Advertisement
ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಬಿರು ಬೇಸಿಗೆಯಲ್ಲಿ ಸೆಕೆಯಿಂದ ಕಂಗೆಡುತ್ತಿದ್ದ ಜನತೆ ಈ ಬಾರಿ ಮಳೆಯಿಂದ ಸಮಸ್ಯೆ ಎದುರಿಸುವಂತಾಯಿತು. ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಲ್ಲಿ ಈ ರೀತಿ ನಿರಂತರ ಮಳೆ ಬಿದ್ದ ಉದಾಹರಣೆಯಿಲ್ಲ. ಒಂದೆರಡು ಮುಂಗಾರು ಪೂರ್ವ ಮಳೆಯಾಗಿ ಹೋಗುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ಈಚೆಗೆ ಬಿದ್ದ ಮಳೆ ಜನರನ್ನು ಹೈರಾಣಾಗಿಸಿದೆ. ಅದರಲ್ಲೂ ರೈತರ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ನೂರಾರು ಬಡ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
Related Articles
Advertisement
ಮಳೆಯಿಂದ ರಸ್ತೆಗಳು ಹಾಳು: ಈ ಮೊದಲೇ ಹಾಳಾಗಿ ಗುಂಡಿ ಬಿದ್ದಿದ್ದ ರಸ್ತೆಗಳು ನಿರಂತರ ಮಳೆಗೆ ಮತ್ತಷ್ಟು ಹದಗೆಟ್ಟಿವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಯಾವ ರಸ್ತೆಗಳ ಸ್ಥಿತಿಯಂತೂ ನೋಡುವಂತೆಯೇ ಇಲ್ಲ. ದೊಡ್ಡ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರವೇ ಬೇಡ ಎಂಬ ಸ್ಥಿತಿಗೆ ಬಂದಿವೆ. ನಗರ ಪ್ರದೇಶಗಳ ರಸ್ತೆಗಳ ಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿದು ಡಾಂಬರು ಕಿತ್ತುಹೋಗಿವೆ.
ಮೇ ತಿಂಗಳಲ್ಲೇ ಕೆರೆ-ಕಟ್ಟೆಗಳು ಭರ್ತಿಯಾಗಿರುವುದು ದಾಖಲೆಯ ಸಂಗತಿಯಾಗಿದೆ. ಬಹುತೇಕ ಎಲ್ಲ ಕೆರೆಗಳು ತುಂಬಿವೆ. ಬತ್ತಿ ಹೋಗಿದ್ದ ವರದಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಈ ಸಲದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತಾಗಿದೆ.