Advertisement

ಸಚಿವ ಸ್ಥಾನಕ್ಕೆ ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ

06:35 PM Oct 11, 2018 | Karthik A |

ಬೆಂಗಳೂರು: ಕಾಂಗ್ರೆಸ್ – ಜೆ.ಡಿ.ಎಸ್. ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾಗಿದ್ದ ಬಿ.ಎಸ್.ಪಿ.ಯ ಎನ್. ಮಹೇಶ್ ಅವರು ಇಂದು ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಜೆ.ಡಿ.ಎಸ್. ಮಿತ್ರಪಕ್ಷವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮಾಯಾವತಿ ನೇತೃತ್ವದ ಬಿ.ಎಸ್.ಪಿ.ಯಿಂದ ಸ್ಪರ್ಧಿಸಿದ್ದ ಎನ್. ಮಹೆಶ್ ಅವರು ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಇವರ ಪಕ್ಷವು ಕರ್ನಾಟಕದಲ್ಲಿ ತನ್ನ ಖಾತೆಯನ್ನು ತೆರೆದಿತ್ತು. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಲ್ಲಿಸಿರುವ ಮಹೇಶ್ ಅವರು ಇನ್ನು ಮುಂದೆ ಪಕ್ಷ ಸಂಘಟನೆಯ ಕಡೆಗೆ ಹೆಚ್ಚಿನ ಗಮನಹರಿಸುವುದಾಗಿ ಹೇಳಿಕೊಂಡಿದ್ದಾರೆ, ಮಾತ್ರವಲ್ಲದೇ ಜೆ.ಡಿ.ಎಸ್. ಪಕ್ಷಕ್ಕೆ ತಮ್ಮ ಬೆಂಬಲ ಮುಂದುವರಿಯುತ್ತದೆ ಹಾಗೂ ಮುಂಬರುವ ಉಪಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರವನ್ನೂ ಸಹ ಮಾಡುತ್ತೇನೆ ಎಂದು ಮಹೇಶ್ ಅವರು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕರ್ನಾಟಕ ರಾಜ್ಯ ಬಿ.ಎಸ್.ಪಿ.ಯ ಅಧ್ಯಕ್ಷರಾಗಿದ್ದ ಎನ್. ಮಹೇಶ್ ಅವರು ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿಯವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಹುಜನ ಸಮಾಜವಾದಿ ಪಕ್ಷ ಕರ್ನಾಟಕದಲ್ಲಿ ತನ್ನ ಖಾತೆಯನ್ನು ತೆರದಿತ್ತು. ಚುನಾವಣೆಯ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಬಿ.ಜೆ.ಪಿ.ಯನ್ನು ಅಧಿಕಾರದಿಂದ ದೂರವಿರಿಸುವ ಸಲುವಾಗಿ ಕಾಂಗ್ರೆಸ್ – ಜೆ.ಡಿ.ಎಸ್. ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದ ಸಂದರ್ಭದಲ್ಲಿ ಜೆ.ಡಿ.ಎಸ್. ಮಿತ್ರಪಕ್ಷವಾಗಿದ್ದ ಬಿ.ಎಸ್.ಪಿ.ಗೆ ಸಹಜವಾಗಿಯೇ ಒಂದು ಸಚಿವ ಸ್ಥಾನ ಒಲಿದು ಬಂದಿತ್ತು. ಇದರಂತೆ ಆ ಪಕ್ಷದ ಏಕೈಕ ಶಾಸಕರಾಗಿದ್ದ ಎನ್. ಮಹೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸದ್ದರು ಮತ್ತು ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯಂತಹ ಮಹತ್ವದ ಹುದ್ದೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಪಡೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next