Advertisement

ಹೊರನಾಡ ಕನ್ನಡಿಗರ ಮಕ್ಕಳಿಗೆ ಶೈಕ್ಷಣಿಕ ಸಹಾಯಕ್ಕಾಗಿ ಒತ್ತಾಯ 

05:22 PM Feb 25, 2017 | |

ಸೊಲ್ಲಾಪುರ: ಹೊರನಾಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಒಳನಾಡಿನಲ್ಲಿ ಓದುತ್ತಿರುವ ಮಕ್ಕಳಿಗೆ ದೊರೆಯುವ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆದೇಶವನ್ನು ಹೊರಡಿಸಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದು ರಾಯಚೂರಿನ 82ನೇ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ನಾಡಿನ ಹಿರಿಯ ಚಿಂತಕ ಡಾ| ಬರಗೂರು ರಾಮಚಂದ್ರಪ್ಪ ಹೇಳಿದರು.

Advertisement

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಫೆ. 23 ರಂದು  ನಡೆದ ಗಡಿ ಮತ್ತು ಹೊರನಾಡ ಕನ್ನಡಿಗರ ಸ್ಥಿತಿ-ಗತಿ ಸಭೆಯಲ್ಲಿ ಅವರು ಮಾತನಾಡಿ, ಸಮ್ಮೇಳನದಲ್ಲಿ ಮಂಡಿಸಲಾದ ನಾಲ್ಕು ಮುಖ್ಯ ನಿರ್ಣಯಗಳಲ್ಲಿ ಇದೂ ಒಂದಾಗಿದ್ದು, ಈ ಎಲ್ಲ ನಿರ್ಣಯಗಳು ಆದಷ್ಟು ಬೇಗ ಕಾರ್ಯಾನ್ವಯಗೊಳ್ಳುವಂತೆ ಸರಕಾರಕ್ಕೆ ನಿಖರವಾದ ಮಾಹಿತಿಯುಳ್ಳ ಲಿಖೀತ ನಿವೇದನೆಯೊಂದನ್ನು ಸಲ್ಲಿಸಿ ಹಕ್ಕೊತ್ತಾಯ ಮಾಡಲಾಗುವುದು ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ|  ಮನು ಬಳಿಗಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹೊರನಾಡ ಕನ್ನಡಿಗರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಮೀಸಲಾತಿ, ಹೊರನಾಡಿನ ಕನ್ನಡ ಮಾಧ್ಯಮದ ಮಕ್ಕಳಿಗೆ ದೊರೆಯಬೇಕಾದ ಸೌಲಭ್ಯಗಳು, ಹೊರನಾಡಿನಲ್ಲಿ ಪಠ್ಯಪುಸ್ತಕ ಸಮಸ್ಯೆ ಸೇರಿದಂತೆ ಹಲವಾರು ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ| ಮನು ಬಳಿಗಾರ್‌,
ಕನ್ನಡ ಸಾಹಿತ್ಯ ಪರಿಷತ್ತು ಹೊರ ನಾಡ ಕನ್ನಡಿಗರಿಗೆ ಆಗುತ್ತಿರುವ ಅನನುಕೂಲತೆ
ಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದು ಡಾ| ಬರಗೂರು ನೇತೃತ್ವದಲ್ಲಿ ನಿಯೋಗವೊಂದನ್ನು ರಚಿಸಿ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

ಈ ಸಭೆಯಲ್ಲಿ ಆದರ್ಶ ಕನ್ನಡ ಬಳಗದ ಗೌರವಾಧ್ಯಕ್ಷ ಗಿರೀಶ್‌  ಜಕಾಪುರೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಬಸವರಾಜ ಮಸೂತಿ, ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಶಿವಕುಮಾರ್‌, ಕೇರಳ ಘಟಕದ ಅಧ್ಯಕ್ಷ ಸುಬ್ರಮಣ್ಯ ಭಟ್‌ ಸೇರಿದಂತೆ ಹಲವಾರು ಮಹನೀಯರು, ವಿಷಯ ಪರಿಣಿತರು ಭಾಗವಹಿಸಿ ಗಡಿ ಹಾಗೂ ಹೊರನಾಡಿನ ಸಮಸ್ಯೆಗಳ ಬಗ್ಗೆ ವಿವರಗಳನ್ನು ನೀಡಿ ಪರಿಹಾರಕ್ಕೆ ಸಲಹೆ, ಸೂಚನೆಗಳನ್ನು ನೀಡಿದರು.

Advertisement

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗವು ಹೊರನಾಡಿನ ಕನ್ನಡಿಗರಿಗೆ ನ್ಯಾಯ ಒದಗಿಸಲೆಂದು ಹಲವಾರು ದಿನಗಳಿಂದ ಮಾಡುತ್ತಿದ್ದ ಸತತ ಪ್ರಯತ್ನಗಳು ಈಗ ಫಲಕಾರಿಯಾಗಿ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಒಳ ನಾಡಿನಂತೆಯೇ ಹೊರನಾಡಿನ ಕನ್ನಡ ಮಕ್ಕಳಿಗೂ ಸೌಲಭ್ಯಗಳು ದೊರೆಯಲಿವೆ. ಹೊರನಾಡಿನ ಕನ್ನಡಿಗರ ಸಮಸ್ಯೆಗಳು ಬಗೆಹರಿ ಯುವ ಲಕ್ಷಣಗಳು ಕಾಣುತ್ತಿವೆ. ಡಾ| ಮನು ಬಳಿಗಾರ, ಡಾ| ಬರಗೂರು ರಾಮಚಂದ್ರಪ್ಪ ಅವರ ಪ್ರಯತ್ನ ಹಾಗೂ ನೇತೃತ್ವದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿರುವುದು ನಮಗೆಲ್ಲ ಸಂತಸ ತಂದಿದ್ದು ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಬಳಗದ ಗೌರವಾಧ್ಯಕ್ಷ ಗಿರೀಶ ಜಕಾಪುರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next