Advertisement

ನೇಕಾರರಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನ

03:57 PM May 13, 2022 | Team Udayavani |

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಉಣ್ಣೆ ಕೈಮಗ್ಗ ನೇಕಾರರಿಗೆ ಹಲವಾರು ತೊಂದರೆಗಳಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಉತ್ಪಾದನೆಯ ಜೊತೆಗೆ ಲಾಭ ಗಳಿಸುವ ನಿಟ್ಟಿನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೆಲವು ಸವಲತ್ತುಗಳನ್ನು ನೀಡಲಿದೆ ಎಂದು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿಬಂಧಕ ನೀಲಪ್ಪ ಹೇಳಿದರು.

Advertisement

ಇಲ್ಲಿನ ತ್ಯಾಗರಾಜನಗರದಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ನೇಕಾರ ಉತ್ಪಾದಕ ಕಂಪನಿ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಚಳ್ಳಕೆರೆ ತಾಲೂಕಿನಾದ್ಯಂತ ಹಲವಾರು ಉಣ್ಣೆ ಕೈಮಗ್ಗ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ನೇಕಾರರು ಸೂಕ್ತ ಮಾರ್ಗದರ್ಶನವಿಲ್ಲದ್ದರಿಂದ ನಿರಾಸಕ್ತಿ ತಾಳಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆ, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನೇಕಾರರಿಗೆ ಕೆಲವೊಂದು ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ. ಇನ್ನು ಕೆಲವೇ ದಿನಗಳಲ್ಲಿ ನೇಕಾರರಿಂದ ಮಾಹಿತಿ ಪಡೆದು ಸೌಲಭ್ಯಗಳನ್ನು ವಿತರಿಸಲಾಗುವುದು ಎಂದರು.

ಜಂಟಿ ನಿರ್ದೇಶಕ ಶ್ರೀಧರ ನಾಯ್ಕ ಮಾತನಾಡಿ, ಉಣ್ಣೆ ಕೈಮಗ್ಗ ನೇಕಾರಿಕೆ ಸವಾಲಿನ ಕೆಲಸವಾಗಿದೆ. ನೇಕಾರರ ಜೀವನಕ್ಕೆ ಅವಶ್ಯವಿರುವ ಉತ್ಪಾದನೆ ಮತ್ತು ಮಾರುಕಟ್ಟೆ ಎರಡೂ ಆಗದೆ ಬಹುತೇಕ ನೇಕಾರರ ಕುಟುಂಬಗಳು ಡೋಲಾಯಮಾನ ಸ್ಥಿತಿಯಲ್ಲಿವೆ. ಇದನ್ನು ಮನಗಂಡ ಸರ್ಕಾರ ನೇಕಾರರಿಗೆ ನೇರವಾಗಿ ಸಾಲ ಸೌಲಭ್ಯ ಸೇರಿದಂತೆ ಕೆಲವೊಂದು ರಿಯಾಯಿತಿ ನೀಡಲು ನಿರ್ಧರಿಸಿದೆ. ಎಲ್ಲಾ ನೇಕಾರರಿಗೆ ಸರ್ಕಾರದ ನೂತನ ಕಾರ್ಯ ತಂತ್ರಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುರು ರೇವಣಸಿದ್ದೇಶ್ವರ ಉತ್ಪಾದಕ ಕಂಪನಿಯ ಅಧ್ಯಕ್ಷ ಗುರುಸಿದ್ದಯ್ಯ ಮಾತನಾಡಿ, ನೇಕಾರರು ಮಾಡುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ವ್ಯವಹರಿಸಲು ತೊಂದರೆ ಉಂಟಾಗಿದೆ. ನೇಕಾರರು ಅತ್ಯಂತ ಕಷ್ಟದ ಜೀವನ ನಡೆಸುತ್ತಿದ್ದು ತಮ್ಮ ಮೂಲಕಸುಬನ್ನು ಮುಂದುವರೆಸಿಕೊಂಡು ಹೋಗಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಕೈಮಗ್ಗ ಜವಳಿ ಇಲಾಖೆ ನೇಕಾರ ಸಮುದಾಯಕ್ಕೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಧುರೀಣ ಆರ್‌. ಮಲ್ಲೇಶಪ್ಪ, ಉಪನಿರ್ದೇಶಕ ಡಾ| ಶಿವರಾಜ ಕುಲಕರ್ಣಿ, ಜಿಲ್ಲಾ ಸಂಯೋಜಕ ಡಿ. ಲೋಕೇಶ್‌, ಶ್ರೀಕಾಂತ್‌ ಜೈನರ್‌, ಸೂರನಹಳ್ಳಿ ಜಗದೀಶ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next