Advertisement

Arun Shahapur ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ

09:04 PM May 14, 2024 | Team Udayavani |

ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಇಷ್ಟು ಕೆಟ್ಟದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ ಉದಾಹರಣೆಯೇ ಇಲ್ಲ. ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ ಸೃಷ್ಟಿಯಾಗಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ ನರಳಿದ ವಿದ್ಯಾರ್ಥಿಗಳು, ನೊಂದ ಪಾಲಕರಿಗೆ ನ್ಯಾಯ ನೀಡಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ್‌ ಒತ್ತಾಯಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 9 ಲಕ್ಷ ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕೆಎಸ್‌ಇಎಬಿ ಮೂಲಕ ನಡೆಸಿದ್ದು ಪರೀಕ್ಷೆಯಲ್ಲ, ಪ್ರಹಸನ. ಬಿಇಒ, ಡಿಡಿಪಿಐ, ಆಯುಕ್ತರ ಮೂಲಕ ಒತ್ತಡದ ಮೂಲಕ ಶಿಕ್ಷಕರ ದಮನ ಮಾಡಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್‌ ಮಾಡಿದರು. ಕ್ಯಾಮರಾ ಅಳವಡಿಸಿ ಪರೀಕ್ಷೆ ಬರೆಯಲು ತಿಳಿಸಿದ್ದರಿಂದ ಮಕ್ಕಳು ಗೊಂದಲ, ಗಲಿಬಿಲಿಗೆ ಒಳಗಾದರು. ಹೀಗಾಗಿ ಫಲಿತಾಂಶ ಕುಸಿಯಲಿದೆ ಎಂದು ತಿಳಿದು, 20 ಕೃಪಾಂಕಗಳನ್ನು ನೀಡಿ ಯಶಸ್ಸು ಸಾಧಿಸಿದ್ದೇವೆಂದು ಬಿಂಬಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಶಿಕ್ಷಣ ತಜ್ಞರು, ಶಿಕ್ಷಕರು, ಡಯಟ್‌ ಮತ್ತು ಇಲಾಖೆಯನ್ನು ಕತ್ತಲಲ್ಲಿಟ್ಟು ಕೆಎಸ್‌ಇಎಬಿ ಸ್ಥಾಪಿಸಿದ್ದು ಉತ್ತೀರ್ಣ ಅಂಕವನ್ನು 35 ರಿಂದ 25ಕ್ಕೆ ಇಳಿಸಿದರು. ಇನ್ನೆರಡು ಪರೀಕ್ಷೆಗಳಿರುವಾಗ ಕೃಪಾಂಕ ನೀಡಿ ಪಾಸು ಮಾಡಿದ್ದೇಕೆ ? ಎಂದು ಅರ್ಥವಾಗುತ್ತಿಲ್ಲ. ಈ ದುರವಸ್ಥೆ ಬಗ್ಗೆ ಉನ್ನತ ತನಿಖೆ ನಡೆಸಿ, ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹತ್ತನೇ ತರಗತಿ ಪರೀಕ್ಷೆ ಒಂದಕ್ಕೆ 410 ರೂ., ಎರಡಕ್ಕೆ 510 ರೂ., ಮೂರಕ್ಕೆ 710 ರೂ. ಶುಲ್ಕ ವಸೂಲಿ ಮಾಡಿದ್ದಾರೆ. ಪರೀಕ್ಷೆ ಎಂದರೆ ಸರ್ಕಾರಕ್ಕೆ ಒಂದು ಉದ್ಯಮವೆ ? ಪರೀûಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆಗೆ ದಿಢೀರ್‌ ಆದೇಶ ಹೊರಡಿಸಿದ್ದಾರೆ. ಈ ವೆಚ್ಚ ಭರಿಸಿದ್ದು ಹೇಗೆ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷ ಚುನಾವಣಾ ಚಾಣಕ್ಯರ ಕಪಿಮುಷ್ಟಿಗೆ ಸಿಲುಕಿದೆ. ಈ ಚಾಣಕ್ಯರೇ ಕಾಂಗ್ರೆಸ್‌ನ ನೀತಿ ನಿರೂಪಿಸುತ್ತಿದ್ದಾರೆ. ಶಿಕ್ಷಣ ತಜ್ಞರು ನಿರ್ಧರಿಸಬೇಕಾದ ಕನ್ನಡ, ಸಮಾಜ ವಿಜ್ಞಾನದ ತಲಾ 10 ಪಾಠಗಳನ್ನು ತೆಗೆದು ಹಾಕಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದರು. ಪಾಠಗಳನ್ನು ತೆಗೆದು ಹಾಕಿದ ತಿಧ್ದೋಲೆಗಳು ಯಾವುದೇ ಶಾಲೆಯಲ್ಲಿ ಮಕ್ಕಳಿಗೆ ತಲುಪಲಿಲ್ಲವೆಂದು ಆರೋಪಿಸಿದರು.

Advertisement

ಐದು, ಎಂಟು, ಒಂಬತ್ತು ಹಾಗೂ 11ನೇ ತರಗತಿ ಬೋರ್ಡ್‌ ಪರೀಕ್ಷೆ ವಿಚಾರವು ಪಾಲಕರಿಗೆ ತಲೆನೋವಾಗಿ ಪರಿಣಮಿಸಿತು. ಹೈಕೋರ್ಟ್‌, ಸುಪ್ರೀಂ ಕೋರ್ಟ್‌, ವಿಭಾಗೀಯ ಪೀಠದಲ್ಲಿ ಈ ಸಮಸ್ಯೆ ಪ್ರಶ್ನೆಗೆ ಒಳಗಾಯಿತು. ಆಡಳಿತ ನಡೆಸುವವರಿಗೆ ದೃಢತೆ ಇಲ್ಲದ ಪರಿಣಾಮ ಒಂದು ಕೋಟಿ ಮಕ್ಕಳು ಹಾಗೂ ಎರಡು ಕೋಟಿ ಪಾಲಕರು ಆತಂಕಕ್ಕೆ ಒಳಗಾದರು. ಈ ಪರೀಕ್ಷೆಗಳ ಬಗ್ಗೆ ಈಗಲೂ ಸರ್ಕಾರ ದೃಢ ನಿಲುವು ತೆಗೆದುಕೊಂಡಿಲ್ಲ. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಗೆ ಮೂರು ಪರೀಕ್ಷೆಗಳನ್ನು ಮಾಡಲು ಹೊರಟು ಗೊಂದಲ ಸೃಷ್ಟಿಸಿದ್ದಾರೆ. ಶೈಕ್ಷಣಿಕ ದುರಾಡಳಿತ ಕೊನೆಗಾಣಿಸದಿದ್ದರೆ ರಾಜ್ಯಪಠ್ಯಕ್ರಮ ಅಭ್ಯಾಸ ಮಾಡುತ್ತಿರುವ ಒಂದು ಕೋಟಿ ವಿದ್ಯಾರ್ಥಿಗಳು, ಎರಡು ಕೋಟಿ ಪಾಲಕರು ದಂಗೆ ಎಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌, ವಕ್ತಾರೆ ಸುರಭಿ ಹೊದಿಗೆರೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next