Advertisement
ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ: ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿದೆ. ಅದರಲ್ಲೂ ಹನೂರು ತಾಲೂಕು ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಬರಪೀಡಿತ ಮತ್ತು ಹಿಂದುಳಿದ ವಿಸ್ತಾರವಾದ ತಾಲೂಕಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹನೂರು ತಾಲೂಕು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ತಾಲೂಕಾಗಿದ್ದರೂ ಶೈಕ್ಷಣಿಕವಾಗಿ ಮಾತ್ರ ಶ್ರೀಮಂತವಾದ ತಾಲೂಕಾಗಿದೆ. ಕಳೆದ 4 ವರ್ಷಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತಾಲೂಕಾಗಿದ್ದು, ರಾಜ್ಯದ 205 ತಾಲೂಕುಗಳ ಪೈಕಿ 2017-18ನೇ ಸಾಲಿನಲ್ಲಿ 8 ಸ್ಥಾನ ಮತ್ತು 2018-19ನೇ ಸಾಲಿನಲ್ಲಿ 11ನೇ ಸ್ಥಾನ ಪಡೆದಿದ್ದು ಶೈಕ್ಷಣಿಕವಾಗಿ ಪ್ರಗತಿಯ ಪಥದಲ್ಲಿರುವುದರ ಸಂಕೇತವಾಗಿದೆ.
Related Articles
Advertisement
ಸೂಕ್ತ ಬಸ್ ವ್ಯವಸ್ಥೆ ಇಲ್ಲ: ತಾಲೂಕಿನ ಹಲವು ಗ್ರಾಮಗಳಿಗೆ ಬಸ್‌ಗಳ ವ್ಯವಸ್ಥೆಯಿಲ್ಲದ ಹಿನ್ನೆಲೆ ಅರಣ್ಯದೊಳಗೆ ದ್ವಿಚಕ್ರ ವಾಹನ ಅಥವಾ ನಡೆದೇ ಸಾಗುವಂತಹ ಪರಿಸ್ಥಿತಿಯಿದೆ. ಈ ವೇಳೆ ಶಿಕ್ಷಕರು ಕಾಡುಪ್ರಾಣಿಗಳಿಂದ ಸಮಸ್ಯೆ ಎದುರಿಸಿರುವ ಉದಾಹರಣೆಗಳಿವೆ. ಈ ಹಿನ್ನೆಲೆ ಶಿಕ್ಷಕರಿಗೆ ವಸತಿ ಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಸಮರ್ಪಕ ಬಸ್‌ವ್ಯವಸ್ಥೆ ಕಲ್ಪಿಸಬೇಕು. ಇನ್ನು ಶಿಕ್ಷಕರು ಪಾಠ- ಪ್ರವಚನಗಳ ಜೊತೆ ಬಿಸಿಯೂಟ ಯೋಜನೆ ಸೇರಿದಂತೆ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿಯಿದ್ದು ಇದು ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗಲಿದೆ. ಈ ಹಿನ್ನೆಲೆ ಹೆಚ್ಚುವರಿ ಜವಾಬ್ದಾರಿಗಳಿಂದ ಶಿಕ್ಷಕರನ್ನು ಹೊರತುಡಿಸಬೇಕು. ಅಲ್ಲದೆ ಈ ಭಾಗದ ಬಹುತೇಕ ಶಿಕ್ಷಕರು ಬಿಸಿಯೂಟದ ಪರಿಕರಗಳನ್ನು ಬಸ್ ವ್ಯವಸ್ಥೆಯಿಲ್ಲದ ಹಿನ್ನೆಲೆ ಹೆಚ್ಚಿನ ಕತ್ತೆಗಳ ಮೇಲೆ ಸಾಗಿಸಬೇಕಾದ ಪರಿಸ್ಥಿತಿಯಿದೆ.
ಇದು ಶಿಕ್ಷಕರಿಗೆ ಹೊರೆಯಾಗಿದ್ದು ಹೆಚ್ಚುವರಿ ಹಣವನ್ನು ಸರ್ಕಾರ ನೀಡುತ್ತಿಲ್ಲ. ಹೀಗೆ ತಾಲೂಕಿನಲ್ಲಿ ಶಿಕ್ಷಕರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಸರ್ವಶಿಕ್ಷಣ ಅಭಿಯಾನದಡಿ ಹುದ್ದೆ ಪಡೆದಿರುವ ಶಿಕ್ಷಕರು ಅನುದಾನದ ಕೊರತೆಯಿಂದಾಗಿ ಸಮರ್ಪಕ ವೇತನ ಸಿಗದೆ 2 ತಿಂಗಳಿಗೊಮ್ಮೆ ಸಂಬಳ ಪಡೆಯುತ್ತಿದ್ದಾರೆ. ಒಟ್ಟಾರೆ ಹನೂರು ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶಿಕ್ಷಣ ಸಚಿವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಕಾದು ನೋಡಬೇಕು.
ಶಿಕ್ಷಕರ ಹಿತದೃಷ್ಟಿಯಿಂದ ಸಿಆರ್ ನಿಯಮವನ್ನು ತಿದ್ದುಪಡಿ ಮಾಡಿ ಪದವೀಧರ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು. ಎನ್‌ಪಿಎಸ್ ನೌಕರರ ಹೊಸ ಪಿಂಚಣಿ ವ್ಯವಸ್ಥೆ ರದ್ದುಮಾಡಿ ಹಳೇ ಪಿಂಚಣಿ ಪದ್ಧತಿಯನ್ನೇ ನೀಡಬೇಕು ಮತ್ತು ತಾಲೂಕಿನ 100ಕ್ಕೂ ಹೆಚ್ಚು ಶಿಕ್ಷಕರಿಗೆ ಗಿರಿಭತ್ಯೆ ದೊರಕದೆ ಅನ್ಯಾಯವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದು ಇವುಗಳ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇವೆ.-ಗುರುಸ್ವಾಮಿ, ತಾಲೂಕು ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ ಪ್ರೌಢಶಾಲೆಯ ಮುಖ್ಯ ಶಿಕ್ಷಕರಿಗೆ ವಾರ್ಷಿಕವಾಗಿ ನೀಡುವ 30 ದಿನಗಳ ಗಳಿಕೆ ರಜೆ ವ್ಯವಸ್ಥೆಯನ್ನು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಕಲ್ಪಿಸಬೇಕು. 1-8ನೇ ತರಗತಿ ಇರುವ ಶಾಲೆಗಳು ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಇರುವ ಶಾಲೆಗೆ ಮುಖ್ಯ ಶಿಕ್ಷಕರ ಜವಾಬ್ದಾರಿ ಕಡಿತಗಳಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಗೂ ಕ್ಲರ್ಕ್ ನೇಮಕ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು.
-ನಂಜುಂಡಸ್ವಾಮಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ * ವಿನೋದ್ ಎನ್.ಗೌಡ