ಮೈಸೂರು: ಮಹಿಳೆಯರ ಅನುಕೂಲಕ್ಕಾಗಿ ರೂಪಿಸಿರುವ ಕಾನೂನುಗಳ ಕುರಿತು ಅರಿವು ಮೂಡಿಸುವ ಜತೆಗೆ, ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ನೀಡಬೇಕಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ಜೆ.ಎಂ.ಪಾಟೀಲ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಇಎಂಆರ್‌ಆರ್‌ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ನೆಲೆಯಲ್ಲಿ ಮಾನವ ಹಕ್ಕುಗಳು, ಕರ್ತವ್ಯಗಳು ಮತ್ತು ಶಿಕ್ಷಣ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಗೆ ಸಮಾನತೆ ಹಾಗೂ ಸ್ವಾತಂತ್ರÂವನ್ನು ಒದಗಿಸಬೇಕೆಂಬ ಉದ್ದೇಶದಿಂದ ದೇಶದ ಸಂವಿಧಾನದಲ್ಲಿ ಮಹಿಳೆಯರಿಗಾಗಿ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯರು ಸಮಾಜದಲ್ಲಿ ಘನತೆ ಹಾಗೂ ಯಶಸ್ವಿ ಬದುಕು ಸಾಗಿಸಲು ಮುಖ್ಯವಾಗಿ ಶಿಕ್ಷಣ ಆನಿವಾರ್ಯ.
ಈ ಕಾರಣದಿಂದಲೇ 14 ವರ್ಷದೊಳಗಿನ ಪತ್ರಿಯೊಬ್ಬರಿಗೂ ಶಿಕ್ಷಣ ನೀಡಬೇಕೆಂದು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಿ ಕಡ್ಡಾಯ ಮಾಡಲಾಗಿದೆ. ಇದಲ್ಲದೆ ಮಹಿಳೆಯರಿಗೆ ಅನುಕೂಲವಾಗುವಂತೆ ಅನೇಕ ಕಾನೂನುಗಳು ದೇಶದ ಸಂವಿಧಾನದಲ್ಲಿದ್ದು, ಈ ಕಾನೂನುಗಳ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಿದೆ.
ಜತೆಗೆ ಸಮಾಜದಲ್ಲಿ ಮಹಿಳೆ ಸಮಾನವಾಗಿ ಜೀವನ ನಡೆಸಲು ಲಿಂಗ ಭೇದ, ಶೋಷಣೆ, ದೌರ್ಜನ್ಯ ಮುಕ್ತ ಪರಿಸರ ನಿರ್ಮಿಸುವ ಮೂಲಕ ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಬೇಕಿದೆ ಎಂದರು. ಸಮ್ಮೇಳನ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಮಾತನಾಡಿ, ಸಮಾಜದಲ್ಲಿ ಇಂದಿಗೂ ಗಂಡು-ಹೆಣ್ಣಿನ ನಡುವೆ ದೊಡ್ಡ ಕಂದಕವಿದೆ.
ಅದರ ನಿವಾರಣೆ ಶಿಕ್ಷಣ, ಸಮಾನತೆ ಪರಿಕಲ್ಪನೆ, ಸಮಾನ ಅವಕಾಶಗಳಿಂದ ಮಾತ್ರವೇ ಸಾಧ್ಯ. ಅಲ್ಲದೆ ರಾಷ್ಟ್ರೀಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಮಹಿಳೆಯ ಸಮಾನ ಹಕ್ಕುಗಳಿಗಾಗಿ ಸಾರ್ವಜನಿಕ ವಲಯದಲ್ಲಿ ಹೊಸ ಚಿಂತನೆಗಳನ್ನು ಹುಟ್ಟಿಹಾಕಿದರು. ಮಹಿಳೆಯರ ಇದನ್ನು ಅನುಸರಿಸಿದರೆ ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಬಾಗದ ಮುಖ್ಯಸ್ಥ ಪಿ.ರಮೇಶ್ ಇತರರು ಪಾಲ್ಗೊಂಡಿದ್ದರು.