Advertisement

ಕೆಎಫ್‌ಡಿ ನಿಯಂತ್ರಣಕ್ಕೆ ಸೂಕ್ತ ಕ್ರಮ: ಚಕ್ರವರ್ತಿ

10:08 AM Feb 08, 2019 | |

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹಾಗೂ ಮಂಗಗಳಿಂದ ಬೆಳೆ ಹಾನಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಕುರಿತು ಪರಿಹಾರ ಒದಗಿಸುವುದು ಸೇರಿದಂತೆ ಮಂಗಗಳ ಉಪಟಳವನ್ನು ಸಮರ್ಪಕವಾಗಿ ನಿಭಾಯಿಸುವ ಕುರಿತು ಸೂಕ್ತ ಮಾರ್ಗದರ್ಶನವನ್ನು ಕೋರಿ ಪರಿಸರ ಇಲಾಖೆಗೆ ಪತ್ರ ಬರೆಯುವಂತೆ ಜಿಲ್ಲಾ ನೋಡೆಲ್‌ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌ ಅವರು ಸೂಚನೆ ನೀಡಿದರು.

Advertisement

ಅವರು ಗುರುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಕುಡಿಯುವ ನೀರಿನ ಪರಿಸ್ಥಿತಿ: ಜಿಲ್ಲೆಯಲ್ಲಿ ಹಿಂಗಾರು ಶೇ.50ರಷ್ಟು ವಾಡಿಕೆಗಿಂತ ಕಡಿಮೆಯಾಗಿದಎ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇರುವುದಿಲ್ಲ. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದಾದ 216 ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಇದರಲ್ಲಿ ಶಿವಮೊಗ್ಗ 16, ಭದ್ರಾವತಿ 44, ಸಾಗರ 69, ಹೊಸನಗರ 12, ಶಿಕಾರಿಪುರ 32 ಹಾಗೂ ಸೊರಬ ತಾಲೂಕಿನ 43 ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಚಕ್ರವರ್ತಿ ಮೋಹನ್‌ ಅವರು ತಿಳಿಸಿದರು.

ಮೇವು ಕೊರತೆ ಇಲ್ಲ: ಜಿಲ್ಲೆಯಲ್ಲಿ ಭತ್ತದ ಪೈರಿನ ಕಟಾವು ನಡೆಯುತ್ತಿದ್ದು, ಸುಮಾರು 26 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಮೇವು ಬೀಜದ 32522 ಕಿರು ಪೊಟ್ಟಣ ಜಿಲ್ಲೆಗೆ ಸರಬರಾಜಾಗಿದ್ದು, ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕೊಳೆ ರೋಗ ಪರಿಹಾರ ವಿತರಣೆ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಅಡಕೆಗೆ ಕೊಳೆರೋಗ ಬಂದು 33ಸಾವಿರ ಮಂದಿಗೆ 18.50 ಕೋಟಿ ರೂ. ನಷ್ಟ ಉಂಟಾಗಿರುವುದಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತುತ 8.50 ಕೋಟಿ ರೂ. ಪರಿಹಾರ ಧನ ಬಿಡುಗಡೆಯಾಗಿದ್ದು, 13500 ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಯೋಗೀಶ್‌ ಅವರು ತಿಳಿಸಿದರು.

Advertisement

ಕಂದು ಜಿಗಿಹುಳ ಬಾಧೆ: ಮುಂಗಾರು ಹಂಗಾಮಿನಲ್ಲಿ ಕಂದು ಜಿಗಿಹುಳ ಬಾಧೆಯಿಂದ ಜಿಲ್ಲೆಯಲ್ಲಿ ಒಟ್ಟು 6698 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾನಿ ಉಂಟಾಗಿದ್ದು, ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ 6.47ಕೋಟಿ ರೂ. ಪರಿಹಾರ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ಭತ್ತ ಖರೀದಿ ಪ್ರಸ್ತಾವನೆ: ಕನಿಷ್ಟ ಬೆಂಬಲ ಬೆಲೆಯಡಿ ಭತ್ತ ಖರೀದಿ ಕುರಿತಾಗಿ 712 ರೈತರು ಮಾತ್ರ ಹೆಸರು ನೋಂದಾಯಿಸಿದ್ದು, 28 ಸಾವಿರ ಕ್ವಿಂಟಾಲ್‌ ಭತ್ತ ಖರೀದಿಸಲಾಗಿದೆ. ಮಾರ್ಗಸೂಚಿ ಪ್ರಕಾರ ಒಂದು ಕ್ವಿಂಟಾಲ್‌ ಭತ್ತದಲ್ಲಿ ಕನಿಷ್ಠ 67 ಕೆಜಿ ಅಕ್ಕಿಯನ್ನು ಒದಗಿಸಬೇಕಾಗಿದ್ದು, ಸ್ಥಳೀಯ ಭತ್ತದಲ್ಲಿ ನುಚ್ಚಿನ ಅಂಶ ಹೆಚ್ಚಿರುವುದರಿಂದ ಇಷ್ಟು ಅಕ್ಕಿ ಒದಗಿಸಲು ಸಾಧ್ಯವಿಲ್ಲ ಎಂದು ಗಿರಣಿ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಚ್ಚಲಕ್ಕಿ ಪೂರೈಕೆ ಮಾಡಲು ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಜಯಪ್ಪ ಅವರು ತಿಳಿಸಿದರು.

ಶಿವಮೊಗ್ಗದಂತಹ ಮಲೆನಾಡು ಪ್ರದೇಶದಲ್ಲಿ ಸಮರ್ಪಕ ಸಂಪರ್ಕ ಸಾಧನವಾಗಿ ಈಗಾಗಲೇ ವಯರ್‌ಲೆಸ್‌ ಸಂಪರ್ಕ ಸೌಲಭ್ಯ ಒದಗಿಸಲಾಗಿದೆ. ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ಸಂಪರ್ಕಕ್ಕಾಗಿ ಇದು ಅತ್ಯಂತ ಅಗತ್ಯವಾಗಿದ್ದು, ಈಗಾಗಲೇ ನೀಡಲಾಗಿರುವ ವಯರ್‌ಲೆಸ್‌ ಸಾಧನಗಳನ್ನು ಸುಸ್ಥಿತಿಯಲ್ಲಿರಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next