ಕಲಬುರಗಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿಯಿದ್ದ ಅಭಿಯಂತರರ ಹಾಗೂ ಇತರ ಹುದ್ದೆಗಳಲ್ಲಿ 371(ಜೆ)ನೇ ಕಲಂ ಅಡಿ ಮೀಸಲಾತಿಯಲ್ಲಿ ಆದ ಅನ್ಯಾಯ ಸರಿಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಈಶಾನ್ಯ ವಲಯದ ಶಿಕ್ಷಕರ ವೇದಿಕೆಯಡಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
4 ಜುಲೈ 2016ರ ಅಧಿಸೂಚನೆಯಂತೆ ಜೆಸ್ಕಾಂನಲ್ಲಿ 780 ಹುದ್ದೆಗಳನ್ನು ತೋರಿಸಿ ಕೇವಲ 400 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಉಳಿದ 380 ಹುದ್ದೆಗಳನ್ನು ಸೂಕ್ತ ಮಾಹಿತಿಯಲ್ಲದೇ ಕೈಬಿಡಲಾಗಿದೆ. ಕೆಪಿಟಿಸಿಎಲ್ ಹಾಗೂ ಯೆಸ್ಕಾಂನಲ್ಲಿ ಯಾವ ಹುದ್ದೆಗೂ ಮೀಸಲಾತಿ ನೀಡೇ ಇಲ್ಲ.
8 ಸೆಪ್ಟೆಂಬರ್ 2016 ರಂದು ಕೆಪಿಟಿಸಿಎಲ್ ಮತ್ತು ವಿವಿಧ ಯೆಸ್ಕಾಂಗಳಲ್ಲಿ ಗ್ರೂಪ್ ಎ,ಬಿ,ಸಿ ಮತ್ತು ಡಿ ಗೆ ಸಂಬಂಧಿಸಿದ ಹುದ್ದೆಗಳಲ್ಲಿ 371(ಜೆ) ಸಂವಿಧಾನ ತಿದ್ದುಪಡಿಯ ಪ್ರಕಾರ ಮೀಸಲಾತಿ ಜಾರಿಗೆ ತಂದಿಲ್ಲ. ಕೆಲ ಹುದ್ದೆಗಳಲ್ಲಿ ಎ.ಇ. ಮತ್ತು ಜೆ.ಇ.ವಿದ್ಯುತ್ ಹುದ್ದೆಗಳಲ್ಲಿ 371(ಜೆ) ಅಡಿ ಮೀಸಲಾತಿ ನೀಡಿಲ್ಲ.371(ಜೆ) ಅಡಿ ಸ್ಥಳೀಯ ಹುದ್ದೆಗಳಲ್ಲಿ ಎ,ಬಿ,ಸಿ ಮತ್ತು ಡಿನಲ್ಲಿ ಶೇ.75,80 ಮತ್ತು 85 ರಂತೆ ಮೀಸಲಾತಿ ಅನ್ವಯಿಸುತ್ತದೆ. ರಾಜ್ಯಾದ್ಯಂತ ಗ್ರೂಪ್ ಎ,ಬಿ,ಸಿ ಮತ್ತು ಡಿ ಯಲ್ಲಿ ಶೇ.8 ರಷ್ಟು ಮೀಸಲಾತಿಯಿರುತ್ತದೆ. ಅಧಿಸೂಚನೆ ಪ್ರಕಾರ ಕೆಪಿಟಿಸಿಎಲ್ ನಲ್ಲಿರುವ ವಿವಿಧ ಹುದ್ದೆಗಳನ್ನು ಸ್ಥಳೀಯ (ಹೈ.ಕ.) ಮತ್ತು ಸ್ಥಳೀಯೇತರ(ನಾನ್ ಹೈ.ಕ.) ಎಂದು ವಿಂಗಡಿಸಬೇಕು. ಸ್ಥಳೀಯ ಹುದ್ದೆಗಳಲ್ಲಿ ಎ,ಬಿ,ಸಿ ಹಾಗೂ ಡಿನಲ್ಲಿ ಶೇ.75, 80 ಹಾಗೂ 85 ರಂತೆ ಮೀಸಲಾತಿ ನೀಡಬೇಕು. ಸ್ಥಳಿಯೇತರ ವಿವಿಧ ಹುದ್ದೆಗಳಲ್ಲಿ ಶೇ.8 ಮೀಸಲಾತಿ ನೀಡಬೇಕು.
ಕೆಪಿಟಿಸಿಎಲ್(ಸಹಾಯಕ ಇಂಜಿನಿಯರ್) ಹುದ್ದೆಗಳು 255 ಇದ್ದು, ಜೆ.ಇ 300 ಹುದ್ದೆಗಳಿವೆ. ಸ್ಥಳೀಯವಾಗಿ ಖಾಲಿಯಿರುವ ಹುದ್ದೆಗಳ ಬಗ್ಗೆ ಮಾಹಿತಿಯಿಲ್ಲ. ಇದ್ದಲ್ಲಿ ಮೀಸಲಾತಿ ನೀಡಬೇಕು. ಸ್ಥಳೀಯೇತರ ಇದ್ದರೆ ನಿಯಮದಂತೆ ಮೀಸಲಾತಿ ನೀಡಬೇಕು. ಒಂದು ವೇಳೆ ಸ್ಥಳೀಯ ಹುದ್ದೆಗಳಿಲ್ಲದಿದ್ದರೇ ಶೇ.8ರಷ್ಟಾದರೂ ಮೀಸಲಾತಿ ನೀಡಬೇಕು.
ಕೆಪಿಟಿಸಿಎಲ್, ಜೆಇ ವಿದ್ಯುತ್ 304 ಹುದ್ದೆಗಳಿದ್ದು, ಸ್ಥಳೀಯ ಮಟ್ಟದಲ್ಲಿ ಕೇವಲ 3 ಹುದ್ದೆ ಮೀಸಲಿಟ್ಟಿದ್ದಾರೆ ಇದು ಯಾವ ಮೀಸಲಾತಿ?. ಆನ್ಲೈನ್ ಪರೀಕ್ಷೆ ನಡೆಸಿದರೂ ಓಎಂಆರ್ ಪ್ರತಿ ಲಭ್ಯವಾಗುತ್ತಿಲ್ಲ. ಕಾರಣ ಓಎಂಆರ್ ನಕಲು ಪ್ರತಿ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
ಸರ್ಕಾರ ಇದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಸೆ.6 ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್ನಲ್ಲಿ ನಡೆವ ಸಭೆಗೆ ಹೈ.ಕ. ಭಾಗದ ವ್ಯಾಪ್ತಿಯಲ್ಲಿ ಅರ್ಜಿ ಹಾಕಿ ಬರೆದ ಅಭ್ಯರ್ಥಿಗಳು ಭಾಗವಹಿಸಬೇಕು. ಆ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ತಿಳಿಸಿದ್ದಾರೆ.