪಡಿಸಲು ಸರಕಾರ ಕ್ರಮ ವಹಿಸುವ ವಿಶ್ವಾಸವಿದೆ ಎಂದರು.
ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ’ಸೋಜಾ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ತುಳು ಪರಿಷತ್ ಅಧ್ಯಕ್ಷ ತಾರನಾಥ್ ಗಟ್ಟಿ, ಉಡುಪಿಯ ದಲಿತ ಸಂಘಟನೆಗಳ ಐಕ್ಯತಾ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯೂರು, ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಶೇಖರ್ ಕುಕ್ಕೋಡಿ, ಸುಭಾಷ್, ಸುಂದರ ಮೇರ ಉಪಸ್ಥಿತರಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ| ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಸ್ವಾಗತಿಸಿ, ರೋಹಿದಾಸ್ ಉಳ್ಳಾಲ್ ನಿರೂಪಿಸಿದರು.
ಸಮ್ಮಾನ
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ, ಮಂಗಳೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ| ಅಭಯ ಕುಮಾರ್, ದಲಿತ ಮುಖಂಡ ಚಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.