Advertisement

ಎಜುಟೆಕ್‌ “ವಿದೇಶಿ ವಿವಿ ಪ್ರಮಾಣಪತ್ರ”ಕ್ಕಿಲ್ಲ ಮಾನ್ಯತೆ- ವಿದ್ಯಾರ್ಥಿಗಳಿಗೆ UGC ಎಚ್ಚರಿಕೆ

09:16 PM Dec 16, 2023 | Team Udayavani |

ನವದೆಹಲಿ: “ಭಾರತದಲ್ಲೇ ವ್ಯಾಸಂಗ ಮಾಡಿ, ವಿದೇಶಿ ವಿವಿಗಳ ಪದವಿ ಪಡೆಯಿರಿ” ಎಂದು ಹೇಳಿಕೊಂಡು ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ವಂಚಿಸುವ ಎಜುಟೆಕ್‌ ಕಂಪನಿಗಳು ಹಾಗೂ ಕಾಲೇಜುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಸೂಚಿಸಿದೆ. ಜತೆಗೆ, ಇಂತಹ ಕಾಲೇಜುಗಳು ನೀಡುವ ವಿದೇಶಿ ಪದವಿ ಪ್ರಮಾಣಪತ್ರಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

Advertisement

“ಮೇಡ್‌ ಇನ್‌ ಇಂಡಿಯಾ” ವಿದೇಶಿ ಪದವಿ ಹೆಸರಿನಲ್ಲಿ ಹಲವಾರು ವಿದ್ಯಾರ್ಥಿಗಳು ನಕಲಿ ಪದವಿಗಳನ್ನು ಪಡೆಯುತ್ತಿರುವುದರ ಬಗ್ಗೆ ಯುಜಿಸಿ ಕಳವಳ ವ್ಯಕ್ತಪಡಿಸಿದೆ. ಒಂದು ಬಾರಿಯೂ ವಿಮಾನ ಹತ್ತದೇ, ಮನೆಯಿಂದಲೂ ಹೊರಬರದೇ, ವಿದೇಶಿ ಉಪನ್ಯಾಸಕರ ಪಾಠಗಳನ್ನೂ ಆಲಿಸದೇ, ಪ್ರಾಜೆಕ್ಟ್ಗಳನ್ನು ಸಲ್ಲಿಸದೇ ಈ ವಿದ್ಯಾರ್ಥಿಗಳಿಗೆ “ವಿದೇಶಿ ವಿವಿಗಳ ಪದವಿ ಪ್ರಮಾಣಪತ್ರ’ ಲಭ್ಯವಾಗುತ್ತಿವೆ.

ಬೆಂಗಳೂರಿನ ಕೆಲವು ಕಾಲೇಜುಗಳೂ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಪದವಿ ಪ್ರಮಾಣಪತ್ರ ಕಲ್ಪಿಸಿಕೊಡುವ ಭರವಸೆ ನೀಡಿರುವ ಸಂಗತಿಗಳೂ ಬೆಳಕಿಗೆ ಬಂದಿವೆ. ವಿದ್ಯಾರ್ಥಿಗಳು ಇದನ್ನು ನಿಜವೆಂದೇ ನಂಬಿ ಮೋಸ ಹೋಗುತ್ತಿದ್ದಾರೆ. ಅವರು ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹೋಗುವಾಗಲೇ ಅವರಿಗೆ ಈ ನಕಲಿ ಪ್ರಮಾಣಪತ್ರಗಳ ಸತ್ಯ ಅರಿವಾಗುವುದು. ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲದೇ, ಭಾರತದಲ್ಲಿ ವ್ಯಾಸಂಗ ಮಾಡಿದ ನೇಪಾಳ, ಪೋಲೆಂಡ್‌ ಸೇರಿದಂತೆ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಕೂಡ ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.

ಈಗ ಈ ಕುರಿತು ಸ್ಪಷ್ಟನೆ ನೀಡಿರುವ ಯುಜಿಸಿ, ತನ್ನಿಂದ ಗುರುತಿಸಲ್ಪಡದೇ ಇರುವ ಸಂಸ್ಥೆಗಳು ವಿತರಿಸುವಂಥ ಪ್ರಮಾಣಪತ್ರಗಳು ಹಾಗೂ ಪದವಿಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next