Advertisement
ಬದಲಾವಣೆ ಅನಿವಾರ್ಯ ಎನ್ನುವಷ್ಟು ದೊಡ್ಡಪೆಟ್ಟು ಬಿದ್ದಾಗಷ್ಟೇ ಮನುಷ್ಯ ಬದಲಾಗಲು ಪ್ರಯತ್ನಿಸುತ್ತಾನೆ ಎಂಬುದಕ್ಕೆ ಉತ್ತಮ ಉದಾಹರಣೆ ಕೋವಿಡ್-19 ಸಾಂಕ್ರಾಮಿಕ ರೋಗ.
Related Articles
Advertisement
ನಾವಿಲ್ಲಿ ನೆನಪಿಡಬೇಕಾದ ವಿಷಯವೆಂದರೆ ಔಪಚಾರಿಕ ಶಿಕ್ಷಣ ಎಂದರೆ ಬರೀ ಬೋಧನೆಯಲ್ಲ. ಇದು ಮಕ್ಕಳ ನಿರಂತರ ಕಲಿಕೆಗೆ ಸಹಾಯವಾಗುವಂತಿರಬೇಕು. ಕೋವಿಡ್ ಪೂರ್ವದಲ್ಲಿ ತರಗತಿ ಪಾಠ, ನೋಟ್ಸ್, ಆಟದ ಅವಧಿ ಇದ್ದರಷ್ಟೇ ಶಿಕ್ಷಣ ಎಂದೆನಿಸಿದ್ದ ಮಕ್ಕಳು ಈಗ ಪೂರ್ಣಪ್ರಮಾಣದಲ್ಲಿ ಮನೆಯಲ್ಲಿದ್ದು, ಮನೆ ವಾತಾವರಣ, ಊಟೋಪಚಾರ, ಲಘು ಕಲಿಕೆಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಒಮ್ಮೆಲೆ ಶಾಲೆಗೆ ಕರೆದು ವಿಷಯಾಧಾರಿತ ಬೋಧನೆ ಪ್ರಾರಂಭಿಸಿದರೆ ಮಾರನೇ ದಿನ ಮಕ್ಕಳು ಶಾಲೆಯತ್ತ ಬರದೇ ಇರಬಹುದು. ಅದಕ್ಕಾಗಿ ಶಿಕ್ಷಕರಾದವರು ವಿಭಿನ್ನ ವಿಧಾನಗಳ ಮೂಲಕ ಮಕ್ಕಳಲ್ಲಿ ಶಾಲೆ ಮತ್ತು ಪಾಠದ ಸೆಳೆತ ಹೆಚ್ಚಾಗುವಂತೆ ಪ್ರಯತ್ನಿಸಬೇಕಾಗಿದೆ.
ಭಾಷಾ ತರಗತಿಗಳಲ್ಲಿ ಹಾಡು, ಕಥೆ, ನೈಜ ಸನ್ನಿವೇಶಗಳನ್ನು ಶಿಕ್ಷಕರು ವಿವರಿಸಿ, ಅನಂತರ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಪ್ರಕಟಿಸಲು ಅವಕಾಶ ನೀಡಬೇಕು. ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ಅವರ ದೈನಂದಿನ ಚಟುವಟಿಕೆಗಳ ಜತೆ ಸೇರಿ ಸಿಹಿಯಾದ ಮಿಠಾಯಿ ಆಗಬೇಕಾಗಿದೆ. ಪ್ರಯೋಗ ಎಂದರೆ ಪ್ರಮಾದವಾಗದೆ ಮನೋರಂಜನೆ ಎನಿಸಬೇಕಾಗಿದೆ. ಮಾದರಿಗಳ ತಯಾರಿ ಹೆಚ್ಚಾಗಬೇಕಾಗಿದೆ. ಸಮಾಜ ವಿಜ್ಞಾನ ಎಂಬುದು ನೀರಸ ವಿಷಯ ಎಂಬ ಭಾವನೆ ಹೋಗಿಸಲು ಸಮಾಜ ಶಿಕ್ಷಕರಿಂದ ಮಾತ್ರ ಸಾಧ್ಯ. ದೂರದ ಆಸ್ಟ್ರೇಲಿಯಾದ ಬಗ್ಗೆ ಹೇಳುವ ಮೊದಲು ರಾಜ್ಯ, ಜಿಲ್ಲೆ, ತಾಲೂಕು, ತನ್ನ ಗ್ರಾಮದ ಹೆಸರು ಮಕ್ಕಳಿಗೆ ನೆನಪಿದೆಯಾ ಎಂಬುದನ್ನು ಪರೀಕ್ಷಿಸಬೇಕಾಗಿದೆ.
ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ!
ಇವುಗಳ ಇತಿಹಾಸದ ಬಗ್ಗೆ ಗೌರವ ಮೂಡಿಸಬೇಕಾಗಿದೆ. “ನಲಿಕಲಿ’ ತರಗತಿಯಲ್ಲಿ ಕಲಿಯಬೇಕಾದರೆ ವರ್ಣರಂಜಿತ ವರ್ಣಗಳು, ಕಲಾ ಚಿತ್ರಗಳು ಚೈತನ್ಯಭರಿತ ವಿವರಣೆಗಳು ಚಿತ್ತದಲ್ಲಿ ಅಚ್ಚಾಗಬೇಕಾಗಿದೆ. ಬಹುಶಃ ಇಲ್ಲಿ ಶಿಕ್ಷಕಿ ಮತ್ತೂಮ್ಮೆ ತಾಯಿ ಆಗಬೇಕಾಗಿದೆ. ಶಾಲೆ ತಾಯಿಯ ವಾತ್ಸಲ್ಯದ ಮಡಿಲಾಗಬೇಕಾಗಿದೆ. ಈ ಎಲ್ಲ ವಿಧಾನದ ಮೂಲಕ ಮಕ್ಕಳನ್ನು ನಿಧಾನವಾಗಿ ಮೊದಲಿನ ದಾರಿಗೆ ಕರೆತರಲು ಶಿಕ್ಷಕರಿಂದ ಮಾತ್ರ ಸಾಧ್ಯ. ಆದರೆ ಇಲ್ಲಿ ಶಿಕ್ಷಕರಿಗೆ ತಾಳ್ಮೆ, ಯೋಜನೆ ಎಲ್ಲ ಸವಾಲುಗಳನ್ನು ಎದುರಿಸುತ್ತೇನೆ ಎನ್ನುವ ಉತ್ಸಾಹ ಇರಬೇಕು. ಹಾಗೆಂದು ಹೆತ್ತವರ ಪಾತ್ರ ಇಲ್ಲವೆಂದಲ್ಲ. ಬರೀ ಬಾಯಿಪಾಠ ಅಕ್ಷರ ಕಲಿಕೆ, ಪುಟಗಟ್ಟಲೆ ಬರೆಯುವುದು, ಕ್ಷಣಾರ್ಧದಲ್ಲಿ ಲೆಕ್ಕ ಬಿಡಿಸುವುದಷ್ಟೇ ಶಿಕ್ಷಣವಲ್ಲ. ಶಾಲೆಯ ಹೊರತಾಗಿಯೂ ಸಮಾಜದ ನಡುವೆ ಕಲಿಯುವ ಸಹಶಿಕ್ಷಣದ ಅವಶ್ಯವೂ ಇದೆ.
ಸೃಜನಶೀಲತೆ, ಕ್ರಿಯಾಶೀಲತೆ, ಮಾನವೀಯತೆ ಇವೆಲ್ಲವಿದ್ದರೆ ಒಬ್ಬ ಮನುಷ್ಯ. ಇದನ್ನು ಮಕ್ಕಳಲ್ಲಿ ಬೆಳೆಸುವುದಕ್ಕೆ ಶಿಕ್ಷಕರು ಪ್ರಯತ್ನಿಸುತ್ತಿದ್ದರೆ ಅದಕ್ಕೆ ಹೆತ್ತವರು ನೆರವಾಗಬೇಕು. ಪಕ್ಷಿಗಳಂತೆ ಸ್ವತ್ಛಂದವಾಗಿ ಆಟವಾಡುತ್ತಾ ಇರುವ ಮಕ್ಕಳಿಗೂ ಕೂಡ ಶಿಕ್ಷಣ ಅಷ್ಟೇ ಮುಖ್ಯ ಮತ್ತು ಆಕರ್ಷಕ ಎಂಬ ಅರಿವು ಮೂಡಿಸಬೇಕು. ನಿಸರ್ಗದೊಡನೆ ಈತನಕ ಇದ್ದ ಮಕ್ಕಳ ಚಿತ್ತದೊಳಗೆ ಶಾಲೆಯ ನಾಲ್ಕು ಗೋಡೆಯ ಮಧ್ಯೆ ಸಹ ವಿಭಿನ್ನ ಕಲ್ಪನೆಯನ್ನು ಮೂಡಿಸಿಕೊಳ್ಳಲು ಸಾಧ್ಯ ಎಂಬ ಚಿಂತನೆ ತುಂಬಬೇಕಾಗಿದೆ.
ಮನೆಯಂಗಳದಲ್ಲಿ ಮಲಗಿ ಬಾನನ್ನು ನೋಡಿ ನಗುತ್ತಿದ್ದ ವಿದ್ಯಾರ್ಥಿ ಬಾಹ್ಯಾಕಾಶ ಕೂಡ ಅಷ್ಟೇ ಆಕರ್ಷಕ ಎಂಬು ದನ್ನು ಯೋಚಿಸುವಂತೆ ಮಾಡಬೇಕಾಗಿದೆ. ಮೊಬೈಲ್‌ನಲ್ಲಿ ಯೋಧರಾಗುವ ಬದಲು ದೇಶರಕ್ಷಕರ ಬಗೆಗೆ ನಿಜ ಜೀವನದಲ್ಲಿ ಗೌರವ ನೀಡುವ ಕೆಲಸವಾಗಬೇಕಿದೆ. ಇವೆಲ್ಲ ಅವರಿಂದ ಮಾತ್ರ ಸಾಧ್ಯ. ಎಂಥ ಪರಿಸ್ಥಿತಿ ಬಂದರೂ ಸವಾಲುಗಳು ಎದುರಾದರೂ ಪರಿಸ್ಥಿತಿಗೆ ತಕ್ಕಂತೆ ಪರಿಹಾರ ಒದಗಿಸುವವರು ಶಿಕ್ಷಕರು. ಅವರು ಮನಸ್ಸು ಮಾಡಿದರೆ ಯಾವುದೂ ಸಮಸ್ಯೆಯಲ್ಲ. ಮನಸ್ಸು ಮಾಡಬೇಕಾಗಿದೆ ಅದೂ ಮನಸ್ಸಾರೆ. ಆಗಷ್ಟೇ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರ ಸಾಧ್ಯ.
-ಶುಭಾ ಕೆ., ಶಿಕ್ಷಕಿ (ಜಿ.ಪಿ.ಟಿ.)ಪೆರೋಡಿತ್ತಾಯಕಟ್ಟೆ, ಬೆಳ್ತಂಗಡಿ