ಬೆಂಗಳೂರು: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಸಹಾಯ ನೀಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಶಿಕ್ಷಕರ ಸದನದಲ್ಲಿ ಶುಕ್ರವಾರ ಇಲಾಖೆಯ ಸಹಾಯವಾಣಿ- ಶಿಕ್ಷಣ ವಾಣಿ ಮತ್ತು ಶಿಕ್ಷಣ ಸಚಿವರ ಡ್ಯಾಷ್‌ಬೋರ್ಡ್-ಪರಿವರ್ತನ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅನುದಾನ ರಹಿತ ಶಾಲೆಗಳ ಹಲವು ಶಿಕ್ಷಕರು ತರಕಾರಿ ಮಾರಾಟ, ನರೇಗಾದಂತಹ ಕೆಲಸಗಳಿಗೆ ಹೋಗುವಂತಾದ ಸ್ಥಿತಿ ಕಂಡು ನಿಜಕ್ಕೂ ಬೇಸರವಾಗಿದೆ ಎಂದರು.
ಸಂಕಷ್ಟದಲ್ಲಿರುವ ಶಿಕ್ಷಕರ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಕುರಿತು ಚಿಂತನೆ ನಡೆಯುತ್ತಿದೆ ಎಂದರು.
ಶಾಲಾರಂಭಕ್ಕೆ ಆತುರವಿಲ್ಲ
ಶಾಲೆಗಳ ಆರಂಭದ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ. ಈ ಮಾಸಾಂತ್ಯದ ವೇಳೆಗೆ ಒಂದು ಸ್ಪಷ್ಟ ರೂಪ ಸಿಗಬಹುದು. ಅಲ್ಲಿಯವರೆಗೆ ಶಾಲೆಗಳನ್ನು ಆರಂಭಿಸಲು ಆತುರಪಡುವುದಿಲ್ಲ ಎಂದು ತಿಳಿಸಿದರು. ಶಿಕ್ಷಕರ ಸಮಸ್ಯೆ ಆಲಿಸಲು ‘ಶಿಕ್ಷಣ ವಾಣಿ’ ಎಂಬ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಅಲ್ಲದೇ ವಾಟ್ಸಪ್ ಸೌಲಭ್ಯ, ಪ್ರತ್ಯೇಕ ಫ್ರೀ-ಟೋಲ್ ಸಂಖ್ಯೆಯ ಲಭ್ಯತೆ ಮತ್ತು ಮಾಹಿತಿಗಳು ಅರ್ಜಿದಾರರ ಮೊಬೈಲ್‌ಗೆ ಲಭ್ಯವಾಗಲಿವೆ. ಇದರ ವ್ಯವಸ್ಥಿತ ನಿರ್ವಹಣೆಯನ್ನು ನಾನೇ ಖುದ್ದಾಗಿ ನಿರಂತರವಾಗಿ ಪರಾಮರ್ಶಿಸಲಿದ್ದೇನೆ ಎಂದು ಹೇಳಿದರು.