Advertisement
ಅಜ್ಜಾವರ ರಸ್ತೆ 6.5 ಕಿ.ಮೀ. ದೂರವಿದೆ. ಡಾಮರು ಹಾಕಿ ಐದು ವರ್ಷ ಕಳೆದಿದ್ದು, ಆ ಬಳಿಕ ದುರಸ್ತಿ ಕಂಡಿಲ್ಲ. ಅತಿಯಾಗಿ ಮಳೆ ಬೀಳುವ ಪ್ರದೇಶವಾದ್ದರಿಂದ ಹಾಗೂ ಈ ಬಾರಿ ಅತಿವೃಷ್ಟಿಯೂ ಕಾಡಿದ್ದರಿಂದ ಸಹಜವಾಗಿ ರಸ್ತೆಯುದ್ದಕ್ಕೂ ದೊಡ್ಡ ಗಾತ್ರದ ಗುಂಡಿಗಳು ನಿರ್ಮಾಣವಾಗಿವೆ. ನಿರ್ವಹಣೆಯ ಅವ್ಯವಸ್ಥೆಯೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಗಳು ಜನರ ಪ್ರಯಾಣಕ್ಕೆ ಅಡ್ಡಿಯಾಗುತ್ತಿದ್ದರೂ ಅಧಿಕಾರಿಗಳು ಜಾಣ ಮೌನ ತಾಳಿರುವುದಕ್ಕೆ ಬೇಸತ್ತ ಅಜ್ಜಾವರ ಗ್ರಾಮಸ್ಥರು ರಸ್ತೆಯಲ್ಲಿರುವ ಹೊಂಡ – ಗುಂಡಿಗಳನ್ನು ಒಂದು ದಿನದ ಶ್ರಮದಾನದ ಮೂಲಕ ಮುಚ್ಚಿದ್ದಾರೆ. ದೊಡ್ಡ ಗಾತ್ರದ ಹೊಂಡಗಳಿದ್ದಲ್ಲಿ ಕೆಂಪು ಕಲ್ಲು, ಜೆಸಿಬಿ ಸಹಾಯದಿಂದ ಮಣ್ಣು ಹಾಕಿ ಮುಚ್ಚಲಾಗಿದೆ. ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ ಸುಳ್ಯ- ಅಜ್ಜಾವರ- ಮಂಡೆಕೋಲು ಜಿ.ಪಂ. ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸುವ ಮೊದಲು ಗ್ರಾಮಸ್ಥರು ಕರಪತ್ರ ಹಂಚಿ, ಜಾಗೃತಿ ಮೂಡಿಸಿದ್ದರು. ‘ನಮ್ಮ ರಸ್ತೆಯನ್ನು ನಿರ್ಲಕ್ಷಿಸಿದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ, ಎಲ್ಲರೂ ಒಂದಾಗಿ ಶ್ರಮದಾನದಲ್ಲಿ ಭಾಗವಹಿಸಿ, ನಮ್ಮ ರಸ್ತೆ- ನಮ್ಮ ಶ್ರಮ’ ಎಂದು ಕರಪತ್ರದಲ್ಲಿ ಮುದ್ರಿಸಲಾಗಿತ್ತು. ಏಕಕಾಲಕ್ಕೆ 3 ಕಡೆ ಶ್ರಮದಾನ
ಒಂದು ದಿನದ ಶ್ರಮದಾನದಲ್ಲಿ ಗುಂಡಿ ಮುಚ್ಚುವ ಕೆಲಸ ಬೆಳಗ್ಗೆ 9.30ಕ್ಕೆ ಅಜ್ಜಾವರ ಗ್ರಾಮದ ಕಾಂತಮಂಗಲ, ಅಜ್ಜಾವರ ಹಾಗೂ ಅಡ್ಪಂಗಾಯದಲ್ಲಿ ಆರಂಭವಾಯಿತು. ಶ್ರಮದಾನದ ಮೂಲಕ ಪ್ರತಿಭಟಿಸಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ರಸ್ತೆ ದುರಸ್ತಿಗೆ ಗ್ರಾಮಸ್ಥರ ಮನವಿಯ ಹಿನ್ನೆಲೆಯಲ್ಲಿ ಕೇಂದ್ರದ ಸಿಆರ್‌ಎಫ್ ಯೋಜನೆಯಲ್ಲಿ 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಾಜ್ಯ ಸರಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಆದ ವಿಳಂದಿಂದ ರಸ್ತೆ ದುರಸ್ತಿ ಕಾಮಗಾರಿ ಇನ್ನೂ ನಡೆದಿಲ್ಲ. ಮುಂಬರುವ ಮಳೆಗಾಲಕ್ಕೆ ಮೊದಲಾದರೂ ರಸ್ತೆ ದುರಸ್ತಿಯಾಗಲಿ ಎಂದು ಆಗ್ರಹಿಸಿದ್ದಾರೆ.
Related Articles
ಅಜ್ಜಾವರ ರಸ್ತೆ ದುರಸ್ತಿಯ ಕುರಿತು ಹಲವು ಬಾರಿ ಮನವಿ ಮಾಡಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮಸ್ಥರು ಸೇರಿ ಶಿಥಿಲಗೊಂಡಿರುವ ರಸ್ತೆಯ ಹೊಂಡ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿದ್ದೇವೆ.
– ಮಿಥುನ್ ಕರ್ಲಪ್ಪಾಡಿ, ಸ್ಥಳೀಯರು
Advertisement