ತುಮಕೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯೇ ವಿಶ್ವದ ಜ್ಯೋತಿ. ವಿಶಾಲ ಜಗತ್ತಿನಲ್ಲಿ ಸಾಧಕರಾಗಿ ಗುರುತಿಸಿಕೊಳ್ಳಲು ಇರುವ ಕ್ಷೇತ್ರ ಶಿಕ್ಷಣ ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು. ನಗರದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿವಿಯನ್ ವಿಸ್ಟಾ-2020 ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯರು ವಿಶ್ವಾದ್ಯಂತ ಹೆಸರು ಗಳಿಸಲು ವಿದ್ಯೆಯೇ ಮಾರ್ಗವಾಗಿದೆ. ಹಾಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆಯೇ ವಿಶ್ವದ ಜ್ಯೋತಿಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತಾವು ಪಡೆದುಕೊಳ್ಳುವ ವಿದ್ಯೆ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಸಾಧಕರಾಗಿ ಬೆಳಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆಂಗ್ಲಭಾಷೆ ಕಲಿಸಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕ. ಪ್ರೇರಕರಾದವರು ಉಪನ್ಯಾಸಕರು. ಅವರಿಗೆ ಹೆಚ್ಚಿನ ಪ್ರಾಶಸ್ತ ನೀಡಿ ಉತ್ತಮ ಕಲಿಕೆಯ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಲಿಕೆಯಲ್ಲಿ ನಗರದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡಲು ಭಾಷೆಯೂ ಒಂದು ಕಾರಣವಾಗಿದೆ. ಅವರಿಗೆ ಮಾತೃಭಾಷೆ ಜೊತೆಗೆ ಆಂಗ್ಲಭಾಷೆ ಕಲಿಸಿದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮಲ್ಲಿರುವ ಕೀಳರಿಮೆಯಿಂದ ಹೊರಬಂದು ಸಾಧಕರಾಗುತ್ತಾರೆ. ಇಂತಹ ಕಲಿಕೆ ವಾತಾವರಣ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಸೃಷ್ಟಿಸಬೇಕಿದೆ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಕೆ.ಬಿ.ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳ ಓದಿಗೆ ಏಕಾಗ್ರತೆ, ಶ್ರದ್ಧೆ, ಶಿಸ್ತು, ಆಸಕ್ತಿ ಮುಖ್ಯ. ಇದಕ್ಕೆ ಉತ್ತಮ ಕಲಿಕೆ ವಾತಾವರಣವಿರಬೇಕು. ವಿದ್ಯಾವಾಹಿನಿ ಸಂಸ್ಥೆ ಸ್ಥಾಪಿಸಿದ್ದೇ ಉತ್ತಮ ಕಲಿಕೆಯ ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದಕ್ಕೆ. ಅದರಲ್ಲಿ ಯಶಸ್ಸನ್ನೂ ಕಂಡಿದ್ದೇವೆ. ಇಂತಹ ವಾತಾವರಣ ಉಪಯೋಗಿಸಿಕೊಂಡು ಸಾಧಕರಾಗಬೇಕು. ಸಾಧನೆ ಮೂಲಕ ಎಲ್ಲೇ ಹೋದರೂ ನಿಮ್ಮನ್ನು ಗುರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಾಲೇಜುಗಳ ಸಂಖ್ಯೆ ಅಧಿಕವಾಗಿದ್ದು, ಇಲ್ಲಿ ಯಾವ ಕಾಲೇಜು ಗುಣಾತ್ಮಕ ಶಿಕ್ಷಣ ನೀಡುತ್ತದೆಯೋ ಅಂತಹ ಕಾಲೇಜುಗಳಷ್ಟೇ ಉಳಿಯಲು ಸಾಧ್ಯ. ಅಂತಹ ಗುಣಾತ್ಮಕ ಶಿಕ್ಷಣ ನೀಡಿದ್ದರ ಫಲವಾಗಿ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್, ಜಿಲ್ಲೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಸಾಧನೆ ಎಂದು ಹೇಳಿದರು.
ಅಧಿಕ ಸಂಖ್ಯೆ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಸಂತೋಷಕರ. ಈ ಕಾಲೇಜು ಕಡಿಮೆ ಶುಲ್ಕದಲ್ಲಿ ಶಿಸ್ತಿನೊಂದಿಗೆ ಗುಣಾತ್ಮಕ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಇನ್ನಷ್ಟು ಉತ್ತಮ ಫಲಿತಾಂಶ ಬರಲು ನಮ್ಮೊಂದಿಗೆ ಪೋಷಕರು ಸಹಕರಿಸಬೇಕು. ಮುಂದಿನ ಸಾಲಿನಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ನೀಡುತ್ತೇವೆ ಎಂದರು. ಪ್ರಾಚಾರ್ಯ ದಯಾನಂದ್, ಉಪನ್ಯಾಸಕರಾದ ನರೇಂದ್ರ ಪ್ರಸಾದ್, ರಮ್ಯಾ, ಪೂರ್ವಿಕ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿಗಳಿಗೆ ಪುರಸ್ಕಾರ: ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕೈಗಡಿಯಾರ ನೀಡುವುದರ ಮೂಲಕ ಪುರಸ್ಕರಿಸಲಾಯಿತು. ಹಾಗೆಯೇ ಕಾಲೇಜಿನಲ್ಲಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.