ಬೆಂಗಳೂರು: “ಮನೀ ಬಿಟ್ಟು ಮೂರ್ ದಿನ ಆಯ್ತು. ಹೊಟ್ಟಿಗೆ ಹಿಟ್ಟಿಲ್ಲ. ಶೌಚಾಲಯಕ್ಕೆ ಹೋಗಾಕ ಸರಿಯಾದ ಜಾಗ ಇಲ್ಲ. ಮನೆಯಿಂದ ತಂದಿದ್ದ ರೊಟ್ಟಿ, ಚೆಟ್ನಿ ಖಾಲಿಯಾಗ್ಯಾವು. ನಿನ್ನೆ ರಾತ್ರಿಯಿಂದ ಹೊಟ್ಟಿàಗೆ ಹಿಟ್ಟಿಲ್ದ ಕಳ್ಳು ಚುರುಕ್ ಅಂತೈತಿ. ಸಾಕಾಗಿ ಹೋಗೈತ್ರೀ ಈ ಜೀವನ. ಸರ್ಕಾರದೋವ್ರು ಯಾರಾದ್ರು ಬಂದ್ ನಾಲ್ಕೈದು ಕಾಸು (ನಾನೂರು, ಐದುನೂರು) ಹೆಚ್ಚಿಗಿ ಕೋಡ್ತೀವಿ ಅಂತ ಹೇಳಿದ್ರೆ ಸಾಕು. ನಾವ್, ನಂಪಾಡಿಗೆ ನಮ್ಮೂರ್ ಕಡೆ ಹೊಕ್ಕೀವ್ರಿ ಇದು ಪ್ರತಿಭಟನಾ ನಿರತ ಬಿಸಿಯೂಟ ಕಾರ್ಯಕರ್ತೆ ನಾಗಮ್ಮ ಅವರ ಅಳಲು.
ಕೊರೆಯುವ ಚಳಿಯಲ್ಲಿಯೇ ಮಂಗಳವಾರ ಬೀದಿಯಲ್ಲಿ ರಾತ್ರಿ ಕಳೆದಿದ್ದ ನಾಗಮ್ಮನಿಗೆ ಒಂದು ಕಡೆ ಊಟ ಇಲ್ಲದೆ ಹೊಟ್ಟೆ ತಡಬಡಿಸುತ್ತಿತ್ತು. ಯಾರಾದ್ರೂ ಊಟ ಕೊಟ್ರೇ ಸಾಕಿತ್ತು ಎಂಬ ಮನಸ್ಥಿತಿ ಅವರದಾಗಿತ್ತು. ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಬೆಳಗ್ಗೆ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಹ ನಟಿಯೊಬ್ಬರು ಊಟ ನೀಡಿದಾಗ ಅವರ ಆ ಖುಷಿಗೆ ಪಾರವೇ ಇರಲಿಲ್ಲ.
ಈ ಪರಿಸ್ಥಿತಿ ಎಲ್ಲರದ್ದೂ ಆಗಿದೆ. ರಾತ್ರಿ ನಿದ್ರೆ ಇಲ್ಲದೆ, ರಸ್ತೆ ಮಧ್ಯೆ ಹಾಗೂ ಇಕ್ಕೆಲಗಳಲ್ಲಿ ತಾವು ತಂದಿದ್ದ ಕೈಚೀಲಗಳನ್ನೇ ದಿಂಬುಗಳನ್ನಾಗಿ ಮಾಡಿಕೊಂಡು ಮಲಗಿದ್ದ ಮಹಿಳೆಯರು ಊಟ, ನೀರಿಗಾಗಿ ಪರಿತಪ್ಪಿಸುತ್ತಿದ್ದ ಪರಿಸ್ಥಿತಿ ನೋವಿನಿಂದ ಕೂಡಿತ್ತು. ತಮ್ಮ ಬೇಡಿಕೆಗೆ ಸ್ಪಂದಿಸಲು ಮಂತ್ರಿಗಳು, ಸರ್ಕಾರದ ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಿದ್ದರು ಕುಸಿದು ಬಿದ್ದ ಮಹಿಳೆ
ಅನಿರ್ಧಿಷ್ಟಾವಧಿಯ ಅಹೋರಾತ್ರಿ ಹೋರಾಟದಲ್ಲಿ ರಾಜ್ಯದ ನಾಲ್ಕೂ ಮೂಲೆಗಳಿಂದ ಬಿಸಿಯೂಟ ತಯಾರಕರು ಪಾಲ್ಗೊಂಡಿ
ದ್ದಾರೆ. ಸರಿಯಾಗಿ ಅನ್ನ, ನಿದ್ರೆ ಇಲ್ಲದೆ ಅವರೆಲ್ಲಾ ನಿತ್ರಾಣಗೊಂಡಿದ್ದಾರೆ. ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ
ರಾಣೆಬೆನ್ನೂರಿನ ಸುನಂದಾ ಎಂಬುವರು ಬುಧವಾರ ಸ್ಥಳದಲ್ಲಿಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಅವರನ್ನು
ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ನೆರವಾದರು.
ನಾವೆಲ್ಲರೂ ದೂರದೂರುಗಳಿಂದ ಬಂದಿದ್ದೇವೆ. ಸಿಎಂ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್… ಧರಣಿ ನಿರತ ಸ್ಥಳಕ್ಕೆ ಬರಬೇಕು.
ಅವರು ಬಂದು ನಮ್ಮ ದುಮ್ಮಾನಗಳನ್ನು ಕೇಳುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ.
ಶೈಲಜಾ, ತೀರ್ಥಹಳ್ಳಿ ನಿವಾಸಿ.
ಈ ಹಿಂದೆ ತನ್ವೀರ್ ಸೇಠ್ಠ್… ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಸಿಯೂಟ ತಯಾರ ಕರಿಗೆ 3 ಸಾವಿರ ರೂ. ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಿದ್ದರು. ಆದರೆ, ಸರ್ಕಾರ ಕ್ರಮ ಕೈಗೊಂಡಿಲ್ಲ. ಕೇಂದ್ರವೂ ನಮ್ಮನ್ನು ಕಡೆಗಣಿಸಿದೆ. ವೇತನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವು ಭಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಈ ಬಗ್ಗೆ ಮುಂದೆ ಸರ್ಕಾರದ ವಿರುದ್ದ ಹೋರಾಟ ರೂಪಿಸಲಾಗುವುದು.
ಹೊನ್ನಪ್ಪ ಮರೇಮ್ಮನವರ, ಬಿಸಿಯೂಟ ತಯಾರಕರ ಫೆಡರೇಷನ್‌ನ ರಾಜ್ಯ ಸಮಿತಿ ಅಧ್ಯಕ್ಷ