Advertisement

ಕುಂಜೂರು ಪಂಜ ಶಾಲೆ ಅಭಿವೃದ್ಧಿಗೆ ಶಿಕ್ಷಣ ಪ್ರೇಮಿಗಳ ನೆರವು

02:06 AM May 24, 2021 | Team Udayavani |

ಪುತ್ತೂರು: ಊರಿನ ಶಾಲೆಯನ್ನು ಕರಸೇವೆ ಮಾದರಿಯಲ್ಲಿ ಕಟ್ಟುವ ಕಾಯಕವು ತಾಲೂಕಿನ ಕೆಲವು ಶಾಲೆಗಳಲ್ಲಿ ನಡೆಯುತ್ತಿದ್ದು ಕುಂಜೂರುಪಂಜ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯು ಆ ಸಾಲಿಗೆ ಸೇರ್ಪಡೆಯಾಗಿದೆ.
ಊರವರು, ಹಳೆ ವಿದ್ಯಾರ್ಥಿಗಳ ನೆರವಿನಿಂದ ಕಟ್ಟಡದ ಛಾವಣಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಸ್ಥಳೀಯ ಶಿಕ್ಷಣ ಪ್ರೇಮಿಗಳ ನೆರವಿನಿಂದ ಏಕದಿನದಲ್ಲೇ ಹಳೆ ಛಾವಣಿ ಬಿಚ್ಚುವ ಕಾರ್ಯ ನಡೆದಿದೆ.

Advertisement

9 ಲಕ್ಷ ರೂ. ಮಿಕ್ಕಿ ವೆಚ್ಚ
1ರಿಂದ 7ನೇ ತರಗತಿ ತನಕ ಇರುವ ಶಾಲೆಯಲ್ಲಿ 76 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯ ಛಾವಣಿ ಶಿಥಿಲಗೊಂಡ ಪರಿಣಾಮ ಹೊಸ ಪರಿಕರಗಳನ್ನು ಅಳವಡಿಸುವ ಕಾರ್ಯ ನಡೆದಿದ್ದು 9 ಲಕ್ಷ ರೂ.ವೆಚ್ಚವಾಗುವ ನಿರೀಕ್ಷೆ ಇದೆ.

ದುರಸ್ತಿ ಅಭಿಯಾನ
72 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯ ಛಾವಣಿ ಶಿಥಿಲಗೊಂಡ ಸ್ಥಿತಿ ಗಮನಿಸಿ ಊರಿನ ಆಸಕ್ತರ ತಂಡವು ದಾನಿಗಳ, ಶಿಕ್ಷಣ ಪ್ರೇಮಿಗಳ, ಸಂಘ ಸಂಸ್ಥೆಗಳ ನೆರವಿನಿಂದ ಪುನರ್‌ ನಿರ್ಮಾಣಕ್ಕೆ ಮುಂದಡಿ ಇಟ್ಟಿತ್ತು. ಗೌರವಾಧ್ಯಕ್ಷ ಶ್ರೀರಾಮ ಭಟ್‌, ಅಧ್ಯಕ್ಷ ಮಹಾಬಲ ರೈ, ಸಂಚಾಲಕ ವಿಶ್ವೇಶ್ವರ ಭಟ್‌ ಬಂಗಾರಡ್ಕ, ಕೋಶಾಧಿಕಾರಿ ಗೋಪಾಲ ಭಟ್‌, ಶಾಲೆ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಕಾರ್ಯದರ್ಶಿ ಪ್ರಭಾಕರ ಕಲ್ಲೂರಾಯ ನೇತೃತ್ವದಲ್ಲಿ ಸಮಿತಿ ರಚಿಸಿ ಯೋಜನೆ ರೂಪಿಸಲಾಯಿತು. ಸಾಮಾಜಿಕ ಜಾಲ ತಾಣ ಮೂಲಕ ಹಳೆ ವಿದ್ಯಾರ್ಥಿಗಳನ್ನು, ಸಂಘ ಸಂಸ್ಥೆಗಳನ್ನು ಸಂಪರ್ಕಿಸುವ ಕಾರ್ಯ ನಡೆದಿದ್ದು ಉತ್ತಮ ಸ್ಪಂದನೆ ವ್ಯಕ್ತವಾಯಿತು.

ವಿವಿಧ ಮೂಲಗಳಿಂದ ನೆರವು
ಶಾಲೆ ಅಭಿವೃದ್ಧಿ ಕೆಲಸಕ್ಕೆ ಊರಿನಲ್ಲಿಯೇ 6 ಲಕ್ಷ ರೂ.ಹಣ ಸಂಗ್ರಹವಾಗಿದೆ. ಉಳಿದಂತೆ ಕರ್ಣಾಟಕ ಬ್ಯಾಂಕ್‌ ವತಿಯಿಂದ 5 ಲಕ್ಷ ರೂ., ತಾ.ಪಂ.ನಿಂದ 1 ಲಕ್ಷ ರೂ., ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ, ಸ್ಥಳೀಯ ಸಹಕಾರ ಸಂಘಗಳು ಕೂಡ ನೆರವು ನೀಡಿದೆ. ಛಾವಣಿ ಅಳವಡಿಕೆ ಕಾಮಗಾರಿಗೆ ಬಳಸಿ ಉಳಿತಾಯವಾದ ಹಣದಲ್ಲಿ ಇಬ್ಬರು ಶಿಕ್ಷಕರನ್ನು ಸಮಿತಿ ವತಿಯಿಂದ ನೇಮಿಸುವ ಯೋಚನೆಯಿದೆ.

ಶಾಲೆ ಅಭಿವೃದ್ಧಿಗೆ ಪೂರಕವಾಗಿ ಸಮಿತಿ ರಚಿಸಿ ಮುಂದಡಿ ಇಟ್ಟಾಗ ಅನೇಕರು ಸಹಕಾರ ನೀಡಿದ್ದಾರೆ. ಆರು ಲಕ್ಷ ರೂ. ಗೂ ಅಧಿಕ ಊರಲ್ಲೇ ಸಂಗ್ರಹವಾಗಿದೆ. ಹೆಚ್ಚಾಗಿ ಸಾಮಾಜಿಕ ಜಾಲ ತಾಣಗಳ ಮೂಲಕವೇ ಸಂಪರ್ಕ ಕಾರ್ಯ ನಡೆದಿದೆ.
– ವಿಶ್ವೇಶ್ವರ ಭಟ್‌ ಬಂಗಾರಡ್ಕ ಸಂಚಾಲಕರು, ಅಭಿವೃದ್ಧಿ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next