Advertisement

ಕೋವಿಡ್ ನಿಂದ ತೊಂದರೆಯಾದಲ್ಲಿ ಪೂರಕ ಪರೀಕ್ಷೆ: ಸಚಿವ ಸುರೇಶ್‌ ಕುಮಾರ್‌

12:46 AM Jun 10, 2020 | Hari Prasad |

ಉಡುಪಿ: ಎಸೆಸೆಲ್ಸಿ ಪರೀಕ್ಷೆ ಜೂ. 25ರಿಂದ ನಡೆಯಲಿದೆ.

Advertisement

ಒಂದು ವೇಳೆ ಮೂರು ದಿನಗಳ ಮುಂಚೆ ಆ ಶಾಲಾ ಕೇಂದ್ರ ಕಂಟೈನ್‌ಮೆಂಟ್‌ ವಲಯವಾಗಿ ಘೋಷಣೆಯಾದರೆ ಪರೀಕ್ಷಾ ಕೇಂದ್ರವನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲಾಗುವುದು.

ಪರೀಕ್ಷೆ ಆರಂಭವಾದ ಬಳಿಕ ಕಂಟೈನ್‌ಮೆಂಟ್‌ ವಲಯವಾದಲ್ಲಿ ಆ ಕೇಂದ್ರದ ಮಕ್ಕಳಿಗೆ ಜುಲೈಯಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿ ಎಂದು ಪರಿಗಣಿಸಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್‌ ಹೇಳಿದರು.

ಉಡುಪಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಉಡುಪಿ, ದ.ಕ., ಉ.ಕ. ಜಿಲ್ಲೆಗಳ ಜಿ.ಪಂ. ಸಿಇಒ, ಡಿಡಿಪಿಐ, ಬಿಇಒಗಳ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪರಿಣತರ ಜತೆ ಚರ್ಚಿಸಿಯೇ ಪರೀಕ್ಷೆಯ ನಿರ್ಧಾರ ತಳೆಯಲಾಗಿದೆ. ವಿದ್ಯಾರ್ಥಿಗಳ ಸುರಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

Advertisement

ಆಗಸ್ಟ್‌ನಲ್ಲಿ ಶಾಲಾರಂಭ
ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವಾಲಯ ಶಾಲಾರಂಭಕ್ಕೆ ಮಾರ್ಗಸೂಚಿ ನೀಡಿದೆ. ಆಗಸ್ಟ್‌ನಲ್ಲಿ ಹಂತ ಹಂತವಾಗಿ ತೆರೆಯುವ ಚಿಂತನೆ ಇದೆ. ಪೋಷಕರ ಜತೆ ಚರ್ಚಿಸಿ ಅಂತಿಮ ನಿರ್ಧಾರ ತಳೆಯುತ್ತೇವೆ ಎಂದರು.

ಶಿಕ್ಷಕಿಯ ಮಗ ಶಿಕ್ಷಣ ಸಚಿವ
ನನ್ನ ತಾಯಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದ್ದರಿಂದ ಈ ಹುದ್ದೆಗೆ ಬರಲು ನನಗೆ ಅರ್ಹತೆ ಇದೆ. ನಾನು ಯಾರ ಲಾಬಿಗೂ ಮಣಿಯುವುದಿಲ್ಲ. ಸರಕಾರಿ ಶಾಲೆಗಳನ್ನು ಬಲ ಪಡಿಸುವುದೇ ನನ್ನ ಉದ್ದೇಶ. ಗುಣಮಟ್ಟದ ಶಿಕ್ಷಣ ನೀಡಿದರೆ ಕಾರ್ಮಿಕ ತನ್ನ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಾನೆ. ಆಗ ಆತನ ಶೇ. 40 ಆದಾಯ ಅವನ ಕುಟುಂಬ ನಿರ್ವಹಣೆಗೆ ಬಳಕೆಯಾಗುತ್ತದೆ ಎಂದು ನಂಬಿದ್ದೇನೆ ಎಂದು ಸಚಿವರು ಹೇಳಿದರು. ಶಾಲೆಗಳನ್ನು ಹೇಗೆ ನಡೆಸಬೇಕು, ಪರ್ಯಾಯ ವ್ಯವಸ್ಥೆಗಳೇನು ಎಂಬ ಕುರಿತು ಶಿಕ್ಷಕರ ಜತೆ ಚರ್ಚೆ ನಡೆಸಲು ಸಭೆ ಕರೆದಿದ್ದೆ. ಇದನ್ನು ಜೂ. 20ಕ್ಕೆ ಮುಂದೂಡಲಾಗಿದೆ ಎಂದರು.

ಕೋವಿಡ್ ಸಮುದಾಯಕ್ಕೆ ಹರಡಿಲ್ಲ ಕೋವಿಡ್ ಸೋಂಕು ಸಮುದಾಯಕ್ಕೆ ಹರಡಿಲ್ಲ. ನಾನು ಪ್ರತಿನಿತ್ಯ ಇದನ್ನು ಫಾಲೋ ಮಾಡುತ್ತಿದ್ದೇನೆ. ಒಟ್ಟು ಪ್ರಕರಣಗಳಲ್ಲಿ ಶೇ. 75 ಹೊರರಾಜ್ಯ ಮತ್ತು ಹೊರ ದೇಶಗಳಿಂದ ಬಂದವರು, ಅವರ ಸಂಪರ್ಕಿತರಿಂದ ಹರಡುತ್ತಿದೆ. ಸೋಮವಾರ 3,175 ಸಕ್ರಿಯ ಪ್ರಕರಣಗಳಲ್ಲಿ 14 ಜನರಿಗೆ ಮಾತ್ರ ಐಸಿಯು ಚಿಕಿತ್ಸೆ ಬೇಕಾಗಿತ್ತು. ಯಾರಿಗೂ ವೆಂಟಿಲೇಟರ್‌ ಅಗತ್ಯ ಬೀಳಲಿಲ್ಲ ಎಂದು ಸಚಿವರು ಬೆಟ್ಟು ಮಾಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒಗಳಾದ ಉಡುಪಿಯ ಪ್ರೀತಿ ಗೆಹಲೋತ್‌, ಉ.ಕ. ಜಿಲ್ಲೆಯ ರೋಶನ್‌, ದ.ಕ. ಜಿಲ್ಲೆಯ ಸೆಲ್ವಮಣಿ, ಡಿಡಿಪಿಐಗಳಾದ ಉಡುಪಿಯ ಶೇಷಶಯನ ಕಾರಿಂಜ, ದ.ಕ. ಜಿಲ್ಲೆಯ ಮಲ್ಲೇಸ್ವಾಮಿ, ಉ.ಕ. ಜಿಲ್ಲೆಯ ಉಮೇಶ್‌ ಉಪಸ್ಥಿತರಿದ್ದರು.

ಶಿಕ್ಷಕರಿಗೆ ಶಹಬ್ಟಾಸ್‌ಗಿರಿ!


ಲಾಕ್‌ಡೌನ್‌ ಅವಧಿಯಲ್ಲಿ ಕುಂದಾಪುರದ ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಬಾಬು ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ ವಿಧಾನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರ ಗಮನ ಸೆಳೆದಿದೆ.
ಎಸೆಸೆಲ್ಸಿ ಪರೀಕ್ಷಾ ಸಿದ್ಧತಾ ಸಭೆಯಲ್ಲಿ ಸಚಿವರು, ತಮ್ಮ ವ್ಯಾಪ್ತಿಯಲ್ಲಿರುವ ಯಶೋಗಾಥೆಗಳಿದ್ದರೆ ತಿಳಿಸಿ ಎಂದಾಗ ಕುಂದಾಪುರ ವಲಯದ ಬಿಇಒ ಅಶೋಕ್‌ ಕಾಮತ್‌ ಅವರು ಬಾಬು ಶೆಟ್ಟಿಯವರ ಕುರಿತು, ದ.ಕ. ಡಿಡಿಪಿಐ ಮಲ್ಲೇಸ್ವಾಮಿ ಅವರು ಉಜಿರೆಯ ಎಸ್‌ಡಿಎಂ ಅನುದಾನಿತ ಪ್ರೌಢ ಶಾಲೆಯ ಗಣಿತ ಶಿಕ್ಷಕ ಸದಾಶಿವ ಪೂಜಾರಿ ಅವರ ಬಗೆಗೆ ತಿಳಿಸಿದರು.

‘ಕಡುಬಡವ ವಿದ್ಯಾರ್ಥಿಗಳ ಮನೆಗೂ ಹೋಗಿ ಈ ಕಾಯಕ ಮಾಡುತ್ತಿರುವ ಪುಣ್ಯಾತ್ಮನಿಗೆ ಫೋನ್‌ ಮಾಡಿ ಅಭಿನಂದಿಸಿದೆ. ಇಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿರುವವರು’ ಎಂದು ಸಚಿವರು ಫೇಸ್‌ಬುಕ್‌ನಲ್ಲಿ ಅಭಿ ಪ್ರಾಯ ಹಂಚಿಕೊಂಡಿದ್ದಾರೆ.

ಆ ಗ್ರಾಮೀಣ ಶಾಲೆಯಲ್ಲಿ 43 ವಿದ್ಯಾರ್ಥಿಗಳಿದ್ದು ಬಾಬು ಶೆಟ್ಟರು ಮಕ್ಕಳ ಮನೆಗೇ ತೆರಳಿ ಸಂಶಯಗಳನ್ನು ಪರಿಹರಿಸಿದ್ದರು. ಕೆಲವು ಮನೆಗಳಿಗೆ ಮೂರ್‍ನಾಲ್ಕು ಬಾರಿ ಹೋಗಿ ಪಾಠ ಮಾಡಿದ್ದರು. ಅವರು 23 ವರ್ಷಗಳಿಂದ ಗಣಿತ ಶಿಕ್ಷಕರಾಗಿದ್ದು, ಈ ಎಲ್ಲ ವರ್ಷಗಳಲ್ಲಿ ಅವರ ವಿದ್ಯಾರ್ಥಿಗಳು ಗಣಿತದಲ್ಲಿ ಶೇ. 100 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಅವರ ಹೆಚ್ಚುಗಾರಿಕೆ.


ಉಜಿರೆ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಸದಾಶಿವ ಪೂಜಾರಿ ಅವರು ಲಾಕ್‌ಡೌನ್‌ ಅವಧಿಯಲ್ಲಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಮಕ್ಕಳಿಗೆ ಪಾಠ ಮಾಡಿ ಅದರ ತುಣುಕುಗಳನ್ನು ಉಳಿದ ಮಕ್ಕಳ ವಾಟ್ಸ್‌ಆ್ಯಪ್‌ಗೂ ಕಳುಹಿಸಿದ್ದರು. ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

ಮುಖ್ಯಾಂಶಗಳು
– ಶಾಲಾವಧಿ ಕಡಿತ, ಸಿಲೆಬಸ್‌ ಕಡಿಮೆ ಸಾಧ್ಯತೆ.

– ಶಿಕ್ಷಣಕ್ಕೆಂದೇ ಪ್ರತ್ಯೇಕ ಟಿವಿ ಚಾನೆಲ್‌ ಆರಂಭಿಸುವ ಚಿಂತನೆ.

– ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಇಲ್ಲ.

– ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರಲು ಅಭಿಯಾನ.

– ವಿವಿಧ ತಾಲೂಕುಗಳಿಂದ ಖಾಸಗಿ ಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ ಹಾಸ್ಟೆಲ್‌ ವ್ಯವಸ್ಥೆ.

– ಎ. 29ರಿಂದ ಚಂದನ ವಾಹಿನಿಯಲ್ಲಿ ಬಿತ್ತರಗೊಂಡ ‘ಪುನರ್‌ ಮನನ’ ಕಾರ್ಯಕ್ರಮ ಜೂ. 12ರಿಂದ 20ರ ವರೆಗೆ ಮರುಪ್ರಸಾರ.

ಶುಲ್ಕ ವಸೂಲಿಗೆ ಆನ್‌ಲೈನ್‌ ತರಗತಿ ಮಾರ್ಗವಾಗದಿರಲಿ
ಎಲ್‌ಕೆಜಿಯಿಂದ ಪ್ರಾಥಮಿಕ ತರಗತಿ ವರೆಗೆ ಆನ್‌ಲೈನ್‌ ತರಗತಿ ಸೂಕ್ತ ವಲ್ಲ ಎಂಬ ಅಭಿಪ್ರಾಯವಿದೆ. ಆನ್‌ಲೈನ್‌ ಶಿಕ್ಷಣ ಕುರಿತು ಸೋಮವಾರ ತಜ್ಞರ ಸಭೆ ನಡೆದಿದೆ. ಇದು ಅಪೂರ್ಣಗೊಂಡಿದ್ದು ಬುಧವಾರ ಮತ್ತೆ ನಡೆಯಲಿದೆ. ಶುಲ್ಕ ವಸೂಲಿಗಾಗಿ ಆನ್‌ಲೈನ್‌ ತರಗತಿ ಇನ್ನೊಂದು ಮಾರ್ಗ ಆಗದಿರಲಿ ಎಂದು ಸಚಿವ ಸುರೇಶ್‌ ಕುಮಾರ್‌ ಅವರು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next