Advertisement
ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಂಘದ ಪದಾಧಿಕಾರಿಗಳೊಂದಿಗೆ ಗುರುವಾರ ಸಮಗ್ರ ಶಿಕ್ಷಣ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪಿಯು ಇಲಾಖೆಯಲ್ಲಿ ಸೇವಾ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಸಂಘಟನೆಗಳು ಸಚಿವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಇಲಾಖೆಯ ಸೇವೆಗಳು ಕ್ಷಿಪ್ರಗತಿಯಲ್ಲಿ ದೊರೆಯುವಂತಾಗಲು ಇಲಾಖೆಯ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗುತ್ತಿದೆ ಎಂದರು.
Related Articles
Advertisement
ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚೆ:
2007 ರಿಂದೀಚೆಗೆ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗೆ ಬಿ.ಇಡಿ., ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಹಾಲಿ ಸೇವೆಯಲ್ಲಿರುವ ಉಪನ್ಯಾಸಕರು ಬಿ.ಇಡಿ., ಪಡೆಯಬೇಕಿದ್ದು, ಅದರಲ್ಲಿ 2357 ಮಂದಿ ಅನುದಾನಿತ ಕಾಲೇಜುಗಳ ಉಪನ್ಯಾಸಕರು ಬಿ.ಇಡಿ., ಪಡೆಯುವುದು ಬಾಕಿಯಿರುವ ಹಿನ್ನೆಲೆಯಲ್ಲಿ ಈ ಎಲ್ಲ ಉಪನ್ಯಾಸಕರು ಏಕ ಕಾಲದಲ್ಲಿ ಬಿ.ಇಡಿ., ಪಡೆಯಲು ಅನುವಾಗುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಒಂದು ಬಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳೊಂದಿಗೆ ಚರ್ಚಿಸಿದ್ದೇನೆ ಮತ್ತು ಉನ್ನತ ಶಿಕ್ಷಣ ಸಚಿವರೊಂದಿಗೆ ಈ ಸಂಬಂಧದಲ್ಲಿ ಚರ್ಚಿಸಲಾಗುವುದು ಎಂದರು.
ಕುಮಾರನಾಯ್ಕ ಸಮಿತಿ ಶಿಫಾರಸ್ಸಿನಂತೆ ಉನ್ನತ ಪದವಿ ಹೊಂದಿದ ಉಪನ್ಯಾಸಕರಿಗೆ ಬಡ್ತಿ ಸೇರಿದಂತೆ ವೇತನ ಬಡ್ತಿ ನೀಡಿಕೆ ಕುರಿತು ನಿರ್ಧಾರ ಕೈಗೊಳ್ಳಲು ಅಧಿಕಾರಿಗಳಿಗೆ ಕಡತ ಮಂಡಿಸುವಂತೆ ಸೂಚನೆ ನೀಡಿದ ಸಚಿವರು, ಪದವಿ ಕಾಲೇಜುಗಳಿಗೆ ಬಡ್ತಿ ನೀಡುವ ಕುರಿತಂತೆ ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?
ಬಿ.ಇಡಿ., ವಿನಾಯ್ತಿ:
ವೃತ್ತಿಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಪಿಯು ಉಪನ್ಯಾಸಕರು ಈಗಾಗಲೇ ನಿವೃತ್ತಿಗೆ ಸಮೀಪದಲ್ಲಿರುವುದು ಮತ್ತು ಅವರ ಅತಿ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅವರುಗಳಿಗೆ ಬಿ.ಇಡಿ., ಪದವಿ ಪಡೆಯುವುದರಿಂದ ವಿನಾಯ್ತಿ ನೀಡಲು ಮತ್ತು ಖಾಯಂ ಪೂರ್ವ ಸೇವಾ ಅವಧಿ ಘೋಷಣೆ ಮಾಡಲು ಇಲಾಖೆಯಲ್ಲಿ ಅನುಕೂಲಕರವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೇವಲ 7 ವರ್ಷಕ್ಕಿಂತ ಕಡಿಮೆ ಸೇವೆ ಇರುವ ಜೆಒಸಿ ವಿಲೀನ ಉಪನ್ಯಾಸಕರಿಗೆ ಬಿ.ಇಡಿ., ವಿನಾಯ್ತಿ ನೀಡಲು ಪರಿಶೀಲಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಮೌಲ್ಯಮಾಪನ ಸಹಕಾರಕ್ಕೆ ಮನವಿ:
ಕೋವಿಡ್ ಸಾಂಕ್ರಾಮಿಕ ರೋಗದ ಪ್ರಸರಣದ ಹಿನ್ನೆಲೆಯಲ್ಲಿ ಈಗಾಗಲೇ ಪದವಿ ಪೂರ್ವ ಕಾಲೇಜುಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಯತ್ತ ಮುಖ ಮಾಡಿದ್ದು ಅಧ್ಯಯನದಲ್ಲಿ ತೊಡಗಿದ್ದಾರೆ. ನಿಗದಿತ ಅವಧಿಯಲ್ಲಿ ಪರೀಕ್ಷೆ ಆರಂಭವಾಗಲಿದ್ದು, ಈ ವಿಷಮ ಕಾಲಘಟ್ಟದಲ್ಲಿ ಉಪನ್ಯಾಸಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವಿಷಯದಲ್ಲಿ ಹೆಚ್ಚಿನ ಸಹಕಾರ ನೀಡಬೇಕೆಂದು ಕೋರಿದರು. ಇಂತಹ ಕಾಲಘಟ್ಟದಲ್ಲಿ ನಾವು ನಮ್ಮ ಮಕ್ಕಳಲ್ಲಿ ವಿಶ್ವಾಸ ಮೂಡಿಸಬೇಕಾಗಿರುವುದರಿಂದ ಮೌಲ್ಯಮಾಪನ ಬಹಿಷ್ಕಾರ ಸೇರಿದಂತೆ ಯಾವುದೇ ಪ್ರತಿಭಟನೆಗಳಿಗೆ ಮುಂದಾಗಬಾರದೆಂದೂ ಸಚಿವರು ಮನವಿ ಮಾಡಿದರು.