ಕಲಬುರಗಿ: ಉನ್ನತ ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲ ಪಡೆದ ಮಾಹಿತಿ(ಪ್ರಸ್ತಾವನೆ) ಬ್ಯಾಂಕ್ಗಳು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನೋಡಲ್ ಬ್ಯಾಂಕ್(ಕೆನರಾ)ಗೆ ಕಳಿಸದಿರುವುದರಿಂದ ಶೈಕ್ಷಣಿಕ ಸಾಲ ಪಡೆದವರ ಖಾತೆಗೆ ಬಡ್ಡಿ ಹಣ ಜಮಾ ಆಗಿಲ್ಲ. ಇದಕ್ಕೆ ಬ್ಯಾಂಕ್ಗಳೇ ನೇರ ಹೊಣೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ನಗರದ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಹಮ್ಮಿಕೊಂಡಿದ್ದ ಹೈ.ಕ. ಪ್ರದೇಶದ ಶೈಕ್ಷಣಿಕ ಸಾಲ ಪಡೆದ ಪಾಲಕರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಾಗ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪತ್ರದ ಮೂಲಕ ತಿಳಿಸಿದ್ದಾರೆ. ಶೈಕ್ಷಣಿಕ ಸಾಲ ಮನ್ನಾಕ್ಕಾಗಿ ರಾಜಕೀಯವಾಗಿ ಮಾಡುವ ಹೋರಾಟದ ಜತೆಗೆ ಕಾನೂನಿನ ಮೊರೆ ಹೋಗಲು ಸಿದ್ಧರಾಗುವಂತೆ ಪಾಲಕರಿಗೆ ತಿಳಿಸಿ, ಶೈಕ್ಷಣಿಕ ಸಾಲ ಪಡೆದ ಪಾಲಕರ ಪರವಾಗಿ ಕೇಂದ್ರ ಸರ್ಕಾರಕ್ಕೆ ಮತ್ತೂಮ್ಮೆ ಮನವಿ ಮಾಡುವುದಾಗಿ ಹೇಳಿದರು.
ವೇದಿಕೆ ಅಧ್ಯಕ್ಷ ಪ್ರೊ| ಎಂ.ಬಿ. ಅಂಬಲಗಿ ಮಾತನಾಡಿ, ಶೈಕ್ಷಣಿಕ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಪ್ರಧಾನಿಗೆ ಒತ್ತಾಯಿಸಿ ಜು. 21ರಿಂದ 27ರ ವರೆಗೆ ದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಮೂಲಕ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಅದಕ್ಕೆ ಒಪ್ಪದಿದ್ದರೆ ದೆಹಲಿ ಜಂತರ ಮಂತರನಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಇದಕ್ಕೂ ಪೂರ್ವ ಜು. 11 -12ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್ನಲ್ಲಿ ಶೈಕ್ಷಣಿಕ ಸಾಲ ಪಡೆದ ವಿದ್ಯಾರ್ಥಿಗಳ ಸಭೆ ನಡೆಸಿ ಸಾಲ ಮನ್ನಾ ಮಾಡುವ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಹೈ.ಕ. ಭಾಗದಲ್ಲಿ ಶೈಕ್ಷಣಿಕ ಸಾಲ ಪಡೆದವರಿಗೆ ಬ್ಯಾಂಕ್ಗಳು ವಿವಿಧ ರೀತಿಯಿಂದ ಕಿರುಕುಳ ನೀಡುತ್ತ ಕಠಿಣಕ್ರಮದಿಂದ ಸಾಲ ವಸೂಲು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ಪಷ್ಟ ನಿರ್ಧಾರ ತಿಳಿಸುವವರೆಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿ ನಿಲ್ಲಿಸುವಂತೆ ಪ್ರಾದೇಶಿಕ ಆಯುಕ್ತರು ಬ್ಯಾಂಕ್ಗಳಿಗೆ ಸೂಚಿಸಬೇಕು ಎಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಕೃಷ್ಣಭಟ್ಟ ಜೋಶಿ, ಸೂರ್ಯಕಾಂತ ಜೀವಣಗಿ, ಶಾಂತಪ್ಪ ಕಮಲಾಪುರ, ಬಸವರಾಜ ರಾಜಾಪುರ, ಆರ್.ಎಸ್. ಪಾಟೀಲ, ಮಹ್ಮದ್ ಜಾಫರ್, ಮಹ್ಮದ ಬೇಗ್, ಇಬ್ರಾಹಿಂ, ಶಿವರಾಜ ಸರಾಟೆ, ಮಲ್ಲಿಕಾರ್ಜುನ ಪಾಟೀಲ, ಪ್ರಧಾನಿ, ಗುಣಶೇಖರ ಹೀರಾಪುರ ಪಾಟೀಲ, ಶಾಂತಯ್ಯ, ಪಲ್ಲವಿ ಧೂಳರಾಜ ಧೋತ್ರೆ ಸೇರಿದಂತೆ ಹೈ.ಕ. ಪ್ರದೇಶದ 6 ಜಿಲ್ಲೆಗಳ ನೂರಾರು ಪಾಲಕರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಮಾವೇಶದ ನಂತರ ಪಾಲಕರು ಪ್ರಾದೇಶಿಕ ಆಯುಕ್ತ ಕಚೇರಿಗೆ ತೆರಳಿ ಶೈಕ್ಷಣಿಕ ವಸೂಲಾತಿ ನಿಲ್ಲಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು.