ಮೈಸೂರು: ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಕಲಿಸು ಫೌಂಡೇಷನ್ ವತಿಯಿಂದ ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ವಿಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಿದ್ದು, ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿ ಮಕ್ಕಳ ಜೀವನದಲ್ಲಿ ಬದಲಾವಣೆ ತರುವ ಅವಶ್ಯಕತೆಯಿದೆ. ಇದರಿಂದ ದೇಶದ ಭವ್ಯ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಲಿಸು ಫೌಂಡೇಷನ್‌ನ ನಿಖೀಲೇಶ್ ಮಾತನಾಡಿ, ಇಂತಹ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಿಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ತಿಳಿಯಲು ಸಾಧ್ಯವಾಗಲಿದೆ. ಅಲ್ಲದೆ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೂ ಸೂಕ್ತ ವೇದಿಕೆಯಾಗಲಿದ್ದು, ಈ ನಿಟ್ಟಿನಲ್ಲಿ ಕಲಿಸು ಫೌಂಡೇಷನ್ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದರು.
ಬಳಿಕ ನಡೆದ ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟ ಯದುವೀರ್ ಅವರು, ಭಾರತದ ರಾಷ್ಟ್ರಪತಿ ಯಾರು? ಮಾಲ್ಗುಡಿ ಡೇಸ್ ಲೇಖಕ ಯಾರು?, ಇಸ್ರೋ ಪ್ರಧಾನ ಕಚೇರಿ ಎಲ್ಲಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದೇ ವೇಳೆ ನಡೆದ ಪ್ರತಿಭಾನ್ವೇಷಣೆಯಲ್ಲಿ ನಗರದ ವಿವಿಧ 10 ಸರ್ಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ಪ$ರ್ಧೆಯಲ್ಲಿ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಬಿ.ಎಲ್.ಭವ್ಯ, ಎನ್.ಯಶಸ್ವಿನಿ(ಪ್ರಥಮ), ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಆರ್.ಮಾನ್ಯಾ, ಎಸ್.ರಕ್ಷಿತಾ ಹಾಗೂ ಮಹಾಲಕ್ಷಿ(ದ್ವಿತೀಯ) ಹಾಗೂ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಶಶಾಂಕ್, ಶುಭಂ ಪ್ರಸಾದ್, ಚಿನ್ನಮ್ಮರ್(ತೃತೀಯ) ಸ್ಥಾನ ಪಡೆದರು.