Advertisement

ಕೂಡಿ ಕಲಿತದ್ದು ಕಡೆಯವರೆಗೆ..

11:23 PM Apr 08, 2021 | Team Udayavani |

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಕಾಲೇಜುಗಳದ್ದು ಮಹತ್ವದ ಪಾತ್ರ. ಆದರೂ ತರಗತಿಯ ಪಾಠದಲ್ಲಿ ಒಂದಷ್ಟು ಸಂಗತಿಗಳು ಮಕ್ಕಳ ಗ್ರಹಿಕೆಗೆ ನಿಲುಕದೇ ಹೋಗಬಹುದು. ಮಕ್ಕಳಲ್ಲಿನ ವೈಯಕ್ತಿಕ ಭಿನ್ನತೆ ಮುಖ್ಯವಾಗಿ ಅವರ ಆಸಕ್ತಿ-ಕುತೂಹಲ, ಮನಸಿಕ ಸಿದ್ಧತೆ, ಆರೋಗ್ಯ ಇವೆಲ್ಲ ಕಲಿಕೆಯಲ್ಲಿ ಪ್ರಭಾವ ಬೀರುವ ಅಂಶಗಳು. ಕೆಲವು ವಿದ್ಯಾ ರ್ಥಿಗಳು ಶಿಕ್ಷಕರು ನೀಡುವ ಒಂದೇ ವಿವರಣೆಯಲ್ಲಿ ಅರ್ಥೈಸಿಕೊಂಡರೆ, ಕೆಲವರಿಗೆ ಎರಡು-ಮೂರು ಬಾರಿಯ ಪುನರಾವರ್ತನೆ ಬೇಕು. ಮತ್ತೆ ಕೆಲವರಿಗೆ ಬರೆದು ಕಲಿತ ಮೇಲೆಯೇ ಪರಿಕಲ್ಪನೆ ಸ್ಪಷ್ಟಗೊಳ್ಳುತ್ತದೆ. ಮತ್ತೆ ಕೆಲವರಿಗಂತೂ ಅರ್ಥವಾಗದೇ ಉಳಿದ ಅರ್ಧಂಬರ್ಧ ಭಾಗವು ಪೂರ್ಣಗೊಳ್ಳುವುದು ಮನೆಯ ಓದಿನಲ್ಲಿ ಮಾತ್ರ. ಹಾಗಾಗಿ ಅಂದಿನ ಪಾಠ ವನ್ನು ಅಂದೇ ಮನನ ಮಾಡಿಕೊಂಡಲ್ಲಿ ಕಲಿಕಾಂಶಗಳು ಮಸ್ತಿಷ್ಕದಲ್ಲಿ ದೃಢವಾಗಿ ದಾಖಲಾಗುತ್ತದೆ.

Advertisement

ಯಾವಾಗಲೂ ಮಕ್ಕಳಿಗೆ ಪಾಠದಲ್ಲಿನ ಅರ್ಥವಾಗದ ಮತ್ತು ಅಸ್ಪಷ್ಟ ಸಂಗತಿಗಳು ಕಲಿಕೆಯಿಂದ ದೂರವೇ ಉಳಿದುಬಿಡುತ್ತವೆ. ಅರ್ಥವಾಗದ ಸಂಗತಿಗಳನ್ನು ಯಾರಿಂದಲೂ ಶಾಶ್ವತ ಹಿಡಿದಿಡುವುದು ಸಾಧ್ಯವಿಲ್ಲ. ಆಗೆಲ್ಲಾ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಸಂಪರ್ಕಿಸಿ, ಚರ್ಚಿಸಿ ಅರ್ಥವಾಗದ ವಿವರಣೆ, ಕಲಿಕಾ ಹಂತ, ಪರಿಕಲ್ಪನೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಶಿಕ್ಷಕರನ್ನು ಪದೇಪದೆ ಭೇಟಿಮಾಡಲು ವಿದ್ಯಾರ್ಥಿಗಳು ಹಿಂಜರಿಯುವುದಿದೆ. ಅಂತಹ ಸಂದರ್ಭದಲ್ಲಿ ವಿಷಯವನ್ನು ಅರ್ಥೈಸಿಕೊಳ್ಳಲು ತೋರುವ ಅತ್ಯುತ್ತಮ ಮಾದರಿಯೆಂದರೆ ಗುಂಪು ಅಧ್ಯಯನ.

ಗುಂಪು ಮುಖ್ಯವಾಗಿ ವಿವಿಧ ಹಂತದ ಕಲಿಕಾ ಸಾಮರ್ಥ್ಯವುಳ್ಳ ಮಕ್ಕಳನ್ನು ಒಳ ಗೊಂಡಿರಬೇಕು. ಒಂದು ಉದ್ದೇಶ ಸಾಧನೆಗಾಗಿ ತುಡಿಯುವ ಮನಸ್ಸುಳ್ಳವರು ಅಲ್ಲಿರಬೇಕು. ಯಾವುದೇ ಹೆಚ್ಚುಗಾರಿಕೆಗೆ ಅವಕಾಶವಿಲ್ಲದಂತೆ ಸಮಾನ ಅವಕಾಶ, ಹೊಣೆಗಾರಿಕೆಯ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಯ ತಂಡವನ್ನು ರಚಿಸಬೇಕು. ಒಬ್ಬ ಗುಂಪಿನ ನಾಯಕನಾದರೂ ಸಾಮೂ ಹಿಕ ಜವಾಬ್ದಾರಿ ಅಪೇಕ್ಷಣೀಯ. ಗುಂಪು ಅಧ್ಯಯನ ಮತ್ತು ಗುಂಪು ಚರ್ಚೆಗಳು ಕೇವಲ ಶಾಲಾಹಂತಕ್ಕೆ ಸೀಮಿತವಲ್ಲ. ವೃತ್ತಿಶಿಕ್ಷಣ  ಮತ್ತು ತರಬೇತಿ ಶಾಖೆಗಳಲ್ಲಿಯೂ ನಿಗದಿತ ಸಮಸ್ಯೆ, ಸವಾಲು, ಸಂಕಷ್ಟಗಳಿಗೊಂದು ಪರಿಹಾರವನ್ನು ಗುಂಪು ಚರ್ಚೆಯಲ್ಲಿ ಕಂಡುಕೊಳ್ಳ ಬಹುದು. ವಿಸ್ತೃತ ಸಮಾ ಲೋಚನೆ ಮತ್ತು ಚರ್ಚೆಗಳ ತರುವಾಯ ಒಮ್ಮತದ ಅಭಿಪ್ರಾಯಕ್ಕೆ ಬರುವುದು ಹೆಚ್ಚು ಫ‌ಲದಾಯಕ.

ಗುಂಪು ಅಧ್ಯಯನವು ಸಂಪೂರ್ಣ ಶಿಶುಕೇಂದ್ರಿತ. ಅಲ್ಲೊಂದು ಅವ್ಯಕ್ತ ಸ್ವಾತಂತ್ರ್ಯವಿರುತ್ತದೆ. ಆತ್ಮೀಯ ಪರಿಸರದಲ್ಲಿ ಹಿತಕರ ಕಲಿಕಾನುಭವ ಸುಲಭ ಸಾಧ್ಯ ವಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದರೊಟ್ಟಿಗೆ ಕಲಿಕೆಯಲ್ಲಿ ಸಹಸದಸ್ಯರ ಶಕ್ತಿ-ದೌರ್ಬಲ್ಯಗಳ ಅರಿವು ದಕ್ಕುವುದಲ್ಲದೆ ತತ್‌ಕ್ಷಣದ ಫ‌ಲಿ ತಾಂಶ ಸಾಧ್ಯವಾಗುತ್ತದೆ. ಆಲಿಸುವ, ಆಲೋ ಚಿಸುವ, ಚಿಂತಿಸುವ ಸಾಮರ್ಥ್ಯ ವೃದ್ಧಿಸುತ್ತದೆ. ಸಂವಹನ ಕೌಶಲಗಳು ಬೆಳೆಯುತ್ತವೆ. ಗುಂಪಿನಲ್ಲಿ ಹಿಂಜರಿಕೆ, ಅಂಜಿಕೆ, ಅಳುಕುಗಳು ದೂರವಾಗಿ ಒತ್ತಡರಹಿತ ಸ್ಥಿತಿಯಲ್ಲಿ ಕಲಿಯುವುದು ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿ, ಯೋಜನೆಗಳೊಂದಿಗೆ ರೂಪುಗೊಂಡ ಗುಂಪುಗಳಲ್ಲಿ ನಿತ್ಯದ ಪಾಠದಲ್ಲಿನ ಬಹುತೇಕ ಗೊಂದಲಗಳು ಬಗೆಹರಿಯುತ್ತವೆ. ಎಲ್ಲರೊಟ್ಟಿಗಿನ ಚರ್ಚೆಯಲ್ಲಿ ಪಠ್ಯವಸ್ತುವಿಗೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ಗೊತ್ತಿರುವ ಅಂಶಗಳನ್ನು ಚರ್ಚಿಸುತ್ತಾ ಅರ್ಥೈಸಿಕೊಳ್ಳುವ ಸುಲಭ ಮಾರ್ಗವನ್ನು ವಿನಿಮಯ ಮಾಡುತ್ತಾ, ಸ್ವತಃ ತಾವೂ ಸ್ಪಷ್ಟಗೊಳ್ಳುತ್ತಾ ಬೇರೆಯವರಿಗೂ ತಮ್ಮ ಅರಿವನ್ನು ಸುಲಭವಾಗಿ ದಾಟಿಸುತ್ತಾರೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ತಮ್ಮ ಇತಿಮಿತಿಗಳನ್ನು ಬಲ್ಲ ಆಪ್ತ ಸಹಪಾಠಿಗಳಿಂದ ಹೇಳಿಸಿಕೊಂಡು ಕಲಿಯು ವುದು ಬಲುಸುಲಭ ಮತ್ತು ಅದು ಹೆಚ್ಚು ಪರಿಣಾಮಕಾರಿ. ಹೇಳಿಕೊಡುವ ವಿದ್ಯಾ ರ್ಥಿಗೂ ಪರಿಕಲ್ಪನೆಗಳ ಗ್ರಹಿಕೆ, ಸ್ಮರಣೆ ಮತ್ತು ಅಭಿವ್ಯಕ್ತಿಯಲ್ಲಿ ಗಮನಾರ್ಹ ಉನ್ನತಿ ಸಾಧ್ಯವಾಗುತ್ತದೆ. ಗುಂಪು ರಚಿಸುವ ಮೊದಲು ಈ ಅಂಶಗಳನ್ನು ಸದಸ್ಯರಲ್ಲಿ ಮನವರಿಕೆ ಮಾಡಿದಲ್ಲಿ ಮಾತ್ರ ಗುಂಪಿನ ಸದುದ್ದೇಶಗಳು ಈಡೇರುತ್ತವೆ. “ನೀನು ಹೊಳೆದರೆ ನಾನು ಹೊಳೆವೆನು, ನೀನು ಬೆಳೆದರೆ ನಾನು ಬೆಳೆವೆನು’ ಎಂಬ ಕುವೆಂಪು ಆಶಯಕ್ಕೆ ಅರ್ಥ ಮೂಡುತ್ತದೆ.

ಹಾಗಿದ್ದೂ ಗುಂಪಿನ ಕಾರ್ಯವೈಖರಿಯ ಬಗ್ಗೆ ಸದಾ ಜಾಗರೂಕರಾಗಿರಬೇಕು. ಸದಸ್ಯರಲ್ಲಿ ಸ್ಪಷ್ಟ ಗುರಿ, ಬದ್ಧತೆ ಮತ್ತು ಕ್ರಿಯಾಶೀಲತೆ ಇರದಿದ್ದಲ್ಲಿ ಗುಂಪಿನ ಚಟುವಟಿಕೆಗಳು ಅನರ್ಥವಾಗುವುದು ಮಾತ್ರವಲ್ಲ ಗುಂಪು ರಚನೆಯ ಉದ್ದೇಶವೇ ಈಡೇರದೆ ಕೇವಲ ಗದ್ದಲ, ಕಾಲಹರಣಕ್ಕೆ ಸೀಮಿತಗೊಳ್ಳುವ ಅಪಾಯವಿದೆ. ಶಿವರಾಮ ಕಾರಂತರು ಹೇಳಿದಂತೆ ‘ಮನಸು ಅರಳುವುದು ಏಕಾಂತದಲ್ಲಿಯೇ ಹೊರತು ಸಂತೆಯಲ್ಲಲ್ಲ..’ ಹಾಗೆಯೇ ಅರಳಿದ ಮನಸಿನ ಅನಾವರಣವು ಸಮಾನ ಆಸಕ್ತರ ಗುಂಪಿನಲ್ಲಿ ನೆರವೇರುತ್ತದೆ. ಹೌದು, ಒಗ್ಗಟ್ಟಿನಲ್ಲಿ ಒಲವಿದೆ, ಬಲವಿದೆ. ಜಯಿಸುವ ಛಲವೊಂದು ಇರಬೇಕಷ್ಟೇ.

Advertisement

 

-ಸತೀಶ್‌.ಜಿ.ಕೆ., ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next